ಚನ್ನರಾಯಪಟ್ಟಣ: ವಿದ್ಯಾರ್ಥಿಗಳು ಗುಣಾತ್ಮಕ ಫಲಿತಾಂಶ ಪಡೆಯುವ ಮೂಲಕ ಉತ್ತಮ ಶೈಕ್ಷಣಿಕ ಭವಿಷ್ಯವನ್ನು ರೂಪಿಸಿಕೊಳ್ಳಬೇಕೆಂದು ಶಾಸಕ ಸಿ.ಎನ್.ಬಾಲಕೃಷ್ಣ ಸಲಹೆ ನೀಡಿದರು.
ಪಟ್ಟಣದ ಡಾ.ಸಿ.ಎನ್.ಬಾಲಕೃಷ್ಣ ಸಭಾಂಗಣದಲ್ಲಿ ಶನಿವಾರ ಗುಣಾತ್ಮಕ ಫಲಿತಾಂಶದ ಉದ್ದೇಶಕ್ಕಾಗಿ ಎಸ್‌ಎಸ್‌ಎಲ್‌ಸಿ ಪೂರ್ವಭಾವಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದಿರುವ ವಿದ್ಯಾರ್ಥಿಗಳಿಗೆ ವಿಜಯಸಂಕಲ್ಪ ಟಾರ್ಗೆಟ್-625 ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಸ್ಪರ್ಧಾತ್ಮಕ ಯುಗದಲ್ಲಿ ವಿಜಯ ಸಂಕಲ್ಪ ತರಬೇತಿಗಳು ಮಕ್ಕಳ ಕಲಿಕೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿಸುತ್ತವೆ. ತಾಲೂಕಿನಲ್ಲಿ 10ನೇ ತರಗತಿಯಲ್ಲಿ ಓದುತ್ತಿರುವ ಮಕ್ಕಳು ತಾಲೂಕಿಗೆ ಉತ್ತಮ ಫಲಿತಾಂಶವನ್ನು ತಂದು ಕೊಡುವುದರ ಮೂಲಕ, ತಾಲೂಕನ್ನು ಪ್ರಥಮ ಸ್ಥಾನಕ್ಕೆ ತರಬೇಕು. ಇದಕ್ಕೆ ಪೂರಕವಾಗಿ ತಾಲೂಕು ಪ್ರೌಢಶಾಲಾ ಶಿಕ್ಷಕರ ಸಂಘ ಉತ್ತಮ ಕೆಲಸ ಮಾಡುತ್ತಿದೆ.ನುರಿತ ಸಂಪನ್ಮೂಲ ವ್ಯಕ್ತಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ದೃಷ್ಟಿಯಲ್ಲಿರಿಸಿಕೊಂಡು ಪಠ್ಯಕ್ಕೆ ಪೂರಕವಾಗಿ ತರಬೇತಿ ನೀಡುತ್ತಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಉತ್ತಮ ಫಲಿತಾಂಶ ಬರಬೇಕಾದರೆ ವಿದ್ಯಾರ್ಥಿಗಳು, ಪಾಲಕರು ಹಾಗೂ ಶಿಕ್ಷಕರು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ದೃಢ ನಿರ್ಧಾರ ಹಾಗೂ ಪರಿಶ್ರಮ ಇದ್ದಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯ. ಹಾಗಾಗಿ ರೂಢಿಸಿಕೊಳ್ಳಬೇಕು. ದೊಡ್ಡ ಕನಸು ಕಾಣಬೇಕು. ಉತ್ತಮ ಬದುಕು ಕಟ್ಟಿಕೊಳ್ಳಲು ದೊಡ್ಡ ಮಟ್ಟದಲ್ಲಿ ಸಿದ್ಧತೆ ಮಾಡಿಕೊಳ್ಳಬೇಕು. ಶಿಕ್ಷಣ ಎಲ್ಲವನ್ನೂ ಕೊಡುವ ಕಾಮಧೇನು. ಅದನ್ನು ಪಡೆದುಕೊಳ್ಳಲು ಸತತ ಪ್ರಯತ್ನ ನಡೆಸಬೇಕು. ಗುರಿ ಸಾಧಿಸಬೇಕು. ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಯಲ್ಲಿ ಸಕ್ರಿಯ ಪಾತ್ರ ವಹಿಸಬೇಕು. ಶಾಲೆ, ಶಿಕ್ಷಕರು ಹಾಗೂ ಪಾಲಕರಿಗೆ ಸಂತೋಷವಾಗುವಂತೆ ನಡೆದುಕೊಳ್ಳಬೇಕು ಎಂದರು.
ತಮ್ಮ ಶಾಲೆಯ ಫಲಿತಾಂಶದ ಜತೆಗೆ ತಾಲೂಕಿನ ಫಲಿತಾಂಶದಲ್ಲಿ ಸುಧಾರಣೆ ತರಲು ಎಲ್ಲ ಶಾಲೆ ಶಿಕ್ಷಕರು ಹಾಗೂ ಸಿಬ್ಬಂದಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಪರೀಕ್ಷೆಗೆ ಇನ್ನೂ ಕೆಲವೇ ದಿನಗಳು ಬಾಕಿ ಇರುವುದರಿಂದ ವಿದ್ಯಾರ್ಥಿಗಳು ಸಮಯ ವ್ಯರ್ಥ ಮಾಡದೆ ಕಲಿಕೆಯತ್ತ ಹೆಚ್ಚಿನ ಗಮನ ಕೊಟ್ಟು ಹೆಚ್ಚು ಅಂಕಗಳೊಂದಿಗೆ ಉತ್ತೀರ್ಣರಾಗಲು ಪ್ರಯತ್ನಿಸಬೇಕು ಎಂದು ಕಿವಿಮಾತು ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎನ್.ದೀಪಾ ಮಾತನಾಡಿ, ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆಗಾಗಿ ಇಲಾಖೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ವಿದ್ಯಾರ್ಥಿಗಳ ಗುಣಾತ್ಮಕ ಫಲಿತಾಂಶಕ್ಕಾಗಿ ಪ್ರತಿ ಶಿಕ್ಷಕರು ಶ್ರಮಿಸಬೇಕು. ಕಡಿಮೆ ಅಂಕ ಗಳಿಸುವ ಸಂಭಾವ್ಯ ವಿದ್ಯಾರ್ಥಿಗಳಿಗೆ ಪ್ರತ್ಯೇಕ ತರಬೇತಿ ನೀಡಿ ಪರೀಕ್ಷೆಯನ್ನು ಆತ್ಮವಿಶ್ವಾಸದಿಂದ ಬರೆಯಲು ಅವರಿಗೆ ಮಾರ್ಗದರ್ಶನ ನೀಡಲಾಗುತ್ತಿದೆ. ಗುಣಾತ್ಮಕ ಫಲಿತಾಂಶದ ಉದ್ದೇಶಕ್ಕಾಗಿ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಆಯೋಜಿಸಿರುವ ವಿಜಯ ಸಂಕಲ್ಪ ಕಾರ್ಯಕ್ರಮ ಅತ್ಯಂತ ಉಪಯುಕ್ತವಾಗಿದೆ. ಎಸ್‌ಎಸ್‌ಎಲ್‌ಸಿ ಫಲಿತಾಂಶದ ಮೇಲೆ ಇದು ಸಕಾರಾತ್ಮಕ ಪರಿಣಾಮ ಬೀರಲಿದೆ ಎಂದು ತಿಳಿಸಿದರು.
ವಿಜಯ ಸಂಕಲ್ಪ ಕಾರ್ಯಕ್ರಮಕ್ಕೆ ಆರ್ಥಿಕ ನೆರವು ನೀಡಿದ ರೋಟರಿ ಕ್ಲಬ್‌ನ ಅಧ್ಯಕ್ಷ ಬಿ.ವಿ.ವಿಜಯ್ ಕುಮಾರ್ ಹಾಗೂ ಹ್ಯಾಪಿ ಹ್ಯಾಂಡ್ ಟ್ರಸ್ಟ್‌ನ ಗುರು ಅವರನ್ನು ಸನ್ಮಾನಿಸಲಾಯಿತು. ಅಕ್ಷರ ದಾಸೋಹ ಕಾರ್ಯಕ್ರಮದ ಸಹಾಯಕ ನಿರ್ದೇಶಕ ಉಮಾಶಂಕರ್, ರೋಟರಿ ಕ್ಲಬ್ ಚನ್ನರಾಯಪಟ್ಟಣ ವಿಷನ್‌ನ ಅಧ್ಯಕ್ಷ ಬಿ.ವಿ.ವಿಜಯ್ ಕುಮಾರ್, ಡಾ.ಎಸ್.ಎಸ್.ಕುಮುದಾ, ಜ್ಯೋತಿ, ಉದ್ಯಮಿ ಯೋಗೇಶ್ ಇತರರು ಇದ್ದರು.
ಅತಿ ಕಡಿಮೆ ಅಂಕಗಳನ್ನು ಪಡೆಯುವಂಥ ವಿದ್ಯಾರ್ಥಿಗಳನ್ನು ಸರ್ಕಾರಿ ಹಾಗೂ ಅನುದಾನಿತ ಪ್ರೌಢಶಾಲೆಗಳಲ್ಲಿ ವಿಷಯವಾರು ಶಿಕ್ಷಕರು ಗುರುತಿಸಿ ವಿದ್ಯಾರ್ಥಿಗಳು ಓದುವುದನ್ನು ಖಚಿತ ಪಡಿಸಿಕೊಳ್ಳುತ್ತಿದ್ದಾರೆ. ಶಾಲಾವಧಿಯ ಕೊನೆಯ ಅವಧಿಯಲ್ಲಿ ವಿದ್ಯಾರ್ಥಿಗಳನ್ನು ಶಾಲಾ ಆವರಣದ ಸೂಕ್ತ ಸ್ಥಳದಲ್ಲಿ ಕೂರಿಸಿ, ನಿರಂತರ ಓದಿಗೆ ಪ್ರೇರೇಪಿಸಲಾಗುತ್ತಿದೆ. ತಾಲೂಕಿನಲ್ಲಿ ಒಟ್ಟು 78 ಪ್ರೌಢಶಾಲೆಗಳಿದ್ದು, 2872 ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ನೋಂದಣಿ ಮಾಡಿಸಿದ್ದಾರೆ. ಕಳೆದ ಸಲಕ್ಕಿಂತ ಹೆಚ್ಚಿನ ಫಲಿತಾಂಶ ಬರುವಂತೆ ಮಾಡಲು, ವಿನೂತನ ಕಾರ್ಯಕ್ರಮಗಳನ್ನು ಹಂತ ಹಂತವಾಗಿ ಜಾರಿಗೊಳಿಸಲಾಗಿದೆ ಎಂದು ಕ್ಷೇತ್ರ ಸಮನ್ವಯ ಅಧಿಕಾರಿ ಕೆ.ಎನ್. ಅನಿಲ್ ಹೇಳಿದರು.