ಜಲ ಪ್ರವಾಸೋದ್ಯಮ ಸಾಧ್ಯತೆಗಳ ಅಧ್ಯಯನ

ಮಂಗಳೂರು: ಜಲ ಪ್ರವಾಸೋದ್ಯಮಕ್ಕೆ ಆದ್ಯತೆ ನೀಡುವ ನಿಟ್ಟಿನಲ್ಲಿ ಕುಂದಾಪುರದಿಂದ ಕಾಸರಗೋಡು ತನಕ ಸಮುದ್ರ ಹಾಗೂ ನದಿ ತೀರಗಳಲ್ಲಿ ಪ್ರವಾಸೋದ್ಯಮ ಸಾಧ್ಯತೆಗಳ ಕುರಿತಂತೆ ಅಧ್ಯಯನ ನಡೆಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಹೇಳಿದರು.

ತೋಟಗಾರಿಕೆ ಇಲಾಖೆ, ದ.ಕ ಜಿಪಂ, ದ.ಕ. ಜಿಲ್ಲಾಡಳಿತ ಹಾಗೂ ಕದ್ರಿ ಉದ್ಯಾನವನ ಅಭಿವೃದ್ಧಿ ಸಮಿತಿ ಆಶ್ರಯದಲ್ಲಿ ಹಾಗೂ ಸಿರಿ ತೋಟಗಾರಿಕೆ ಸಂಘದ ಸಹಭಾಗಿತ್ವದಲ್ಲಿ ನಗರದ ಕದ್ರಿ ಉದ್ಯಾನವನದಲ್ಲಿ ಜ.28ರ ತನಕ ನಡೆಯಲಿರುವ ಫಲಪುಷ್ಪ ಪ್ರದರ್ಶನ ಶನಿವಾರ ಉದ್ಘಾಟಿಸಿ ಮಾತನಾಡಿದರು.

ಫಲಪುಷ್ಪ ಪ್ರದರ್ಶನ ಜಿಲ್ಲೆಯ ಉದ್ದಗಲಕ್ಕೂ ಪ್ರವಾಸೋದ್ಯಮವನ್ನು ಉತ್ತೇಜಿಸಲಿದೆ. ಇದರೊಂದಿಗೆ ದ.ಕ ಜಿಲ್ಲೆಯಲ್ಲಿರುವ ನದಿ, ಸಮುದ್ರವು ಪ್ರವಾಸಿಗರ ತಾಣವಾಗಿಸುವ ಅಗತ್ಯವಿದೆ. ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಿದರೆ ಉದ್ಯೋವಕಾಶಗಳೂ ದೊರಕಲಿವೆ. ಬಜೆಟ್‌ನಲ್ಲಿ ಈ ಬಗ್ಗೆ ಪ್ರಸ್ತಾವನೆ ಮಾಡಿರುವುದಾಗಿ ಸಚಿವ ಖಾದರ್ ಹೇಳಿದರು.

ಶಾಸಕ ವೇದವ್ಯಾಸ ಕಾಮತ್, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಉಪಾಧ್ಯಕ್ಷೆ ಕಸ್ತೂರಿ ಪಂಜ, ತಾಪಂ ಅಧ್ಯಕ್ಷ ಮಹಮ್ಮದ್ ಮೋನು, ಜಿಪಂ ಸದಸ್ಯೆ ಮಮತಾ ಗಟ್ಟಿ, ಶಾಹುಲ್ ಹಮೀದ್, ಮನಪಾ ಸದಸ್ಯರಾದ ಅಬ್ದುಲ್ ರವೂಫ್, ರೂಪಾ ಡಿ.ಬಂಗೇರ, ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್, ಜಿಪಂ ಸಿಇಒ ಡಾ.ಆರ್.ಸೆಲ್ವಮಣಿ, ಮುಡಾ ಆಯುಕ್ತ ಶ್ರೀಕಾಂತ್ ರಾವ್ ಮೊದಲಾದವರಿದ್ದರು.

ಸಮುದ್ರದಲ್ಲಿ ತೇಲುವ ಹಡಗು: ಉದ್ಯಾನವನದ ಮಧ್ಯಭಾಗದಲ್ಲಿ ಬಣ್ಣ ಬಣ್ಣದ ಕಾನೇರ್ಷನ್ ಮತ್ತು ಡಚ್ ಗುಲಾಬಿ ಹೂವಿನಿಂದ ಅಲಂಕರಿಸಿದ ‘ಸಮುದ್ರದಲ್ಲಿ ತೇಲುವ ಹಡಗು’, ಕಾರು ಮತ್ತು ಐಸ್‌ಕ್ರೀಂ (ಕೋನ್) ಮಾದರಿಗಳು ಆಕರ್ಷಕವಾಗಿವೆ. 4 ಲಕ್ಷ ರೂ. ವೆಚ್ಚದ ಹಡಗಿಗೆ 25000 ಕಾನೇರ್ಷನ್, 5000 ಡಚ್ ಗುಲಾಬಿ ಹಾಗೂ 300 ಬಂಡಲ್ ಬ್ಲೂ ಮತ್ತು ವೈಟ್ ಡೈಸಿ ಹೂವುಗಳನ್ನು ಬಳಸಲಾಗಿದೆ. ಕಾರನ್ನು ಸಂಪೂರ್ಣವಾಗಿ 18,000 ಸೇವಂತಿ ಹೂವುಗಳಿಂದ ಸಿಂಗರಿಸಲಾಗಿದೆ. ಉಳಿದಂತೆ ಫಲಪುಷ್ಪ ಪ್ರದರ್ಶನದ ಭಾಗವಾಗಿ ವಿವಿಧ ಹೂ, ಹೂವಿನ ಗಿಡಗಳು, ಹಣ್ಣು, ತರಕಾರಿ, ಹನಿ ನೀರಾವರಿ ಪ್ರಾತ್ಯಕ್ಷಿಕೆ, ಹೈಡ್ರೋಪೋನಿಕ್ಸ್, ಜೇನು ಕೃಷಿ ಮತ್ತಿತರ ಪ್ರದರ್ಶನ ಮತ್ತು ಮಳಿಗೆಗಳು ಉದ್ಯಾನದಲ್ಲಿವೆ.