ಎಲ್ಲ ವಿದ್ಯಾರ್ಥಿಗಳಿಗೂ ಬಸ್​ಪಾಸ್ ನೀಡಲು ಒತ್ತಾಯ

ಮುಂಡರಗಿ: ಎಲ್ಲ ಶಾಲಾ ಕಾಲೇಜ್ ವಿದ್ಯಾರ್ಥಿಗಳಿಗೆ ಉಚಿತ ಬಸ್​ಪಾಸ್ ನೀಡುವುದರ ಜೊತೆಗೆ ತಾರತಮ್ಯವಿಲ್ಲದೆ ರೈತರಿಗೆ ಬೆಳೆವಿಮೆ ವಿತರಣೆ ಮಾಡಬೇಕೆಂದು ಒತ್ತಾಯಿಸಿ ವಿವಿಧ ಶಾಲಾ ಕಾಲೇಜ್ ವಿದ್ಯಾರ್ಥಿಗಳು, ರೈತ ಸಂಘಟನೆ ಹಾಗೂ ವಿವಿಧ ಕನ್ನಡಪರ ಸಂಘಟನೆ ನೇತೃತ್ವದಲ್ಲಿ ಸೋಮವಾರ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಭ್ರಮರಾಂಭ ಗುಬ್ಬಿಶೆಟ್ಟಿ ಅವರ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.

ಸರ್ಕಾರಿ ಪದವಿ ಪೂರ್ವ ಕಾಲೇಜ್ ವಿದ್ಯಾರ್ಥಿನಿ ವಿಜಯಲಕ್ಷ್ಮೀ ಮಠದ ಮಾತನಾಡಿ, ಶಾಲಾ, ಕಾಲೇಜ್​ಗಳಲ್ಲಿ ಎಲ್ಲ ಜಾತಿ ಜನಾಂಗದ ವಿದ್ಯಾರ್ಥಿಗಳು ಒಂದಾಗಿ ವಿದ್ಯಾಭ್ಯಾಸ ಮಾಡುತ್ತೇವೆ. ಆದರೆ, ಸರ್ಕಾರವು ಕೆಲವೊಂದು ಯೋಜನೆಗಳನ್ನು ಕೆಲ ಜಾತಿಯ ವಿದ್ಯಾರ್ಥಿಗಳನ್ನು ಮಾತ್ರ ಸೀಮಿತಗೊಳಿಸಿ ರೂಪಿಸುವುದು ಸರಿಯಲ್ಲ. ಹಿಂದೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾದ ಸಮಯದಲ್ಲಿ ಎಲ್ಲ ಶಾಲಾ, ಕಾಲೇಜ್ ವಿದ್ಯಾರ್ಥಿಗಳಿಗೆ ಉಚಿತ ಬಸ್​ಪಾಸ್ ನೀಡುತ್ತೇವೆ ಎಂದು ಘೂಷಿಸಿದ್ದರು. ಆ ಪ್ರಕಾರ ಈಗಿನ ಕಾಂಗ್ರೆಸ್, ಜೆಡಿಎಸ್ ಸಮ್ಮಿಶ್ರ ಸರ್ಕಾರವು ಜಾತಿ, ಧರ್ಮ, ವರ್ಗ ಬೇಧವಿಲ್ಲದೇ ಎಲ್ಲ ಶಾಲಾ, ಕಾಲೇಜ್ ವಿದ್ಯಾರ್ಥಿಗಳಿಗೆ ಉಚಿತ ಬಸ್​ಪಾಸ್ ನೀಡಬೇಕು ಎಂದು ಒತ್ತಾಯಿಸಿದರು.

ಪಟ್ಟಣದ ಜಗದ್ಗುರು ಅನ್ನದಾನೀಶ್ವರ ಕಾಲೇಜ್​ನಿಂದ ಹೊರಟ ಮೆರವಣಿಗೆ ಹೊರಟ ಪ್ರತಿಭಟನಾಕಾರರು ಕೊಪ್ಪಳ ವೃತ್ತದಲ್ಲಿ ಮಾನವ ಸರಪಳಿ ನಿರ್ವಿುಸಿದರು.

ಜಿಲ್ಲಾ ಹಸಿರು ಸೇನೆ ಅಧ್ಯಕ್ಷ ಶಿವಾನಂದ ಇಟಗಿ, ಆನಂದಗೌಡ ಪಾಟೀಲ, ಮಂಜುನಾಥ ಮುಧೋಳ, ಶಿವು ನವಲಗುಂದ, ಚಂದ್ರಕಾಂತ ಉಳ್ಳಾಗಡ್ಡಿ, ರುದ್ರಪ್ಪ ಲದ್ದಿ, ಬಸವರಾಜ ಮುಂಡವಾಡ, ಮುತ್ತು ಅಳವಂಡಿ, ಮೈಲಾರಪ್ಪ ಕಲಕೇರಿ, ವಿದ್ಯಾರ್ಥಿಗಳಾದ ಮಂಜುಳಾ ಹಳ್ಳಿ, ಪೂಜಾ ರಂಗಾರಿ, ಹೇಮಾವತಿ ಕನೋಲ, ಸನ್ನಬಾನು ಮಕಾಂದಾರ, ಅನಿತಾ ಪಾಟೀಲ, ಶಿಮಾ ಕಾರಬಾರಿ, ಕುಮಾರ ಲಮಾಣಿ, ಆಶಾ ಲಮಾಣಿ, ಜ್ಯೋತಿ ಕುಕನೂರ, ಉಮೇಶ ಛಲವಾದಿ, ಬಸವರಾಜ ತಳಕಲ್, ಅಕ್ಷತಾ ಕವಲೂರ, ಪವಿತ್ರಾ ಮುಂಡವಾಡ, ಸುನೀತಾ ನಂದಗಾವಿ, ಪಲ್ಲವಿ ತಳವಾರ, ಮತ್ತಿತರರಿದ್ದರು.

ರೈತರಲ್ಲಿ ತಾರತಮ್ಯ ಬೇಡ

ಹೋರಾಟಗಾರ ವೈ.ಎನ್. ಗೌಡರ ಮಾತನಾಡಿ, ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಲ್ಲಿ ತಾಲೂಕಿನ ರೈತರಲ್ಲಿ ತಾರತಮ್ಯ ಮಾಡಲಾಗುತ್ತಿದೆ. ಒಬ್ಬ ರೈತನಿಗೆ ಪ್ರತಿ ಎಕರೆಗೆ 10ಸಾವಿರ ರೂ.ವಿಮೆ ಹಣ ನೀಡಿದರು. ಮತ್ತೊಬ್ಬ ರೈತನ ಪ್ರತಿ ಎಕರೆಗೆ ಕೇವಲ 500 ರೂ. ನೀಡಲಾಗಿದೆ. ಆದ್ದರಿಂದ ಮುಖ್ಯಮಂತ್ರಿಗಳು ಸೂಕ್ತ ವರದಿ ಪರಿಶೀಲಿಸಿ ತಾರತಮ್ಯವಿಲ್ಲದೆ ರೈತರು ತುಂಬಿರುವ ಪ್ರಿಮಿಯಂ ಹಣದ ಅನುಸಾರ ಫಸಲ್ ಬಿಮಾ ಯೋಜನೆಯ ಹಣವನ್ನು ವಿತರಿಸಬೇಕು ಎಂದು ಮನವಿ ಮಾಡಿದರು.

Leave a Reply

Your email address will not be published. Required fields are marked *