More

  ವಿದ್ಯಾರ್ಥಿಗಳು ಸಮಾಜಕ್ಕೆ ಮಾದರಿಯಾಗಲಿ: ಶಾಸಕ ಟಿ.ಎಸ್.ಶ್ರೀವತ್ಸ

  ಮೈಸೂರು: ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ವಿದ್ಯಾರ್ಥಿ ಜೀವನದ ಬಹುಮುಖ್ಯ ಘಟ್ಟ. ಹೀಗಾಗಿ ವಿದ್ಯಾರ್ಥಿಗಳು ಶ್ರಮಪಟ್ಟು ಓದಿ ಸಾಧನೆ ಮಾಡಬೇಕು. ಉತ್ತಮ ಭವಿಷ್ಯ ರೂಪಿಸಿಕೊಂಡು ಸಮಾಜಕ್ಕೆ ಮಾದರಿಯಾಗಬೇಕು ಎಂದು ಶಾಸಕ ಟಿ.ಎಸ್.ಶ್ರೀವತ್ಸ ಸಲಹೆ ನೀಡಿದರು.
  ಕುವೆಂಪುನಗರದಲ್ಲಿರುವ ಜ್ಯೋತಿ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ಓರಿಯೆಂಟೇಶನ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
  ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಶಿಕ್ಷಣ ಸಂಸ್ಥೆಗಳನ್ನು ನಡೆಸುವುದು ಸುಲಭದ ಮಾತಲ್ಲ. ಉತ್ತಮ ಫಲಿತಾಂಶದ ಜತೆಗೆ ಅಗತ್ಯ ಮೂಲ ಸೌಲಭ್ಯಗಳನ್ನೂ ಹೊಂದಿರಬೇಕು. ಶಿಕ್ಷಣ ಕ್ಷೇತ್ರದಲ್ಲಿನ ಸ್ಪರ್ಧೆಯಲ್ಲಿ ನಾವು ಗೆಲ್ಲಬೇಕಾದರೆ ಉತ್ತಮ ಫಲಿತಾಂಶ ಬರಬೇಕು. ನುರಿತ ಅಧ್ಯಾಪಕರು, ಅಗತ್ಯ ಮೂಲ ಸೌಲಭ್ಯ ಇರಬೇಕು. ಸಂಸ್ಥೆಯ ಫಲಿತಾಂಶ ನೋಡಿ ಹೆಚ್ಚು ಮಕ್ಕಳು ಬರುತ್ತಾರೆ. ಹೀಗಾಗಿ ಶಿಕ್ಷಣ ಸಂಸ್ಥೆ ಉತ್ತಮವಾಗಿ ನಡೆಯಲು ಶಿಕ್ಷಕರಷ್ಟೇ ವಿದ್ಯಾರ್ಥಿಗಳೂ ಮುಖ್ಯ ಎಂದರು.
  ನಾನು ಶಾಸಕನಾದಾಗ ಕೆ.ಆರ್.ಕ್ಷೇತ್ರದಲ್ಲಿ 4 ಸಾವಿರ ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದಿದ್ದರು. ಫಲಿತಾಂಶ ಉತ್ತಮಗೊಳಿಸುವ ಸಲುವಾಗಿ ಆರ್‌ಎಸ್‌ಎಸ್ ಬಳಗದ ಸಹಾಯದೊಂದಿಗೆ ವಿಶೇಷ ತರಗತಿಗಳನ್ನು ಆಯೋಜಿಸಿದ ಕಾರಣಕ್ಕಾಗಿ ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 119 ವಿದ್ಯಾರ್ಥಿಗಳು 600ಕ್ಕಿಂತ ಹೆಚ್ಚು ಅಂಕಗಳಿಸಿದ್ದಾರೆ ಎಂದರು.
  ಸಿಎಂ ತವರು ಜಿಲ್ಲೆ ಎಂಬ ಕಾರಣಕ್ಕೆ ಫಲಿತಾಂಶದಲ್ಲಿ ಉತ್ತಮ ಸಾಧನೆ ಮಾಡಲು ಶ್ರಮವಹಿಸಿದ್ದರಿಂದ ಮೈಸೂರು ಜಿಲ್ಲೆ ಈ ಬಾರಿ ಪಿಯು ಫಲಿತಾಂಶದಲ್ಲಿ 13ನೇ ಸ್ಥಾನ, ಎಸ್‌ಎಸ್‌ಎಲ್‌ಸಿಯಲ್ಲಿ 9ನೇ ಸ್ಥಾನ ಪಡೆದುಕೊಂಡಿದೆ. ಈ ಫಲಿತಾಂಶ ಸಮಾಧಾನಕರವಾದರೂ ಮುಂಬರುವ ದಿನಗಳಲ್ಲಿ ಇನ್ನೂ ಉತ್ತಮ ಸಾಧನೆ ಮಾಡಬೇಕಿದೆ ಎಂದು ಹೇಳಿದರು.
  ವಿಜ್ಞಾನ ವಿಭಾಗದಲ್ಲಿ ಹೆಚ್ಚು ಅಂಕಗಳಿಸಿದ ಭೂಮಿಕಾ ಭಾಸ್ಕರ್, ವಾಣಿಜ್ಯ ವಿಭಾಗದಲ್ಲಿ ಹೆಚ್ಚು ಅಂಕಗಳಿಸಿದ ಐಶ್ವರ್ಯ ಅವರಿಗೆ ಮಹಿ ಮಹೇಶ್, ಮುದ್ದುವೀರಪ್ಪ ದತ್ತಿ ಬಹುಮಾನ ವಿತರಣೆ ಮಾಡಲಾಯಿತು. ಜತೆಗೆ ಇತರ ವಿಷಯಗಳಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು.
  ಪ್ರಣಮ್ಯ ಎಜುಕೇಷನಲ್ ಟ್ರಸ್ಟ್ ಕಾರ್ಯದರ್ಶಿ ಮಹಿ ಮಹೇಶ್, ಜ್ಯೋತಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಸಿ.ಮುದ್ದುವೀರಪ್ಪ, ಕಾರ್ಯದರ್ಶಿ ಎ.ಎಸ್.ಚನ್ನಬಸಪ್ಪ, ಅಭಿ ಟ್ರಸ್ಟ್ ಸಲಹೆಗಾರ ಕೆ.ಎಸ್.ಸುಂದರಂ, ಪ್ರಣಮ್ಯ ಎಜುಕೇಷನಲ್ ಟ್ರಸ್ಟ್ ಅಧ್ಯಕ್ಷೆ ವಿ.ಪಿ.ಸವಿತಾ, ಸೈನ್‌ಟಿಯಾ ಎಜುವೆಂಚರ್‌ನ ಆರ್.ಸತ್ಯನಾರಾಯಣ, ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಎ.ಸಿ.ಅರವಿಂದ, ಪ್ರಾಂಶುಪಾಲ ಡಾ.ಬಿ.ಭರತ್ ರಾಜ್, ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿ ಬಿ.ಎಂ.ರಘು, ಕೆ.ಆರ್.ಕ್ಷೇತ್ರದ ಬಿಜೆಪಿ ಅಧ್ಯಕ್ಷ ಗೋಪಾಲರಾವ್ ಇದ್ದರು.

  See also  ಪಾಕಿಸ್ತಾನಕ್ಕೆ ಹೋಗು ಎಂದ ಧೋನಿಗೆ ಅಭಿಮಾನಿ ಕೊಟ್ಟ ಉತ್ತರ ಸಿಕ್ಕಾಪಟ್ಟೆ ವೈರಲ್!

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts