ವಿದ್ಯಾರ್ಥಿಗಳ ಉತ್ತಮ ಭವಿಷ್ಯವೇ ದೇಶದ ಭಾಗ್ಯ: ಡಾ.ಹೆಗ್ಗಡೆ

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ಮಕ್ಕಳಲ್ಲಿ ಜ್ಞಾನ ಬೆಳೆಸಿ ವ್ಯಕ್ತಿತ್ವ ಬೆಳೆಸಿಕೊಳ್ಳಲು ಪ್ರೇರೇಪಿಸುವುದೇ ಶಾಂತಿವನ ಟ್ರಸ್ಟ್‌ನ ಉದ್ದೇಶ. ವಿದ್ಯಾರ್ಥಿಗಳನ್ನು ಶ್ರೇಷ್ಠ ಮಾನವರನ್ನಾಗಿಸುವ ಅಗತ್ಯವಿದ್ದು ಸದ್ಗುಣ, ಸದ್ವಿಚಾರ, ಉತ್ತಮ ವಿಷಯಗಳನ್ನು ಬಾಲ್ಯದಲ್ಲಿಯೇ ನೀಡುವ ಅಗತ್ಯವಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹೇಳಿದರು.

ಧರ್ಮಸ್ಥಳದಲ್ಲಿ ಶುಕ್ರವಾರ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ ಹಾಗೂ ಜಿಲ್ಲಾ ಪಂಚಾಯಿತಿ ಸಾರ್ವಜನಿಕ ಶಿಕ್ಷಣ ಇಲಾಖೆ, ಶಾಂತಿವನ ಟ್ರಸ್ಟ್ , ಶ್ರೀ ಕ್ಷೇತ್ರ ಧರ್ಮಸ್ಥಳ ಸಹಯೋಗದಲ್ಲಿ ಆಯೋಜಿಸಲಾಗಿದ್ದ 26ನೇ ವರ್ಷದ ರಾಜ್ಯಮಟ್ಟದ ಜ್ಞಾನ ಗಂಗೆ ಹಾಗೂ ಜ್ಞಾನ ತುಂಗೆ ಪುಸ್ತಕಗಳನ್ನಾಧರಿಸಿದ ಸ್ಪರ್ಧೆಗಳ ಪುರಸ್ಕಾರ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಬದುಕಿನ ಪಾಠ ಕಲಿಸುವ ಕಾರ್ಯಕ್ರಮ ಶಾಂತಿವನ ಟ್ರಸ್ಟ್ ಹಮ್ಮಿಕೊಂಡಿದ್ದು, ವಿದ್ಯಾರ್ಥಿಗಳ ಉತ್ತಮ ಭವಿಷ್ಯವೇ ದೇಶದ ಭಾಗ್ಯ ವಿದ್ಯಾರ್ಥಿಗಳು ಆಸಕ್ತಿಯ ವಿಷಯ ಆಯ್ಕೆ ಮಾಡಿಕೊಂಡು ಅದರಲ್ಲಿಯೂ ಸಾಧಿಸಬೇಕು. ಶಿಕ್ಷಣ ವೃತ್ತಿಯ ಭಾಗವಾದರೆ ಶಿಕ್ಷಣೇತರ ಆಸಕ್ತಿ ಭವಿಷ್ಯದ ಹಾಗೂ ಸಮಾಜದಲ್ಲಿ ಶ್ರೇಷ್ಠ ವ್ಯಕ್ತಿಯಾಗಲು ಸಹಕಾರಿಯಾಗಬಲ್ಲದು. ವಿದ್ಯಾರ್ಥಿಗಳು ಸತ್ಪ್ರಜೆಯಾಗುವುದರಿಂದ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದರು.

ಶುಭಾಶಂಸನೆ ಮಾಡಿದ ಹಾಸ್ಯ ಸಾಹಿತಿ, ವಿಜಯವಾಣಿ ಅಂಕಣಕಾರ ಎಚ್.ಡುಂಡಿರಾಜ್, ಶಿಕ್ಷಣದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿಯೂ ಅವಕಾಶ ನೀಡಿದಾಗ ವಿದ್ಯಾರ್ಥಿಗಳು ಪ್ರತಿಭಾನ್ವಿತರಾಗಲು ಸಾಧ್ಯ. ಶ್ರೇಷ್ಠ ಕವಿಯಾಗಬೇಕಾದರೆ ಪದಗಳೊಂದಿಗೆ ಆಡಬೇಕು. ಬರೆಯಲು, ಓದಲು ಹೆತ್ತವರು ಪ್ರೋತ್ಸಾಹ ನೀಡಿದಾಗ ಮಾತ್ರ ಮಕ್ಕಳು ಬೆಳೆಯಬಲ್ಲರು ಎಂದರು.

ಹಿಂದೆ ಆರ್ಥಿಕ ಬಡತನವಿದ್ದರೂ ದೇಶ ಸಾಂಸ್ಕೃತಿಕವಾಗಿ ಶ್ರೀಮಂತವಾಗಿತ್ತು. ಇಂದು ಆರ್ಥಿಕ ಶ್ರೀಮಂತವಾಗಿ ಸಾಂಸ್ಕೃತಿಕ ಬಡತನವಾಗಿದೆ. ಹಿಂದಿನ ಹಳೇ ಕಟ್ಟಡದಲ್ಲಿ ಸಿಗುತ್ತಿದ್ದ ಉತ್ತಮ ಮತ್ತು ಮೌಲ್ಯಯುತ ಶಿಕ್ಷಣ ಇಂದಿನ ದೊಡ್ಡ ಕಾನ್ವೆಂಟ್‌ಗಳಲ್ಲಿಯೂ ಸಿಗುತ್ತಿಲ್ಲ. ಶಿಕ್ಷಣವಿಂದು ಹಣ ಗಳಿಕೆ ಮತ್ತು ಉದ್ಯೋಗ ಗಳಿಕೆಗೆ ಸೀಮಿತವಾಗಿದೆ. ಮಕ್ಕಳ ಮೇಲೆ ಶಿಕ್ಷಣದ ಒತ್ತಡ ಹೇರಲಾಗುತ್ತಿದೆ ವಿನಾ, ಸ್ವಾಮಿ ವಿವೇಕಾನಂದ, ಸರ್‌ಎಂ. ವಿಶ್ವೇಶ್ವರಯ್ಯ ಅವರಂತೆ ಆದರ್ಶರಾಗಿ ಬೆಳೆಯಬೇಕು ಎಂಬುದನ್ನು ಯಾರೂ ಬಯಸುವುದಿಲ್ಲ. ವಿದ್ಯಾರ್ಥಿಗಳು ಬಾಲ್ಯದಲ್ಲಿಯೇ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಇದರಿಂದಾಗಿ ಜ್ಞಾನ ಹೆಚ್ಚುತ್ತದೆ. ಮುಕ್ತ ಮನಸ್ಸಿನಿಂದ ಬರೆಯುವ ಅಭ್ಯಾಸ ಬೆಳೆಸಿದಾಗ ಶ್ರೇಷ್ಠ ಬರಹಗಾರನಾಗಲು ಸಾಧ್ಯ. ಹಸಿ ಮಣ್ಣಿನಂತಿರುವ ಮಕ್ಕಳ ಮನಸ್ಸಿಗೆ ನೈತಿಕ ಮೌಲ್ಯಾಧಾರಿತ ಶಿಕ್ಷಣ ನಿಡಿದಾಗ ಮಕ್ಕಳು ಶ್ರೇಷ್ಠ ವ್ಯಕ್ತಿಯಾಗಲು ಸಾಧ್ಯ ಎಂದರು. ವಿಶ್ವವಿದ್ಯಾಲಯಗಳು ನಡೆಸಬೇಕಾದ ಕಾರ್ಯವನ್ನು ಶಾಂತಿವನ ಟ್ರಸ್ಟ್ ನಡೆಸುತ್ತಿದೆ ಎಂದು ಶ್ಲಾಘಿಸಿದರು.

ಶ್ರದ್ಧಾ ಅಮಿತ್, ಶಿಕ್ಷಣ ಇಲಾಖೆಯ ನಿರ್ದೇಶಕ ಮಧುಕರ್ ಉಪಸ್ಥಿತರಿದ್ದರು.

ಸ್ಪರ್ಧಾ ಕಾರ್ಯಕ್ರಮದಲ್ಲಿ ಕಂಠಪಾಠ, ಭಾಷಣ, ಶ್ಲೋಕ ಕಂಠಪಾಠ, ಸ್ಪರ್ಧೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ತಮ್ಮ ಸಾಧನೆಯನ್ನು ಪ್ರದರ್ಶಿಸಿದರು. ಶಾಂತಿವನ ಟ್ರಸ್ಟ್‌ನ ಯೋಗ ಮತ್ತು ನೈತಿಕ ಶಿಕ್ಷಣದ ನಿರ್ದೇಶಕ ಡಾ.ಐ.ಶಶಿಕಾಂತ್ ಜೈನ್ ಸ್ವಾಗತಿಸಿ, ಪ್ರಸ್ತಾಪಿಸಿದರು. ಶಾಂತಿವನ ಟ್ರಸ್ಟ್ ಕಾರ್ಯದರ್ಶಿ ಬಿ.ಸೀತಾರಾಮ ತೋಳ್ಪಾಡಿತ್ತಾಯ ಅತಿಥಿಗಳ ಸಂದೇಶ ವಾಚಿಸಿದರು. ಶೇಖರ್ ಕಡ್ತಲ ಸ್ಪರ್ಧಾ ವಿಜೇತರ ಪಟ್ಟಿ ವಾಚಿಸಿದರು. ಉಡುಪಿ ಜಿಲ್ಲಾ ಸಂಘಟಕ ಅಶೋಕ್ ಸಿ. ಪೂಜಾರಿ ವಂದಿಸಿದರು. ಶಿಕ್ಷಕ ಸದಾಶಿವ ನಾಯಕ್ ಬಂಟ್ವಾಳ ಕಾರ್ಯಕ್ರಮ ನಿರೂಪಿಸಿದರು.

ಇತರ ಜಿಲ್ಲೆಗಳಿಗೆ ವಿಸ್ತರಣೆ: ಶಾಂತಿವನ ಟ್ರಸ್ಟ್‌ನಿಂದ ಮೌಲ್ಯಾಧರಿತ ಪುಸ್ತಕಗಳನ್ನು ವಿತರಿಸಿ ಸ್ಪರ್ಧೆ ನಡೆಸುತ್ತಿರುವುದರಿಂದ ಶಾಲೆಗಳಲ್ಲಿ ಹಾಗೂ ವಿದ್ಯಾರ್ಥಿಗಳಿಂದ ಹೆಚ್ಚಿನ ಬೇಡಿಕೆ ಬರುತ್ತಿದೆ. ಹೆತ್ತವರು, ಪಾಲಕರೂ ಆಸಕ್ತಿ ವಹಿಸುತ್ತಿದ್ದಾರೆ. ಬೇರೆ ಜಿಲ್ಲೆಗಳಿಂದಲೂ ಬೇಡಿಕೆ ಬರುತ್ತಿದೆ. ಮುಂದಿನ ವರ್ಷದಿಂದ ಉಡುಪಿ, ದಕ್ಷಿಣ ಕನ್ನಡವಲ್ಲದೆ ರಾಜ್ಯದ ಇತರ ಕೆಲವು ಜಿಲ್ಲೆಗಳಿಗೆ ಕಾರ್ಯಕ್ರಮ ವಿಸ್ತರಿಸಲಾಗುವುದು ಎಂದು ವೀರೇಂದ್ರ ಹೆಗ್ಗಡೆ ತಿಳಿಸಿದರು.

ಮಕ್ಕಳು ಓದುವ ಆಸಕ್ತಿ ಮತ್ತು ಬರೆಯುವ ಆಸಕ್ತಿ ಬೆಳೆಸಿಕೊಳ್ಳಬೇಕು. ಇದರಿಂದ ಮನಸ್ಸು ಉಲ್ಲಾಸವಾಗುತ್ತದೆ. ಹಾಸ್ಯ ಮತ್ತು ಕವಿ ಮನಸ್ಸುಗಳು ಇತರರಿಗೂ ಸಂತೋಷವನ್ನು ನೀಡುತ್ತದೆ. ಸಸಿ ಹಂಚಿದರೆ ವನಮಹೋತ್ಸವ, ಖುಷಿ ಹಂಚಿದರೆ ಜೀವನೋತ್ಸಾಹ.
-ಎಚ್.ಡುಂಡಿರಾಜ್, ಹಾಸ್ಯ ಸಾಹಿತಿ