ನಂಜನಗೂಡು: ವಿದ್ಯಾರ್ಥಿಗಳು ನಿರಂತರವಾಗಿ ಓದಿನ ಕಡೆ ಹೆಚ್ಚು ಶ್ರಮ ಹಾಕಿದಾಗ ಮಾತ್ರ ಉತ್ತಮ ಸ್ಥಾನ ಪಡೆಯಲು ಸಾಧ್ಯ ಎಂದು ಮಹಾರಾಜ ತಾಂತ್ರಿಕ ವಿದ್ಯಾಲಯದ ಪ್ರಾಂಶುಪಾಲ ಡಾ.ವೈ.ಟಿ.ಕೃಷ್ಣೇಗೌಡ ತಿಳಿಸಿದರು.
ತಾಲೂಕಿನ ತಾಂಡವಪುರ ಬಳಿಯಿರುವ ಮಹಾರಾಜ ತಾಂತ್ರಿಕ ವಿದ್ಯಾಲಯದಲ್ಲಿ ಶುಕ್ರವಾರ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಹಾಗೂ ನೂತನ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಉತ್ತಮ ಅಂಕ ಗಳಿಸಿದರೆ ಶುಲ್ಕದ ಹಣದಲ್ಲಿ ಶೇ.50ರಷ್ಟನ್ನು ಬಹುಮಾನ ರೂಪದಲ್ಲಿ ಹಿಂತಿರುಗಿಸಲಾಗುತ್ತದೆ. ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವುದು ಕಾಲೇಜಿನ ಉದ್ದೇಶ. ಗ್ರಾಮಾಂತರ ಪ್ರದೇಶದ ಸಾವಿರಾರು ವಿದ್ಯಾರ್ಥಿಗಳು ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದು, ಪಾಲಕರು ಹಳ್ಳಿಗಳಲ್ಲಿ ಕಷ್ಟಪಟ್ಟು ಸಂಪಾದನೆ ಮಾಡಿ ಒಳ್ಳೆಯ ಕಾಲೇಜಿನಲ್ಲಿ ವಿದ್ಯಾಭ್ಯಾಸ ಕೊಡಿಸಬೇಕೆಂದು ಕನಸು ಕಾಣುತ್ತಿದ್ದಾರೆ. ಪಾಲಕರ ಕನಸನ್ನು ನನಸು ಮಾಡುವುದು ವಿದ್ಯಾರ್ಥಿಗಳ ಜವಾಬ್ದಾರಿ ಎಂದರು.
ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಶೇ.50ರಷ್ಟನ್ನು ಬಹುಮಾನ ರೂಪದಲ್ಲಿ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಐಐಎಂಕೆ ಕೇರಳ ಪ್ರೊಫೆಸರ್ ಸಿ.ರಾಜು, ಡಾ.ಎಚ್.ಕೆ.ಚೇತನ್, ಜಾರ ಬಾನು, ಡಾ.ಬಸಂತ್‌ಕುಮಾರ್, ಸುಕುಮಾರ್, ರಂಗಾಚಾರಿ, ಶಶಿರ್, ಶ್ರೀವತ್ಸ, ಕೆ.ಗೌರಿ, ಧನ್ಯಶ್ರೀ, ಶಿವು, ಮಂಜೇಶ್ ಇತರರಿದ್ದರು.