ಚಿಕ್ಕಮಗಳೂರು: ವಿದ್ಯಾರ್ಥಿಗಳು ಅಂದವಾಗಿ, ಚೆಂದವಾಗಿ, ದುಂಡಾಗಿ ಅಕ್ಷರಗಳನ್ನು ಬರೆಯುವುದರಿಂದ ಸರಸ್ವತಿಯು ಸದಾ ಒಲಿಯುತ್ತಾಳೆ ಎಂದು ಶ್ರೀಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಚಿಕ್ಕಮಗಳೂರು ಶಾಖೆಯ ಕಾರ್ಯದರ್ಶಿ ಶ್ರೀ ಗುಣನಾಥ ಸ್ವಾಮೀಜಿ ಅಭಿಪ್ರಾಯಪಟ್ಟರು.
ನಗರದ ಹೌಸಿಂಗ್ ಬೋರ್ಡ್ ಬಡಾವಣೆಯಲ್ಲಿರುವ ಬಿಜಿಎಸ್ ಶಾಲೆಯಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಕನ್ನಡ ಮತ್ತು ಆಂಗ್ಲ ಭಾಷೆಯ ಇಟಾಲಿಕ್ ಕೈಬರಹದ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಅವರು, ವಿದ್ಯಾರ್ಥಿಗಳಾದ ನೀವು ನಿಮ್ಮ ಕೈಬರಹವನ್ನು ಸುಧಾರಿಸಿಕೊಳ್ಳಬೇಕು ಎಂದರು.
ನಮ್ಮ ಸಂಸ್ಥೆಯ ನಿವೃತ್ತ ಪ್ರಾಚಾರ್ಯ ಹಾಗೂ ಪರಿಸರ ತಜ್ಞ ಡಾ.ದುಗ್ಗಪ್ಪ ಗೌಡ ಅವರು ನಮ್ಮ ಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಕನ್ನಡ ಮತ್ತು ಇಂಗ್ಲೀಷ್ ಕೈಬರಹದ ತರಬೇತಿ ನೀಡಿ ವಿದ್ಯಾರ್ಥಿಗಳ ಕೈಬರಹವನ್ನು ಅಂದ ಕಾಣುವಂತೆ ಮಾಡಿದ ಇಟಾಲಿಕ್ ಕೈಬರಹದ ತಜ್ಞ. ೭೩ನೇ ವಯಸ್ಸಿನಲ್ಲೂ ಉತ್ಸಾಹದಿಂದ ಅಭ್ಯಾಸ ಮಾಡುತ್ತಿರುತ್ತಾರೆ. ಮುಂದಿನ ದಿನಗಳಲ್ಲಿ ಚಿಕ್ಕಮಗಳೂರು ಜಿಲ್ಲೆಯ ಕೈಬರಹದ ಸ್ಪರ್ಧೆಯನ್ನು ಜಿಲ್ಲಾ ಮಟ್ಟದಲ್ಲಿ ಏರ್ಪಡಿಸಿ ಬಹುಮಾನವನ್ನು ವಿತರಿಸುವ ಕಾರ್ಯಕ್ರಮ ನಡೆಸುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಚಾರ್ಯ ಡಾ.ದುಗ್ಗಪ್ಪಗೌಡ, ಬಿಜಿಎಸ್ ಶಾಲೆಯ ಮುಖ್ಯ ಶಿಕ್ಷಕ ಜಿ.ಆರ್.ಚಂದ್ರಶೇಖರ್, ಬಿಜಿಎಸ್ ಕಾಲೇಜಿನ ಪ್ರಾಚಾರ್ಯ ಜೆ.ಜಿ.ಸುರೇಂದ್ರ ಉಪಸ್ಥಿತರಿದ್ದರು. ಶಿಕ್ಷಕಿ ಎಂ.ಸಿ.ಆಶಾ ಸ್ವಾಗತಿಸಿ, ವಿದ್ಯಾರ್ಥಿಗಳಾದ ಭವ್ಯ ಸಂಗಡಿಗರು ಪ್ರಾರ್ಥಿಸಿ, ಶಿಕ್ಷಕಿ ಟಿ.ಆರ್.ಗೀತಾ ವಂದಿಸಿದರು. ಶಿಕ್ಷಕಿ ಶ್ರೀವಿದ್ಯಾ ನಿರೂಪಿಸಿದರು.