ತೇಜಸ್ವಿ ಪ್ರತಿಷ್ಠಾನದ ಪುಸ್ತಕ ಮಳಿಗೆಗೆ ಇಂದು ಚಾಲನೆ

ನಂದೀಶ್ ಬಂಕೇನಹಳ್ಳಿ

ಬಣಕಲ್: ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ ಬದುಕು ಬರಹ ಮತ್ತು ಚಿಂತನೆಗಳ ಪ್ರಸರಣಕ್ಕಾಗಿ ಕೊಟ್ಟಿಗೆಹಾರದಲ್ಲಿ ನಿರ್ವಣವಾಗಿರುವ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದ ಕಟ್ಟಡದಲ್ಲಿ ತೇಜಸ್ವಿ ಅವರ ಪುಸ್ತಕ ಮಳಿಗೆ ಶನಿವಾರ ಆರಂಭವಾಗಲಿದೆ.

ಪುಸ್ತಕ ಪ್ರಕಾಶನದಿಂದ ಪ್ರಕಟಗೊಂಡ ತೇಜಸ್ವಿ ಅವರ 5 ಕಾದಂಬರಿ, 1 ಕವನ ಸಂಕಲನ, 4 ಕಥಾಸಂಕಲನ, 1 ನಾಟಕ ಸೇರಿ ಪುಸ್ತಕ ಪ್ರಕಾಶನದಿಂದ ಪ್ರಕಟಗೊಂಡ ಇತರ ಲೇಖಕರ ಪುಸ್ತಕಗಳೂ ದೊರೆಯಲಿವೆ.

ಮೂಡಿಗೆರೆ ತಾಲೂಕು ಕೊಟ್ಟಿಗೆಹಾರ ಸಮೀಪ ಬಾಳೂರು ಮೀಸಲು ಅರಣ್ಯದ 1 ಹೆಕ್ಟೇರ್ ಪ್ರದೇಶದಲ್ಲಿ ತೇಜಸ್ವಿ ಪ್ರತಿಷ್ಠಾನದ ಕಟ್ಟಡ ನಿರ್ವಣವಾಗಿದೆ. ಸಂಶೋಧನಾ ವಿದ್ಯಾರ್ಥಿಗಳಿಗೆ, ಯುವ ಸಮುದಾಯ, ಮಕ್ಕಳು ಮತ್ತು ಪರಿಸರಾಸಕ್ತರಿಗೆ ಜೀವವೈವಿಧ್ಯದ ಕೌತುಕ ತಿಳಿದುಕೊಳ್ಳಲು ಅನುಕೂಲವಾಗಲಿದೆ.

ಸಾರ್ಥಕ ಸಾಹಸಿ ಬದುಕು ನಡೆಸಿದ ತೇಜಸ್ವಿ ತಮ್ಮ ಜೀವಿತಾವಧಿಯಲ್ಲಿ ನಂಬಿಕೊಂಡು ಬಂದ ವೈಜ್ಞಾನಿಕ ಸತ್ಯಗಳು, ವೈಚಾರಿಕ ಮೌಲ್ಯಗಳು, ಪರಿಸರ ಪ್ರಜ್ಞೆ, ಪ್ರಯೋಗಶೀಲ ಸಾಹಸಗಾಥೆಗಳು, ನಾಡು-ನುಡಿ ಬಗೆಗಿನ ನಿಖರ ಹಾಗೂ ವಾಸ್ತವವಾದಿ ನಿಲುವುಗಳನ್ನು ಅತ್ಯಂತ ಸಮರ್ಥವಾಗಿ ಕಾರ್ಯರೂಪಕ್ಕಿಳಿಸುವುದು ಪ್ರತಿಷ್ಠಾನದ ಉದ್ದೇಶ.

ಅಧ್ಯಯನಶೀಲ ವಿದ್ಯಾರ್ಥಿಗಳು ಮತ್ತು ಆಸಕ್ತರ ಜ್ಞಾನಾರ್ಜನೆಗೆ ಅನುವು ಮಾಡಿಕೊಡಬೇಕೆಂಬ ಉದ್ದೇಶದಿಂದ 100 ಎಕರೆ ಬಯೋ ರಿಸರ್ವ್ ಫಾರೆಸ್ಟ್​ಗೆ ಪ್ರತಿಷ್ಠಾನ ಸರ್ಕಾರಕ್ಕೆ ಬೇಡಿಕೆ ಸಲ್ಲಿಸಿದೆ. ಇದರಿಂದ ಹೆಚ್ಚಿನ ಸಂಶೋಧನೆಗೆ ಅನುಕೂಲವಾಗಲಿದೆ.

ಆಸಕ್ತರಿಗೆ ತೆರೆದ ಬಾಗಿಲು: ಪಶ್ಚಿಮ ಘಟ್ಟದ ವಿಶಿಷ್ಟ ಆರ್ಕಿಡ್ ಸಸ್ಯಗಳ ಸಂಗ್ರಹ ಹಾಗೂ ಪ್ರಾತ್ಯಕ್ಷಿಕೆ, ಜೈವಿಕ ಇತಿಹಾಸದ ಸಮಗ್ರ ಚಿತ್ರಣ ನೀಡುವ ಮಾಹಿತಿ ಸಂಗ್ರಹಣೆ, ಅಂತರ್ಜಾಲ ಸಂಪರ್ಕವುಳ್ಳ ಮಾಹಿತಿ ಹಾಗೂ ಗ್ರಂಥಾಲಯ ಸೌಲಭ್ಯ, ರಂಗ ಶಿಕ್ಷಣ, ಸಂಗೀತ ಸಂಬಂಧಿತ ಚಟುವಟಿಕೆಗೆ ಪೂರಕ ಮೂಲ ಸೌಕರ್ಯ ನಿರ್ವಣ, ಚಿತ್ರಕಲಾ ಶಿಬಿರ, ಪೋಟೋಗ್ರಫಿ ಕಾರ್ಯಾಗಾರಗಳು ಹಾಗೂ ಪ್ರದರ್ಶನ, ಮಕ್ಕಳಿಗೆ ಜೀವಜಗತ್ತಿನ ಕೌತುಕಗಳ ಪರಿಚಯ, ಯುವ ಜನತೆಗೆ ಕಲೆ, ಪರಿಸರ, ಸಾಹಸ, ವಿಜ್ಞಾನ ಮುಂತಾದವುಗಳ ಕುರಿತು ಅಧ್ಯಯನಕ್ಕೆ ಇಲ್ಲಿ ಅವಕಾಶ ಕಲ್ಪಿಸಲಾಗುತ್ತದೆ. ತೇಜಸ್ವಿ ಸ್ಕೂಟರ್, ಪತ್ರಗಳು, ಬಳಸಿದ ವಸ್ತುಗಳು ಸಂಗ್ರಹಾಲಯದಲ್ಲಿ ಇರಲಿವೆ.

ಜೀವವೈವಿದ್ಯ ತಿಳಿಯಲು ವೇದಿಕೆ: ತೇಜಸ್ವಿ ಪ್ರತಿಷ್ಠಾನ ಮಂಗಳೂರು-ವಿಲ್ಲುಪುರಂ ರಾಷ್ಟ್ರಿಯ ಹೆದ್ದಾರಿಗೆ ಹೊಂದಿಕೊಂಡಂತಿರುವುದರಿಂದ ಧರ್ಮಸ್ಥಳ, ಹೊರನಾಡಿನಂಥ ಪ್ರವಾಸಿ ತಾಣಗಳಿಗೆ ಹೋಗುವ ಪ್ರವಾಸಿಗರಿಗೆ ಮಲೆನಾಡಿನ ಕಾಡು, ಜೀವವೈವಿಧ್ಯವನ್ನು ಅರಿಯಲು ವೇದಿಕೆಯಾಗಲಿದೆ. ತೇಜಸ್ವಿ ಒಡನಾಡಿಗಳು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿಗಳು, ಸಾಹಿತ್ಯಾಸಕ್ತ ಉತ್ಸುಕ ಮನಸ್ಸುಗಳು ತೇಜಸ್ವಿ ಬದುಕು-ಬರಹ, ಚಿಂತನೆಗಳ ಸಾಕಾರಕ್ಕಾಗಿ ಶ್ರಮಿಸುತ್ತಿದ್ದಾರೆ.

ಸ್ವಚ್ಛತಾ ಅಭಿಯಾನ: ತೇಜಸ್ವಿ ಜನ್ಮದಿನದ ಪ್ರಯುಕ್ತ ಶನಿವಾರ ಬೆಳಗ್ಗೆ 10 ಗಂಟೆಗೆ ಕೊಟ್ಟಿಗೆಹಾರದಲ್ಲಿ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದಿಂದ ಸ್ವಚ್ಛತಾ ಅಭಿಯಾನ ನಡೆಯಲಿದೆ. ಕೊಟ್ಟಿಗೆಹಾರದಿಂದ ಸ್ವಚ್ಛತಾ ಕಾರ್ಯಕ್ರಮ ಪ್ರಾರಂಭವಾಗಲಿದ್ದು ಏಕಲವ್ಯ ವಸತಿ ಶಾಲೆಯವರೆಗೆ ಸ್ವಚ್ಛತಾ ಕಾರ್ಯ ನಡೆಯಲಿದೆ.