ಜಲಾವೃತಗೊಂಡ ಸೇತುವೆಗಳು ಸಂಚಾರಕ್ಕೆ ಮುಕ್ತ

ಚಿಕ್ಕೋಡಿ: ಚಿಕ್ಕೋಡಿ ತಾಲೂಕಿನ ಯಡೂರ-ಕಲ್ಲೋಳ ಬಳಿ ಇರುವ ಸೇತುವೆ ಹತ್ತಿರ ಮಂಗಳವಾರ ಬೆಳಗ್ಗೆ 6 ಅಡಿಗಳಷ್ಟು ನೀರು ಇಳಿಕೆ ಕಂಡಿರುವುದರಿಂದ ಬುಧವಾರದ ವೇಳಗೆ ಜಲಾವೃತಗೊಂಡ ಎಲ್ಲ ಸೇತುವೆಗಳು (ಬ್ಯಾರೇಜ್) ಸಂಚಾರಕ್ಕೆ ಮುಕ್ತವಾಗಲಿವೆ.

15 ದಿನಗಳಿಂದ ಮಹಾರಾಷ್ಟ್ರದ ಕೊಂಕಣ ಭಾಗವಾದ ಕೋಯ್ನ, ಮಹಾಬಳೇಶ್ವರ, ನವಜಾ, ರಾಧಾನಗರಿ ಮತ್ತು ಕಾಳಮ್ಮವಾಡಿ ಪ್ರದೇಶದಲ್ಲಿ ಸುರಿಯುತ್ತಿರುವ ಮಳೆ ಪ್ರಮಾಣ ಕಡಿಮೆಯಾಗಿದ್ದು, ಚಿಕ್ಕೋಡಿ ತಾಲೂಕಿನ ಕೃಷ್ಣಾ, ದೂಧಗಂಗಾ ಮತ್ತು ವೇದಗಂಗಾ ನದಿಗಳ ನೀರಿನ ಮಟ್ಟದಲ್ಲಿ ಅಪಾರ ಪ್ರಮಾಣದಲ್ಲಿ ಇಳಿಕೆ ಕಂಡಿದ್ದು, 8 ಸೇತುವೆಗಳಲ್ಲಿ 6 ಸೇತುವೆಗಳು ಸಂಚಾರಕ್ಕೆ ಮುಕ್ತವಾಗಿವೆ.

ಮಹಾರಾಷ್ಟ್ರದ ರಾಜಾಪುರ ಬ್ಯಾರೇಜ್‌ದಿಂದ ರಾಜ್ಯಕ್ಕೆ 33,317 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ದೂಧಗಂಗಾ ಮತ್ತು ವೇಧಗಂಗಾ ನದಿಯಿಂದ 9,801 ಕ್ಯೂಸೆಕ ನೀರು ಹರಿದು ಕೃಷ್ಣಾ ನದಿಗೆ ಬರುತ್ತಿದ್ದು, ಇದರಿಂದ ಚಿಕ್ಕೋಡಿ ತಾಲೂಕಿನ ಕಲ್ಲೋಳ ಹತ್ತಿರ ಕೃಷ್ಣಾ ನದಿಗೆ ಒಟ್ಟು 43,118 ಕ್ಯೂಸೆಕ್ ನೀರು ಹರಿದು ಬರುತ್ತಿದೆ.

ಜಮಖಂಡಿ ತಾಲೂಕಿನ ಹಿಪ್ಪರಗಿ ಜಲಾಶಯದಿಂದ 54 ಸಾವಿರಕ್ಕೂ ಹೆಚ್ಚಿನ ಕ್ಯೂಸೆಕ್ ನೀರನ್ನು ಆಲಮಟ್ಟಿ ಜಲಾಶಯಕ್ಕೆ ಹರಿ ಬಿಡಲಾಗುತ್ತಿದೆ. ಮಹಾರಾಷ್ಟ್ರದಿಂದ ಬರುವ ನೀರಿನ ಪ್ರಮಾಣಕ್ಕಿಂತ ಹೆಚ್ಚಿಗೆ ನೀರನ್ನು ಹಿಪ್ಪರಗಿ ಬ್ಯಾರೇಜ್ ಮೂಲಕ ಆಲಮಟ್ಟಿ ಆಣೆಕಟ್ಟಿಗೆ ಹರಿಬಿಡಲಾಗುತ್ತಿದೆ. ಹೀಗಾಗಿ ನದಿ ತೀರದ ಜನರಿಗೆ ಯಾವುದೇ ರೀತಿಯ ಅನಾಹುತ ಸಂಭವಿಸುವುದಿಲ್ಲ ಎಂದು ತಹಸೀಲ್ದಾರ ಡಾ.ಸಂತೋಷ ಬಿರಾದಾರ ತಿಳಿಸಿದ್ದಾರೆ.

ಮಹಾರಾಷ್ಟ್ರದ ಮಳೆ ಪ್ರಮಾಣ: ಕೋಯ್ನ-41 ಮಿ.ಮೀ., ವಾರಣಾ-13ಮಿ.ಮೀ., ಕಾಳಮ್ಮವಾಡಿ- 59 ಮಿ.ಮೀ., ನವಜಾ-44 ಸಾಂಗಲಿ-1 ಮಿ.ಮೀ., ರಾಧಾನಗರಿ-32 ಮಿ.ಮೀ., ಪಾಟಗಾಂವ-55 ಮಿ.ಮೀ., ಮಹಾಬಲೇಶ್ವರ-37 ಮಿ.ಮೀ., ಕೊಲ್ಲಾಪುರ-5 ಮಿ.ಮೀ. ಈ ರೀತಿ ಮಹಾರಾಷ್ಟ್ರದಲ್ಲಿ ಮಳೆ ಆಗಿದೆ.

Leave a Reply

Your email address will not be published. Required fields are marked *