ಬೇಲೂರು: ದಿನದಿಂದ ದಿನಕ್ಕೆ ಕಾಡಾನೆಗಳ ಉಪಟಳ ಮಲೆನಾಡು ಭಾಗದ ಗ್ರಾಮಗಳಲ್ಲಿ ಮಿತಿ ಮೀರಿದ್ದು ನಿತ್ಯ ಒಂದಿಲ್ಲೊಂದು ಗ್ರಾಮಕ್ಕೆ ನುಗ್ಗಿ ಬೆಳೆ ತಿಂದು, ತುಳಿದು ನಾಶಪಡಿಸುತ್ತಿದ್ದು, ಬುಧವಾರ ರಾತ್ರಿ ತಾಲೂಕಿನ ಅರೇಹಳ್ಳಿ ಹೊಬಳಿಯ ಬೊಮ್ಮೇನಹಳ್ಳಿ-ಕುಪ್ಪಗೋಡು ಗ್ರಾಮದ ತೋಟ, ಭತ್ತದ ಗದ್ದೆಗಳಿಗೆ ನುಗ್ಗಿ ಬೆಳೆ ನಾಶಪಡಿಸಿವೆ.
ಬಿಕ್ಕೋಡು ಹೋಬಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ನಾಲ್ಕೈದು ತಿಂಗಳಿಂದ ಬೀಡು ಬಿಟ್ಟಿರುವ ಕಾಡಾನೆಗಳ ಹಿಂಡಿನ ಉಪಟಳ ಹೇಳತೀರದಾಗಿದೆ. ಇದರೊಂದಿಗೆ ಮತ್ತೊಂದು ಗುಂಪಿನ ಕಾಡಾನೆಗಳು ಅರೇಹಳ್ಳಿ ಹೋಬಳಿಯ ದೊಡ್ಡ ಸಾಲವರದ ವೈ.ಎನ್.ಕೃಷ್ಣೇಗೌಡರ ತೋಟದಲ್ಲಿ ಕೆಲ ದಿನಗಳಿಂದ ಬೀಡು ಬಿಟ್ಟಿದ್ದು, ಇದೀಗ ಅವುಗಳ ಪೈಕಿ ಕೆಲ ಆನೆಗಳು ಹಿಂಡಿನಿಂದ ಬೇರ್ಪಟ್ಟು ಕೋಗೋಡು ಮೂಲಕ ಬೊಮ್ಮೇನಹಳ್ಳಿ, ಕುಪ್ಪಗೋಡು, ಮಳಲ ಕೆಶವಿ ಸೇರಿದಂತೆ ಅಕ್ಕಪಕ್ಕದ ಗ್ರಾಮಗಳ ತೋಟ, ಗದ್ದೆಗಳಿಗೆ ನುಗ್ಗುತ್ತಿವೆ. ಇದರಿಂದ ಈ ಭಾಗದ 10ಕ್ಕೂ, ಹೆಚ್ಚು ತೋಟಗಳಲ್ಲಿ ಬೆಳೆ ನಾಶವಾದರೆ, ಕುಪ್ಪಗೋಡು ಗ್ರಾಮದ ರೈತರಾದ ರಾಮೇಗೌಡ, ರವಿ, ಉತ್ತಪ್ಪಗೌಡ ಸೇರಿದಂತೆ ಇತರರಿಗೆ ಸೇರಿದ ಕೊಯ್ಲಿಗೆ ಬಂದಿದ್ದ ಭತ್ತದ ಗದ್ದೆಗಳಿಗೆ ಆನೆಗಳು ಹಿಂಡಾಗಿ ನುಗ್ಗಿ ಬೆಳೆ ತಿಂದು ತುಳಿದು ನಾಶ ಪಡಿಸಿವೆ. ಕಾಫಿ ತೋಟಗಳಲ್ಲಿ ಕಾಫಿ, ಅಡಕೆ, ಶುಂಠಿ ಬೆಳೆಗಳನ್ನು ನಾಶ ಪಡಿಸುತ್ತಿರುವುದಲ್ಲದೆ ತುಳಿದು ಹಾಳು ಮಾಡುತ್ತಿವೆ.
ಇದರಿಂದಾಗಿ ರೈತರು ಬೆಳೆದ ಬೆಳೆ ಕೈ ಸೇರುವ ಮುನ್ನವೇ ಮಣ್ಣು ಪಾಲಾಗುತ್ತಿದೆ. ಅಲ್ಲದೆ ಬೆಳೆ ನಷ್ಟದ ಜತೆಗೆ ಜನರು ಜೀವದ ಹಂಗನ್ನು ತೊರೆದು ಓಡಾಡುವಂತಾಗಿದೆ. ಬುಧವಾರ ರಾತ್ರಿ ಬೊಮ್ಮೇನಹಳ್ಳಿಯ ಸಂತೋಷ್ ಅವರ ತೋಟದೊಳಕ್ಕೆ ಹಿಂಡು ಹಿಂಡಾಗಿ ಕಾಡಾನೆಗಳು ನುಗ್ಗಿದ್ದರಿಂದ ತೋಟದೊಳಗೆ ದೊಡ್ಡ ರಸ್ತೆ ಮಾಡಿದಂತಾಗಿದ್ದು, ಅಕ್ಕಪಕ್ಕದ ಕಾಫಿ, ಅಡಕೆ ಗಿಡಗಳು ನೆಲ ಕಚ್ಚಿವೆ. ಅಲ್ಲದೆ ತೋಟ ಜಮೀನುಗಳಲ್ಲಿ ನೀರು ಹಾಯಿಸಲು ಅಳವಡಿಸಿದ್ದ ಪೈಪ್‌ಗಳು ಸೇರಿದಂತೆ ಇತರ ಸಾಮಗ್ರಿಗಳನ್ನು ನಾಶ ಪಡಿಸುತ್ತಿವೆ.
ಕಾಡಾನೆಗಳು ಆಹಾರ ಅರಸಿ ದಿನದಿಂದ ದಿನಕ್ಕೆ ಒಂದು ಊರಿನಿಂದ ಮತ್ತೊಂದು ಊರಿಗೆ ಹಿಂಡಿನಲ್ಲಿ ತೆರಳುತ್ತಿರುವುದರಿಂದ ರೈತರು ಬೆಳೆ ನಷ್ಟ ಅನುಭವಿಸುವುದರೊಂದಿಗೆ ಜೀವ ಭಯದಲ್ಲೇ ಓಡಾಡುವಂತಾಗಿದೆ. ಇನ್ನಾದರೂ ಸಂಬಂಧಿಸಿದ ಜನಪ್ರತಿನಿಧಿಗಳು, ಅಧಿಕಾರಿಗಳು ಮಲೆನಾಡು ಭಾಗದಲ್ಲಿ ಕಾಡಾನೆಗಳಿಂದ ರೈತರಿಗಾಗುತ್ತಿರುವ ನಷ್ಟವನ್ನು ತಪ್ಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕಿದೆ ಎನ್ನುತ್ತಾರೆ ಮಲೆನಾಡು ಭಾಗದ ಗ್ರಾಮಸ್ಥರು.