ನಂಜನಗೂಡು: ತಾಲೂಕಿನ ಹೆಗ್ಗಡಹಳ್ಳಿ ಕ್ಲಸ್ಟರ್ ವ್ಯಾಪ್ತಿಯ ಹುಸ್ಕೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಸುಗ್ಗಿ ಸಂಭ್ರಮ ಮತ್ತು ನಮ್ಮೂರ ಸಂತೆ ಸಡಗರಿಂದ ಜರುಗಿತು.
ಕಾರ್ಯಕ್ರಮವನ್ನು ದವಸ ಧಾನ್ಯಗಳ ರಾಶಿಗೆ ಪೂಜೆ ಸಲ್ಲಿಸುವ ಮೂಲಕ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಮಹೇಶ್ ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳಿಗೆ ಗ್ರಾಮೀಣ ಸೊಗಡಿನ ಅರಿವು, ಕೃಷಿ ಪರಿಕರಗಳು ಹಾಗೂ ಕೃಷಿಕರ ಬದುಕಿನ ಪರಿಚಯ ಮಾಡಿಸುವ ಅಗತ್ಯವಿದೆ. ನಮ್ಮ ನೆಲದ ಸಂಸ್ಕೃತಿ, ಹಬ್ಬಗಳು, ಸಂಪ್ರದಾಯಗಳ ಕುರಿತು ಮಕ್ಕಳಿಗೆ ಅರಿವು ಮೂಡಿಸಿದಾಗ ಮಾತ್ರ ಅವರು ನಮ್ಮ ಸಂಸ್ಕೃತಿ ಮತ್ತು ಪರಂಪರೆ ಕಾಪಾಡಿಕೊಂಡು ಹೋಗುತ್ತಾರೆ. ವಿದ್ಯಾರ್ಥಿಗಳಿಗೆ ಕಂಪ್ಯೂಟರ್, ಮೊಬೈಲ್, ವಿಮಾನ ಸೇರಿದಂತೆ ಆಧುನಿಕ ಸಂಗತಿಗಳು ಗೊತ್ತಿವೆ. ಆದರೆ ಬದುಕಿಗೆ ಅವಶ್ಯಕವಾದ ಆಹಾರ, ನೀರು, ಕೃಷಿ, ರೈತರು ಬೆಳೆಗಳನ್ನು ಹೇಗೆ ಬೆಳೆಯುತ್ತಾರೆ, ಅವರ ಬದುಕಿನ ಶೈಲಿ ಹೇಗಿರುತ್ತದೆ, ಕಷ್ಟಗಳೇನು ಎಂಬುದರ ಕುರಿತು ಅರಿವು ಮೂಡಿಸಬೇಕಿದೆ ಎಂದರು.
ಭಾರತದಲ್ಲಿ ಕೃಷಿ ಕೇವಲ ವೃತ್ತಿ ಅಷ್ಟೇ ಅಲ್ಲ. ಅದೊಂದು ಜೀವನ ವಿಧಾನ, ನಮ್ಮ ಹಿರಿಯರ ಕೃಷಿ ವಿಧಾನಗಳು, ಆರೋಗ್ಯಕರ ಪರಿಸರ ವ್ಯವಸ್ಥೆಗೆ ಪೂರಕವಾಗಿದ್ದವು. ಇರುವ ಒಂದು ಭೂಮಿಯನ್ನು ಉಳಿಸಿಕೊಳ್ಳಲು ಹಿರಿಯರ ಸಾಂಪ್ರದಾಯಿಕ ಕೃಷಿ ವಿಧಾನಗಳು, ಅತ್ಯಂತ ಮಹತ್ವದ್ದಾಗಿವೆ. ಹಬ್ಬದ ನೆಪದಲ್ಲಿ ಮಕ್ಕಳಿಗೆ ಇವುಗಳ ಅರಿವು ಮೂಡಿಸುವುದು ನಮ್ಮ ಉದ್ದೇಶ ಎಂದು ಹೇಳಿದರು.
ಶಾಲೆಯ ಅಂಗಳವನ್ನು ರಂಗೋಲಿ, ಮಣ್ಣಿನ ಮಡಕೆ, ಕಬ್ಬಿನ ಜಲ್ಲೆಗಳಿಂದ ಸಿಂಗರಿಸಲಾಗಿತ್ತು. ಶಾಲೆಯ ಆವರಣದಲ್ಲಿ ವಿವಿಧ ಬಗೆಯ ಅಂಗಡಿ ಮೊಳಕೆಗಳನ್ನು ತೆರೆದು, ಹಣ್ಣು, ತರಕಾರಿ, ಚುರುಮುರಿ, ಪಾನಿಪುರಿ ವಿವಿಧ ಗ್ರಾಮೀಣ ಆಟಗಳನ್ನು ಆಡಿಸಿ ಮಕ್ಕಳಿಗೆ ಲಾಭ, ನಷ್ಟದ ಪರಿಕಲ್ಪನೆಯ ಬಗ್ಗೆ ಅರಿವು ಮೂಡಿಸಲಾಯಿತು. ಶಾಲೆಗೆ ಆಗಮಿಸಿದ ಪಾಲಕರು ತಮ್ಮ ಮಕ್ಕಳು ತಯಾರಿಸಿದ ವಿವಿಧ ಬಗೆಯ ಖಾದ್ಯಗಳನ್ನು ಸವಿದು ಸಂಭ್ರಮಿಸಿದರು.
ಅಲ್ಲದೆ ವಿದ್ಯಾರ್ಥಿಗಳು ನಡೆಸಿಕೊಟ್ಟ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಕಣ್ಮನ ಸೆಳೆಯುವಂತಿದ್ದವು.
ಉನ್ನತ ವ್ಯಾಸಂಗ ಮಾಡಿ ಕೃಷಿಯನ್ನು ಅವಲಂಬಿಸಿರುವ ರೈತರಾದ ಚಿಕ್ಕಣ್ಣ, ರಾಘವೇಂದ್ರ, ಮಲ್ಲಿಕಾರ್ಜುನ ಅವರನ್ನು ಶಾಲೆ ವತಿಯಿಂದ ಸನ್ಮಾನಿಸಲಾಯಿತು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಸುರೇಂದ್ರ, ಉಪಾಧ್ಯಕ್ಷೆ ಲಕ್ಷ್ಮೀ, ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಸೋಮಶೇಖರ್, ಮುಖ್ಯಶಿಕ್ಷಕಿ ಬಿ.ಎನ್ ಶಾರದಾ, ಸಹ ಶಿಕ್ಷಕರಾದ ಸುಧಾ, ಜಸೀಲಾ, ಮನುಜ, ಮಹದೇವಸ್ವಾಮಿ ಇತರರಿದ್ದರು.