ಸುಬ್ರಮಣಿಯನ್​ ಸ್ವಾಮಿ ವಿಷದ ಮಾತು! ಏನು ಹೇಳಿದ್ದಾರೆ ಗೊತ್ತಾ ಸ್ವಾಮಿ?

ದೆಹಲಿ: ಸುಬ್ರಮಣಿಯನ್​ ಸ್ವಾಮಿ ಎನ್ನುತ್ತಲೇ ಮೊದಲು ನೆನಪಾಗುವುದು ಅವರ ಸುತ್ತಲಿನ ವಿವಾದ ಮತ್ತು ಕಿಡಿಕಾರುವ ಮಾತುಗಳು. ಇತ್ತೀಚೆಗೆ ತಮ್ಮ ಟೀಕೆ ಟಿಪ್ಪಣಿಗಳಿಗೆ ಟ್ವಿಟರ್​ ಅನ್ನು ವೇದಿಕೆ ಮಾಡಿಕೊಂಡಿರುವ ಸ್ವಾಮಿ, ಅದರ ಮೂಲಕವೇ ವಿರೋಧಿಗಳನ್ನು ತಿವಿಯುತ್ತಾರೆ. ಒಮ್ಮೊಮ್ಮೆ ಅವರ ಟ್ವೀಟ್​ ಮಾತುಗಳು ಅತಿರೇಕಕ್ಕೂ ಹೋಗಿದ್ದಿದೆ.

ರಾಹುಲ್​ ಗಾಂಧಿ, ಮೋದಿಗೆ ವಿಷ ನೀಡುವ ಪ್ರಯತ್ನಕ್ಕೆ ಕೈ ಹಾಕಿದ್ದರೂ ಹಾಕಿರಬಹುದು ಎನ್ನುವ ಧಾಟಿಯಲ್ಲಿ ಸ್ವಾಮಿ ಮಾತನಾಡಿದ್ದಾರೆ. ಈ ಮೂಲಕ ರಾಹುಲ್​ ಗಾಂಧಿ ಅವರನ್ನು ಟೀಕಿಸುವ ಭರದಲ್ಲಿ ರಾಗಾ ಮೇಲೆ ಕಿಡಿ ಕಾರಿದ್ದಾರೆ.

ನಿನ್ನೆ ಲೋಕಸಭೆಯ ಕಲಾಪದಲ್ಲಿ ಮಾತನಾಡುತ್ತಿದ್ದ ರಾಹುಲ್​ ಗಾಂಧಿ ಅವರು, ” ನನ್ನನ್ನು ಪಪ್ಪು ಎಂದು ಕರೆಯುವ ನಿಮಗೆ(ಬಿಜೆಪಿ) ನನ್ನ ಮೇಲೆ ದ್ವೇಷವಿರಬಹುದು. ಆದರೆ, ನನ್ನ ಮನಸ್ಸಿನಲ್ಲಿ ನಿಮ್ಮ ಮೇಲೆ ದ್ವೇಷವಿಲ್ಲ. ನಾನು ಕಾಂಗ್ರೆಸ್​,” ಎಂದು ಮಾತು ಮುಗಿಸಿ ಮೋದಿ ಅವರ ಬಳಿಗೆ ತೆರಳಿ ಅವರನ್ನು ಅಪ್ಪಿಕೊಂಡರು. ನಿನ್ನೆ ನಡೆದ ಆ ಘಟನೆಯನ್ನೇ ನೆಪ ಮಾಡಿಕೊಂಡಿರುವ ಸ್ವಾಮಿ ಇಂದು ವಿವಾದಿತ ಟ್ವೀಟ್​ವೊಂದನ್ನು ಪ್ರಕಟಿಸಿದ್ದಾರೆ.

“ಬುದ್ದು (ರಾಹುಲ್​ ಗಾಂಧಿ) ತಬ್ಬಿಕೊಳ್ಳಲು ನರೇಂದ್ರ ಮೋದಿ ಅವರು ಅವಕಾಶ ನೀಡಬಾರದಿತ್ತು. ವಿಷದ ಸೂಜಿ ಚುಚ್ಚಲು ರಷ್ಯಾ ಮತ್ತು ಕೊರಿಯನ್ನರು ಅಪ್ಪಿಕೊಳ್ಳುವ ತಂತ್ರವನ್ನು ಬಳಸಿಕೊಳ್ಳುತ್ತಾರೆ. ಸುನಂದಾ ಪುಷ್ಕರ್​ ಕೈ ಮೇಲೆ ಸೂಜಿ ತಿವಿತದಿಂದ ಆಗಿದ್ದ ಸಣ್ಣದಾದ ತೂತೇನಾದರೂ ತಮಗೂ ಆಗಿದೆಯೇ ಎಂಬುದನ್ನು ಪರೀಕ್ಷಿಸಿಕೊಳ್ಳಲು ಮೋದಿ ಅವರು ಈ ಕೂಡಲೇ ವೈದ್ಯಕೀಯ ಪರೀಕ್ಷೆಗೆ ಒಳಪಡಬೇಕು,” ಎಂದು ಅವರು ಟ್ವೀಟ್​ ಮಾಡಿದ್ದಾರೆ.

ಒಂದೆಡೆ ರಾಹುಲ್​ ಗಾಂಧಿ ವಿಷ ನೀಡುವ ಕೆಲಸ ಮಾಡುತ್ತಾರೆ ಎಂದು ಪರೋಕ್ಷವಾಗಿ ಹೇಳಿರುವ ಸ್ವಾಮಿ, ಸುನಂದಾ ಪುಷ್ಕರ್​ ಅವರ ಸಾವಿನ ಬಗ್ಗೆ ತಮ್ಮದೇ ದೃಷ್ಟಿಕೋನದಲ್ಲಿ ಅನುಮಾನವನ್ನೂ ವ್ಯಕ್ತಪಡಿಸಿದ್ದಾರೆ. ಈ ಮೂಲಕ ರಾಹುಲ್​ ಗಾಂಧಿ ಮತ್ತು ಶಶಿ ತರೂರ್​ ಮೇಲೆ ಅನುಮಾನದ ಕಣ್ಣು ನೆಡಲು ಕಾರಣರಾಗಿದ್ದಾರೆ.