ಶಿಕ್ಷಕರು ಮತ್ತು ಹಳೇ ವಿದ್ಯಾರ್ಥಿ ಸಂಘದ ಪ್ರಯತ್ನ, ಹಂಗರವಳ್ಳಿ ಶಾಲೆಯಲ್ಲಿ ಎಲ್​ಕೆಜಿ, ಯುಕೆಜಿ

ಚಿಕ್ಕಮಗಳೂರು: ಸರ್ಕಾರಿ ಶಾಲೆಗಳನ್ನು ಉಳಿಸುವ ಸಲುವಾಗಿ ಗ್ರಾಮಸ್ಥರು, ಶಿಕ್ಷಕರು ಮತ್ತು ಹಳೇ ವಿದ್ಯಾರ್ಥಿಗಳ ಸಂಘದವರು ಒಗ್ಗೂಡಿ ಎಲ್​ಕೆಜಿ, ಯುಕೆಜಿ ಆರಂಭಿಸಿ ಹೊಸ ಶೈಕ್ಷಣಿಕ ಅಭಿಯಾನದ ಭಾಷ್ಯ ಬರೆದಿದ್ದಾರೆ.

ಆಂಗ್ಲ ಭಾಷೆ ಮೇಲಿನ ವ್ಯಾಮೋಹದಿಂದ ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಸೇರಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ಅದಕ್ಕೆ ಸೆಡ್ಡು ಹೊಡೆದು ಗ್ರಾಮೀಣ ಮಕ್ಕಳಿಗೂ ಸರ್ಕಾರಿ ಶಾಲೆಯಲ್ಲಿ ಆರಂಭಿಕ ಶಿಕ್ಷಣದಲ್ಲೇ ಇಂಗ್ಲಿಷ್ ಕಲಿಸಲು ಹಳೇ ವಿದ್ಯಾರ್ಥಿಗಳ ಜತೆಗೆ ಗ್ರಾಮಸ್ಥರು ಕೈಜೋಡಿಸಿರುವುದು ವಿನೂತನ ಬೆಳವಣಿಗೆ.

ಈ ಪ್ರಯತ್ನ ನಡೆದಿರುವುದು ಆಲ್ದೂರು ಸಮೀಪದ ಹಂಗರವಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ. ಶಾಲೆಗೆ ಬರುವ ವಿದ್ಯಾರ್ಥಿಗಳಿಗೆ ಬಸ್ ವ್ಯವಸ್ಥೆ, ಸಮವಸ್ತ್ರ, ಸ್ಮಾರ್ಟ್ ಕ್ಲಾಸ್ ಸೇರಿ ಖಾಸಗಿ ಶಿಕ್ಷಣ ಸಂಸ್ಥೆಗಳಂತೆಯೇ ಹಲವು ಪ್ರಯೋಗ ನಡೆಸುವ ಜತೆಗೆ ಉನ್ನತ ಶಿಕ್ಷಣ ಹೊಂದಿರುವ ಹಳೇ ವಿದ್ಯಾರ್ಥಿಗಳು ಶಾಲೆಯ ಮಕ್ಕಳಿಗೆ ಉಚಿತ ತರಬೇತಿ ನೀಡುವ ಗುರಿ ಹೊಂದಿದ್ದಾರೆ.

ಈ ಸಂಬಂಧ ಹಳೇ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು, ಶಿಕ್ಷಕರಲ್ಲ ಸೇರಿ ಬಿಇಒ ಕಚೇರಿಗೆ ಬುಧವಾರ ಆಗಮಿಸಿ ಕಾನೂನು ರೀತಿ ಒಪ್ಪಿಗೆ ಪಡೆಯುವಂತೆ ಮನವಿ ಸಲ್ಲಿಸಿದರು.

ಶಾಲೆ ಶಿಕ್ಷಕ ಮಂಜುನಾಥ್ ಮಾತನಾಡಿ, ಸರ್ಕಾರಿ ಶಾಲೆ ಉಳಿಸಲು ಎಲ್​ಕೆಜಿ, ಯುಕೆಜಿಯಲ್ಲಿ ಮಕ್ಕಳಿಗೆ ಉಚಿತ ಶಿಕ್ಷಣ, ಊಟೋಪಚಾರ ಮತ್ತು ಸಮವಸ್ತ್ರ ನೀಡುವಂಥ ಯೋಜನೆಗೆ ಮುಂದಾಗಲು ಎಲ್ಲರೂ ಸಹಕಾರ ನೀಡುವರು. ಶಾಲೆಯಲ್ಲಿ 20 ವಿದ್ಯಾರ್ಥಿಗಳಿದ್ದು, ಪುನಃ 20 ಮಂದಿ ಮಕ್ಕಳನ್ನು ಸೇರಿಸಿಕೊಳ್ಳುವ ಉದ್ದೇಶವಿದೆ ಎಂದು ತಿಳಿಸಿದರು.

ಹಳೇ ವಿದ್ಯಾರ್ಥಿ ಶಶಿ ಆಲ್ದೂರು ಮಾತನಾಡಿ, ಆಂಗ್ಲ ಭಾಷೆ ಮೇಲಿನ ವ್ಯಾಮೋಹ ಮತ್ತು ಖಾಸಗಿ ಶಾಲೆಯಲ್ಲಿ ಓದುವ ಮಕ್ಕಳನ್ನು ನೋಡಿ ಆಕರ್ಷಣೆಯಾಗುತ್ತಿರುವ ಇಂದಿನ ದಿನಗಳಲ್ಲಿ ಸರ್ಕಾರಿ ಶಾಲೆಗಳನ್ನು ಅಸಡ್ಡೆಯಿಂದ ನೋಡುವಂತಾಗಿದೆ. ಇದನ್ನು ತಪ್ಪಿಸಲು ಹಳೇ ವಿದ್ಯಾರ್ಥಿಗಳಾದ ನಾವು ಸರ್ಕಾರಿ ಶಾಲೆ ಉಳಿಸುವ ಹೊಸ ಪ್ರಯತ್ನ ಮಾಡಲಾಗುತ್ತಿದೆ ಎಂದರು.

ಎಸ್​ಡಿಎಂಸಿ ಕಡೆಗಣಿಸುವಂತಿಲ್ಲ: ನಿಮ್ಮ ಊರಿನ ಶಾಲೆಗಳನ್ನು ಉನ್ನತಿಗೊಳಿಸಲು ಯಾವುದೆ ಅಭ್ಯಂತರವಿಲ್ಲ. ಆದರೆ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯನ್ನು ಕಡೆಗಣಿಸುವ ಹಾಗಿಲ್ಲ ಎಂದು ಬಿಇಒ ಎಚ್.ಎಸ್.ಸಿದ್ದರಾಜಪ್ಪ ತಿಳಿಸಿದರು. ಆ ಶಾಲೆಯ ಶೈಕ್ಷಣಿಕ, ಭೌತಿಕ ಎಲ್ಲವೂ ಎಸ್​ಡಿಎಂಸಿಯೇ ನಿಯಂತ್ರಿಸಲಿದೆ. ಯಾವುದೆ ಅನುದಾನ ಬರಲಿ, ಯಾವುದೆ ಪ್ರಗತಿ ವಿಚಾರ ಇರಲಿ ನಿರ್ಣಯ ಮಾಡುವ ಅಂತಿಮ ನಿರ್ಧಾರ ಎಸ್​ಡಿಎಂಸಿ ಸಭೆಯಲ್ಲೇ ಆಗಬೇಕು. ಹಳೇ ವಿದ್ಯಾರ್ಥಿಗಳ ಸಂಘ, ದಾನಿಗಳ ಸಹಕಾರದಿಂದ ಏನೇ ಅಭಿವೃದ್ಧಿ ಮಾಡಬೇಕಿದ್ದರೂ ಸಾಮಾಜಿಕ ನ್ಯಾಯದ ವ್ಯವಸ್ಥೆಯಲ್ಲೇ ಸಾಗಬೇಕು. ಸರ್ಕಾರಿ ಶಾಲೆಯಾಗಿ ಸರ್ಕಾರದ ಎಲ್ಲ ನಿಯಮಗಳನ್ನೂ ಪಾಲಿಸಬೇಕು ಎಂದು ಸೂಚಿಸಿದರು.