ವಿದ್ಯಾರ್ಥಿಗಳಿಗೂ ಸಿಗಲಿದೆ ಜೀವವಿಮೆ: ರಾಜೀವ್ ಗಾಂಧಿ ವಿವಿ ನಿರ್ಧಾರ

| ದೇವರಾಜ್ ಎಲ್.

ಬೆಂಗಳೂರು: ಶಿಷ್ಯವೇತನ ಹೆಚ್ಚಳ ಮಾಡಿ ವೈದ್ಯ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ ನೀಡಿದ್ದ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಇದೀಗ ಜೀವವಿಮೆ ಸೌಲಭ್ಯ ಕಲ್ಪಿಸುವ ಮೂಲಕ ಮತ್ತಷ್ಟು ವಿದ್ಯಾರ್ಥಿಸ್ನೇಹಿಯಾಗುತ್ತಿದೆ.

ಇತರರ ಜೀವ ಉಳಿಸುವ ವೈದ್ಯರ ಜೀವಕ್ಕೆ ವಿಮೆ ನೀಡಲು ವಿವಿ ತೀರ್ವನಿಸಿರುವುದು ವಿದ್ಯಾರ್ಥಿಗಳಲ್ಲಿ ಸಂತಸ ಮೂಡಿಸಿದೆ. ವಿದ್ಯಾರ್ಥಿಗಳು ತಮ್ಮ ಕೈಯಿಂದ ಹಣ ಕಟ್ಟುವಂತಿಲ್ಲ. ಸಂಪೂರ್ಣ ಮೊತ್ತವನ್ನು ವಿವಿಯೇ ಪಾವತಿಸಲಿದೆ.

ವಿಮೆ ವಿಶೇಷ: ವಿಮೆಯ ವಿಶೇಷವೆಂದರೆ, ವಿದ್ಯಾರ್ಥಿಯು ವ್ಯಾಸಂಗ ಮಾಡುವ ವೇಳೆ ಅವರ ಪಾಲಕರು ನಿಧನ ಹೊಂದಿದರೆ, ಮುಂದಿನ ವ್ಯಾಸಂಗದ ವೆಚ್ಚವನ್ನು ವಿವಿಯೇ ಭರಿಸಲಿದೆ. ಆನಂತರ ವಿಮಾ ಕಂಪನಿಯಿಂದ ಶುಲ್ಕ ಪಡೆದುಕೊಳ್ಳಲಿದೆ. ಏಕೆಂದರೆ, ವೈದ್ಯಕೀಯ ಕೋರ್ಸ್ ಗಳ ಪ್ರವೇಶ ಶುಲ್ಕ ಲಕ್ಷಾಂತರ ರೂ. ಇರುವುದರಿಂದ ಬಡ ಮತ್ತು ಮಧ್ಯಮ ವರ್ಗದವರಿಗೆ ಈ ಭಾರಿ ಶುಲ್ಕ ಪಾವತಿಸುವುದು ಕಷ್ಟ.

ವಿವಿ ವ್ಯಾಪ್ತಿಯಲ್ಲಿ 727 ಪದವಿ ವೈದ್ಯಕೀಯ ಕಾಲೇಜುಗಳಿದ್ದು, 33,270 ವಿದ್ಯಾರ್ಥಿಗಳಿದ್ದಾರೆ. ಸ್ನಾತಕೋತ್ತರ ಪದವಿಯಲ್ಲಿ 500 ಕಾಲೇಜುಗಳಿದ್ದು, 6,217 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಜಾರಿಗೆ ತರಲು ವಿವಿ ಅಧಿಕಾರಿಗಳು ಶ್ರಮಿಸುತ್ತಿದ್ದಾರೆ.

ವಿಮೆ ಕಂಪನಿಗಳ ಜತೆ ಚರ್ಚೆ: ವಿಮೆ ಹೇಗಿರಬೇಕು? ಏನೆಲ್ಲ ಚಿಕಿತ್ಸೆ ಇದರಲ್ಲಿ ಸೇರ್ಪಡೆಯಾಗಬೇಕು? ಪ್ರೀಮಿಯಂ ಮೊತ್ತ ಎಷ್ಟಿರಬೇಕು ಎಂಬುದರ ಬಗ್ಗೆ ಕೆಲವು ಖಾಸಗಿ ವಿಮಾ ಕಂಪನಿಗಳಿಂದ ಮಾಹಿತಿಯನ್ನು ವಿವಿ ಪಡೆಯುತ್ತಿದೆ. ಆರೋಗ್ಯ ವಿಮೆಯಲ್ಲೇ ಅಪಘಾತ ವಿಮೆ ಸೇರ್ಪಡೆಗೆ ನಿರ್ಧರಿಸಿದೆ. ಮಾಹಿತಿ ಸಂಗ್ರಹಿಸಿದ ಮೇಲೆ ವಿಮಾ ಕಂಪನಿಗಳಿಂದ ಟೆಂಡರ್ ಆಹ್ವಾನಿಸಿ ಕಡಿಮೆ ಬಿಡ್ ಮಾಡಿದವರಿಗೆ ನೀಡಲಾಗುತ್ತದೆ.

ಈ ಹಿಂದೆ ಬೆಂಗಳೂರು ವಿಶ್ವವಿದ್ಯಾಲಯದಲ್ಲೂ ಇದೇ ರೀತಿ ವಿದ್ಯಾರ್ಥಿಗಳಿಗೆ ಆರೋಗ್ಯ ವಿಮೆ ಜಾರಿಗೊಳಿಸಲು ನಿರ್ಧರಿಸಲಾಗಿತ್ತು. ಇದಕ್ಕಾಗಿ ರಚಿಸಲಾಗಿದ್ದ ವಿತ್ತಾಧಿಕಾರಿ ನೇತೃತ್ವದ

ಸಮಿತಿ ವರದಿ ನೀಡಿತ್ತು. ವಿದ್ಯಾರ್ಥಿ ಮತ್ತು ವಿವಿ ಶೇ.50- ಶೇ.50 ಅನುಪಾತದಲ್ಲಿ ವಿಮೆಹಣ ಪಾವತಿಸಲು ನಿರ್ಧರಿಸಲಾಗಿತ್ತು. ನಂತರದಲ್ಲಿ ಅನುಷ್ಠಾನಕ್ಕೆ ಅಧಿಕಾರಿಗಳು ಆಸಕ್ತಿ ತೋರಲಿಲ್ಲ.

ವಿದ್ಯಾರ್ಥಿಗಳಿಗೆ ಅನುಕೂಲವಾ ಗುವಂತಹ ಆರೋಗ್ಯ ವಿಮೆ ಜಾರಿಗೆ ಸಿದ್ಧತೆ ನಡೆಸು ತ್ತಿದ್ದೇವೆ. ಸಾಧ್ಯವಾದಷ್ಟು ಬೇಗ ಅನುಷ್ಠಾನ ಮಾಡುತ್ತೇವೆ.

| ಡಾ.ಸಚ್ಚಿದಾನಂದ ಕುಲಪತಿ, ಆರ್​ಜಿಯುಎಚ್​ಎಸ್

Leave a Reply

Your email address will not be published. Required fields are marked *