ಮಳಖೇಡ: ಮಲಕೂಡ ಕ್ರಾಸ್ ಬಳಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಬಸ್ ನಿಲುಗಡೆ ಮಾಡಬೇಕು. ಬೆಳಗ್ಗೆ ಮತ್ತು ಸಂಜೆ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಗ್ರಾಮದೊಳಗೆ ಎರಡು ಬಸ್ ವ್ಹಾಯಾ ಮಾಡಬೇಕು ಎಂದು ಒತ್ತಾಯಿಸಿ ಗ್ರಾಮದ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಮಂಗಳವಾರ ಬೆಳಗ್ಗೆ ಪ್ರತಿಭಟನೆ ಮಾಡಿ ರಾಜ್ಯ ಹೆದ್ದಾರಿ ಬಂದ್ ಮಾಡಿದರು.
ಇಲ್ಲಿ ಬಸ್ ನಿಲುಗಡೆ ಮಾಡದಿರುವುದರಿಂದ ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಇತ್ತೀಚೆಗೆ ಸೇಡಂ ಹಾಗೂ ಮಳಖೇಡಕ್ಕೆ ಶಾಲೆಗೆ ಸಮಯಕ್ಕೆ ಹಾಜರಾಗದ ವಿದ್ಯಾರ್ಥಿಗಳಿಗೆ ಕ್ಲಾಸ್‌ನಿಂದ ಹೊರಹಾಕಲಾಗಿದೆ. ಪರೀಕ್ಷೆ ಸಂದರ್ಭದಲ್ಲೂ ಸಹ ವಿದ್ಯಾರ್ಥಿಗಳು ಕಷ್ಟ ಅನುಭವಿಸುತ್ತಿದ್ದಾರೆ. ಶಾಲೆ ಬಿಟ್ಟು ಬರುವಾಗ ಬಸ್ ಇಲ್ಲದ ಕಾರಣ ರಾತ್ರಿ ಹೊತ್ತಿನಲ್ಲಿ ಮನೆಗೆ ಬರುವಂತಾಗುತ್ತಿದೆ. ಬಸ್ ನಿಲುಗಡೆಗಾಗಿ ಘಟಕ ವ್ಯವಸ್ಥಾಪಕರ, ಡಿಟಿಒ ಅವರ ಆದೇಶವಿದ್ದರೂ ಸಹ ಕೆಲ ನಿರ್ವಾಹಕರು, ಚಾಲಕರು ಬಸ್ ನಿಲುಗಡೆ ಮಾಡುತ್ತಿಲ್ಲವೆಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು.
ನಿಲುಗಡೆ ಆದೇಶ ಪತ್ರ ತೋರಿಸಿದರೆ ಅದರಲ್ಲಿ ಚುಡುವಾ ಹಾಕಿ ತಿನ್ನಿ, ಇಲ್ಲವಾದರೇ ಮನೆಯಲ್ಲಿ ಊಟ ಮಾಡಿ ಮಲಗಿಕೊಳ್ಳಿ ಎಂದು ಅಂದ ನಿರ್ವಾಹಕ ಶಿವಾಜಿ ರಾಠೋಡ್ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು. ಜತೆಗೆ ಇವತ್ತಿನಿಂದಲೇ ವ್ಯವಸ್ಥೆ ಸರಿಪಡಿಸುವವರೆಗೆ ಪ್ರತಿಭಟನೆ ಹಿಂತೆಗೆದುಕೊಳ್ಳುವುದಿಲ್ಲ ಎಂದು ವಿದ್ಯಾರ್ಥಿಗಳು ಪಟ್ಟು ಹಿಡಿದರು.
ಸ್ಥಳಕ್ಕೆ ಆಗಮಿಸಿದ ಸಂಸದ ಡಾ.ಉಮೇಶ ಜಾಧವ್ ಸಾರಿಗೆ ಸಂಸ್ಥೆ ಹಿರಿಯ ಅಧಿಕಾರಿಯೊಂದಿಗೆ ದೂರವಾಣಿ ಮೂಲಕ ಮಾತನಾಡಿ, ಬಸ್ ನಿಲುಗಡೆಗೆ ಹಾಗೂ ಮಲಕೂಡದೊಳಗೆ ವ್ಹಾಯಾ ಮಾಡಲು ತಕ್ಷಣ ಕ್ರಮಕೈಗೊಳ್ಳುವಂತೆ ಸೂಚಿಸಿ, ವಿದ್ಯಾರ್ಥಿನಿಯರಿಗೆ ಭರವಸೆ ನೀಡಿದಾಗÀ ಪ್ರತಿಭಟನೆ ಹಿಂತೆಗೆದುಕೊಳ್ಳಲಾಯಿತು.
ತಹಸೀಲ್ದಾರ ಷಾಷಾವಲಿ, ಪಿಎಸ್‌ಐ ಚೇತನ್, ಡಿಟಿಒ, ಸಾರಿಗೆ ಸಂಸ್ಥೆ ಅಧಿಕಾರಿಗಳು, ಆರ್.ಐ ಕೊಟ್ರೇಶ, ವಿ.ಎ. ನರಸರೆಡ್ಡಿ, ವಿದ್ಯಾರ್ಥಿನಿಯರಾದ ಗೌರಿ ನೂರಂದಗೌಡ, ಭಾಗ್ಯಶ್ರೀ ಐನಾಪುರ, ನಂದಿನಿ ಕುಂಬಾರ, ಪಲ್ಲವಿ ರುದ್ನೂರ, ದೇವಕಿ ನೈಕೋಡಿ, ಸುಮಾ ತಳವಾರ, ಗೀತಾ ಪೂಜಾರಿ, ಸಿಂಧು ದಳಪತಿ, ವಿಜಯಲಕ್ಷ್ಮೀ, ಪ್ರಮುಖರಾದ ರೇವಣಸಿದ್ದಪ್ಪ ಅಲ್ದಿ, ವಿಜಯಕುಮಾರ ಪಾಟೀಲ್, ಶಂಕರ ಐನಾಪುರ, ಅಣ್ಣಾರಾವ ನೂರಂದಗೌಡ, ನಾಗರಾಜ ಬಾಳಿ, ಶರಣಪ್ಪ ನೂರಂದಗೌಡ, ಸುರೇಶ ಸಿದ್ದಲಿಂಗೌಡ, ನಾಗರಾಜ ಭರತನೂರ, ನಾಗರಾಜ ಕೊಂಕನಳ್ಳಿ ಪಾಲ್ಗೊಂಡಿದ್ದರು.