More

  ಕಾಮಗಾರಿಗಳ ಪ್ರಸ್ತಾವನೆ ಸಲ್ಲಿಸಿ

  ಹುಣಸೂರು: ಆದಿವಾಸಿ ಗಿರಿಜನ ಹಾಡಿಗಳ ಸಮಗ್ರ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ವಿಶೇಷವಾಗಿ ರೂಪಿಸಿರುವ ಪಿಎಂ ಜನಮನ ಯೋಜನೆಯನ್ನು ಸಮರ್ಪಕವಾಗಿ ಕಾರ್ಯರೂಪಕ್ಕೆ ತರಬೇಕು ಎಂದು ಶಾಸಕ ಜಿ.ಡಿ.ಹರೀಶ್‌ಗೌಡ ಅಧಿಕಾರಿಗಳಿಗೆ ಸೂಚಿಸಿದರು.

  ನಗರದ ನಗರಸಭಾ ಸಭಾಂಗಣದಲ್ಲಿ ಶನಿವಾರ ಪಿಎಂ ಜನಮನ ಯೋಜನೆಯಡಿ ವಿವಿಧ ಅಭಿವೃದ್ಧಿ ಕಾಮಗಾರಿ ಕೈಗೊಳ್ಳುವ ಸಂಬಂಧ ಕುರಿತು ಆಯೋಜಿಸಿದ್ದ ಅಧಿಕಾರಿಗಳ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪಿಎಂ ಜನಮನ ಯೋಜನೆಯು ಈ ಭಾಗದ ಜೇನುಕುರುಬ ಸಮುದಾಯದ ಅಭಿವೃದ್ಧಿಗಾಗಿ ರೂಪಿತಗೊಂಡಿದೆ. ಯೋಜನೆಯ ಎರಡನೇ ಹಂತದ ಕಾಮಗಾರಿ ಶೀಘ್ರವೇ ಆರಂಭಗೊಳ್ಳಲಿದ್ದು, ತಾಲೂಕಿನ 37 ಹಾಡಿಗಳಲ್ಲಿ ಆಗಬೇಕಾದ ಅಭಿವೃದ್ಧಿ ಕಾಮಗಾರಿಗಳನ್ನು ಅಧಿಕಾರಿಗಳು ಶೀಘ್ರ ಗುರುತಿಸಿ ಪ್ರಸ್ತಾವನೆ ಸಲ್ಲಿಸಬೇಕು. ಮುಖ್ಯವಾಗಿ ರಸ್ತೆ, ವಸತಿ ಮತ್ತು ವಿದ್ಯುತ್ ಕ್ಷೇತ್ರಗಳಿಗೆ ಸಂಬಂಧಿಸಿದ ಕಾಮಗಾರಿಗಳ ಕುರಿತು ಹೆಚ್ಚಿನ ಪ್ರಾಮುಖ್ಯ ನೀಡಬೇಕು ಎಂದು ಹೇಳಿದರು.

  ಪ್ರಸ್ತಾವನೆಗಳನ್ನು ಅಪ್‌ಲೋಡ್ ಮಾಡಿ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ತಲುಪಿರುವ ಬಗ್ಗೆ ವರದಿ ಸಲ್ಲಿಸಬೇಕು. ಬಳಿಕ ಸರ್ಕಾರದ ಮಟ್ಟಕ್ಕೆ ತಲುಪಿದ ನಂತರ ಅದನ್ನು ಕಾರ್ಯರೂಪಕ್ಕೆ ತರಲು ಕ್ರಮವಹಿಸುತ್ತೇನೆ. ಆದ್ದರಿಂದ ಪ್ರಸ್ತಾವನೆ ತಯಾರಿಸಿ ನಿಮ್ಮ ಇಲಾಖೆಗೆ ಅಪ್‌ಲೋಡ್ ಮಾಡಬೇಕು ಎಂದು ತಾಕೀತು ಮಾಡಿದರು.

  ಲಿಂಕ್ ರಸ್ತೆಗಳ ಅಭಿವೃದ್ಧಿ: ಪಿಎಂಜಿಎಸ್‌ವೈ ಯೋಜನೆಯಡಿ ಹಾಡಿಗಳನ್ನು ಸಂಪರ್ಕಿಸುವ ರಸ್ತೆಗಳ ಅಭಿವೃದ್ಧಿಗೆ ಅಧಿಕಾರಿಗಳು ಕ್ರಮವಹಿಸಬೇಕು. ಒಂದು ಹಾಡಿಗೆ ಒಂದೇ ಲಿಂಕ್ ರಸ್ತೆ ಎಂದು ಕುಳಿತಲ್ಲೇ ತೀರ್ಮಾನಿಸದೆ, ಎಲ್ಲ 37 ಹಾಡಿಗಳಿಗೂ ಭೇಟಿ ನೀಡಿ ರಸ್ತೆಗಳ ಪರಿಶೀಲನೆ ನಡೆಸಬೇಕು. ಹಾಡಿಯೊಂದಕ್ಕೆ 2-3 ಸಂಪರ್ಕ ರಸ್ತೆಗಳಿದ್ದರೆ ಎಲ್ಲವನ್ನೂ ಪ್ರಸ್ತಾವನೆಯಲ್ಲಿ ಸೇರಿಸಬೇಕು. ತಾಲೂಕಿನ ದೊಡ್ಡಹೆಜ್ಜೂರು, ನೇರಳಕುಪ್ಪೆ, ಕರಣಕುಪ್ಪೆ ಮುಂತಾದ ಭಾಗಗಳ ಹಾಡಿಗಳಲ್ಲಿ ರಸ್ತೆ ಅತ್ಯಂತ ದುಸ್ಥಿತಿಯಲ್ಲಿರುವ ಬಗ್ಗೆ ಗಮನ ಇರಲಿ ಎಂದು ಹೇಳಿದರು. ಸಭೆಯಲ್ಲಿ ತಹಸೀಲ್ದಾರ್ ಮಂಜುನಾಥ್, ಗಿರಿಜನ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಸವರಾಜು, ಪಿಎಂಜಿಎಸ್‌ವೈ ಇಇ ನಂದೀಶ್, ಎಇಇ ವಸಂತ್‌ಕುಮಾರ್ ಮತ್ತು ಇತರ ಇಲಾಖೆ ಅಧಿಕಾರಿಗಳು ಹಾಜರಿದ್ದರು.

  934 ಮನೆಗಳ ನಿರ್ಮಾಣ
  ಯೋಜನೆಯಡಿ ಆದಿವಾಸಿಗಳಿಗೆ ವಸತಿ ಕಲ್ಪಿಸಲು ಕೇಂದ್ರ ಸರ್ಕಾರ ಸೂಚಿಸಿದ್ದು, 934 ಮನೆಗಳ ನಿರ್ಮಾಣಕ್ಕೆ ಹಸಿರು ನಿಶಾನೆ ನೀಡಿದೆ. ಈವರೆಗೆ 500 ಫಲಾನುಭವಿಗಳನ್ನು ಗುರುತಿಸಲಾಗಿದ್ದು, ಕಾಮಗಾರಿ ಆರಂಭಕ್ಕೂ ಮುನ್ನವೇ ಫಲಾನುಭವಿಯ ಖಾತೆಗೆ 2.39 ಲಕ್ಷ ರೂ.ಗಳ ಆರ್ಥಿಕ ಅನುದಾನ ಜಮಾ ಆಗಲಿದೆ. ಹಂತಹಂತವಾಗಿ ಅನುದಾನ ಬಿಡುಗಡೆ ಮಾಡಿದಲ್ಲಿ ಫಲಾನುಭವಿಯು ಮನೆ ಕಟ್ಟಿಕೊಳ್ಳಲು ಸಾಧ್ಯ. ಅಲ್ಲದೆ ಒಂದೇ ಬಾರಿ ಅನುದಾನ ನೀಡಿದಲ್ಲಿ ವಸತಿ ಯೋಜನೆ ಸಫಲತೆ ಪಡೆಯಲು ಸಾಧ್ಯವಿಲ್ಲ. ಈ ಕುರಿತು ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು
  ಜಿ.ಡಿ.ಹರೀಶ್‌ಗೌಡ, ಶಾಸಕ

  ವಿದ್ಯುತ್ ಸಂಪರ್ಕಕ್ಕೆ ಆದ್ಯತೆ
  ಸೆಸ್ಕ್ ಎಇಇ ಸಿದ್ದಪ್ಪ ಮಾತನಾಡಿ, ಆದಿವಾಸಿ ಯೋಜನೆಯಡಿ ಸೋಲಾರ್ ಬೀದಿದೀಪಗಳು, ಟಿಸಿ ಮತ್ತು ವಿದ್ಯುತ್ ಕಂಬಗಳನ್ನು ಒದಗಿಸಲು ಕೇಂದ್ರ ಸರ್ಕಾರ ಅನುದಾನ ನೀಡುತ್ತಿದೆ. ಅವಶ್ಯಕ ಸಂಖ್ಯೆಗಳ ಬೀದಿದೀಪಗಳು, ಕಂಬಗಳು ಎಲ್ಲವನ್ನೂ ಸಮಗ್ರವಾಗಿ ಪರಿಶೀಲಿಸಿ ಅಪ್‌ಲೋಡ್ ಮಾಡಲಾಗುವುದು ಎಂದು ಹೇಳಿದರು. ಈ ವೇಳೆ ಮಧ್ಯೆ ಪ್ರವೇಶಿಸಿದ ಶಾಸಕ ಜಿ.ಡಿ.ಹರೀಶ್‌ಗೌಡ, ಬೀದಿದೀಪಗಳನ್ನು ಅಳವಡಿಸುವ ವೇಳೆ ಅಕ್ಕಪಕ್ಕದ ರಸ್ತೆಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂದು ಸಲಹೆ ನೀಡಿದರು.

  ವೃತ್ತಿಪರ ತರಬೇತಿ ಕೇಂದ್ರ ಸ್ಥಾಪನೆ
  ಕ್ಷೇತ್ರ ಸಮನ್ವಯಾಧಿಕಾರಿ ಕೆ.ಸಂತೋಷ್‌ಕುಮಾರ್ ಮಾತನಾಡಿ, ಶಿಕ್ಷಣ ಇಲಾಖೆಯಿಂದ ಆದಿವಾಸಿಗಳಿಗಾಗಿ ಒಂದು ವಸತಿನಿಲಯ ಸ್ಥಾಪನೆಗೆ ಪ್ರಸ್ತಾವನೆ ಸಲ್ಲಿಸಲು ಉದ್ದೇಶಿಸಲಾಗಿದೆ. ನೇರಳಕುಪ್ಪೆಯಲ್ಲಿ ವಸತಿ ನಿಲಯ ಸ್ಥಾಪಿಸಲು ಸ್ಥಳ ಗುರುತಿಸಲಾಗಿದೆ. ತಾಲೂಕಿನ 37 ಹಾಡಿಗಳಲ್ಲಿ 11 ಸರ್ಕಾರಿ ಶಾಲೆಗಳಿದ್ದು, 1248 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. 2022ರಿಂದ 24ರ ಅವಧಿಯಲ್ಲಿ ಒಟ್ಟು 22 ವಿದ್ಯಾರ್ಥಿಗಳು ಶಾಲೆ ಬಿಟ್ಟಿದ್ದು, ಈ ಪೈಕಿ 6 ವಿದ್ಯಾರ್ಥಿಗಳನ್ನು ಮತ್ತೆ ಶಾಲೆಗೆ ಸೇರಿಸಲಾಗಿದೆ. ಉಳಿದ ಮಕ್ಕಳಿಗೆ ಕೌಶಲ ತರಬೇತಿ ನೀಡಲು ಉದ್ದೇಶಿಸಲಾಗಿದೆ. ಆದಿವಾಸಿ ಮಕ್ಕಳಿಗಾಗಿ ಅಯ್ಯನಕೆರೆ ಹಾಡಿಯ ಬಳಿ 115 ಲಕ್ಷ ರೂ.ಗಳ ವೆಚ್ಚದಲ್ಲಿ ವೃತ್ತಿಪರ ತರಬೇತಿ ಕೇಂದ್ರ ಸ್ಥಾಪನೆಗೆ ಪ್ರಸ್ತಾವನೆ ಸಲ್ಲಿಸಲು ಉದ್ದೇಶಿಸಲಾಗಿದೆ ಎಂದರು.
  ಈ ವೇಳೆ ಮಾತನಾಡಿದ ಶಾಸಕ ಜಿ.ಡಿ.ಹರೀಶ್‌ಗೌಡ, ಎಲ್ಲ ಆದಿವಾಸಿ ಶಾಲೆಗಳಲ್ಲಿ ಮೂಲಸೌಕರ್ಯ ಕಲ್ಪಿಸುವ ಬಗ್ಗೆ ಪ್ರಸ್ತಾವನೆ ಸಲ್ಲಿಸಬೇಕು. ವಿದ್ಯಾರ್ಥಿನಿಲಯ ಮತ್ತು ಕೌಶಲ ತರಬೇತಿ ಕೇಂದ್ರಗಳು ಕಾಡಂಚಿನ ಭಾಗದಲ್ಲಿರುವುದು ಕ್ಷೇಮವಲ್ಲ. ಈ ಕುರಿತು ಮರುಪರಿಶೀಲನೆ ನಡೆಸಿ ಎಂದು ಸೂಚಿಸಿದರು.

  ಆಸ್ಪತ್ರೆಗಳು ಮೇಲ್ದರ್ಜೆಗೆ
  ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವ ಮತ್ತು ತುರ್ತುವಾಹನ ಪಡೆಯಲು ಅವಕಾಶವಿದ್ದು, ಯಾವುದಕ್ಕೆ ಪ್ರಸ್ತಾಪ ಸಲ್ಲಿಸುತ್ತೀರಿ ಎಂದು ತಾಲೂಕು ಆರೋಗ್ಯಾಧಿಕಾರಿಗಳನ್ನು ಶಾಸಕರು ಪ್ರಶ್ನಿಸಿದಾಗ, ಒಂದು ಗಿರಿಜನ ಮೊಬೈಲ್ ಯೂನಿಟ್ ಹಾಗೂ ಎರಡು ತುರ್ತುವಾಹನಕ್ಕೆ ಪ್ರಸ್ತಾಪ ಸಲ್ಲಿಸಲಾಗುವುದೆಂದು ತಿಳಿಸಿದರು. ತಾಲೂಕಿನ ತಾಲೂಕಿನ ಧರ್ಮಾಪುರ, ರಂಗಯ್ಯನಕೊಪ್ಪಲು, ಹನಗೋಡು ಮತ್ತು ದೊಡ್ಡಹೆಜ್ಜೂರುಗಳ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೆ ಏರಿಸಲು ಪ್ರಸ್ತಾವನೆ ಸಲ್ಲಿಸಬೇಕೆಂದು ಶಾಸಕರು ಸೂಚಿಸಿದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts