More

    ಹುಟ್ಟುಹಬ್ಬ ಪಾರ್ಟಿ: ಜ್ಞಾನಭಾರತಿ ಹಾಸ್ಟೆಲ್​ನಲ್ಲಿ ವಿದ್ಯಾರ್ಥಿಗಳ ಹೊಡೆದಾಟ

    ಬೆಂಗಳೂರು: ಜ್ಞಾನಭಾರತಿ ವಿಶ್ವವಿದ್ಯಾಲಯದ ಹಾಸ್ಟೆಲ್ 2ರಲ್ಲಿ ಸ್ನಾತಕೋತ್ತರ ಪದವಿ ವಿದ್ಯಾರ್ಥಿಯ ಹುಟ್ಟುಹಬ್ಬ ಆಚರಣೆ ವೇಳೆ ಕ್ಷುಲ್ಲಕ ಕಾರಣಕ್ಕೆ ಗಲಾಟೆ ತೆಗೆದ ಹಿರಿಯ ವಿದ್ಯಾರ್ಥಿಗಳ ಗುಂಪು ಇಬ್ಬರ ಮೇಲೆ ಹಲ್ಲೆ ನಡೆಸಿದೆ.

    ವಿದ್ಯಾರ್ಥಿಗಳಾದ ಬಸವರಾಜ್ (24) ಹಾಗೂ ಮಾರಪ್ಪ ಹಲ್ಲೆಗೆ ಒಳಗಾದವರು. ಪಿಎಚ್.ಡಿ ವಿದ್ಯಾರ್ಥಿಗಳು ಎನ್ನಲಾದ ರವಿತೇಜ, ಶ್ರೀಕಾಂತ್, ಸ್ಟಾಲಿನ್, ಕೃಷ್ಣ ಹಾಗೂ ಬಿಪಿ.ಎಡ್ ವಿದ್ಯಾರ್ಥಿಗಳು ಹಲ್ಲೆ ಆರೋಪಿಗಳು. ಅವರಲ್ಲಿ ಕೆಲವರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿರುವುದಾಗಿ ಜ್ಞಾನಭಾರತಿ ಠಾಣೆ ಪೊಲೀಸರು ತಿಳಿಸಿದ್ದಾರೆ.

    ಶುಕ್ರವಾರ (ಜ.10) ಮಾರಪ್ಪನ ಹುಟ್ಟುಹಬ್ಬವಿತ್ತು. ಈ ಹಿನ್ನೆಲೆ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಸೇರಿ ಹಾಸ್ಟೆಲ್ 2ರ 163ನೇ ಕೊಠಡಿಯಲ್ಲಿ ಹುಟ್ಟುಹಬ್ಬ ಪಾರ್ಟಿ ಏರ್ಪಡಿಸಿದ್ದರು. ಆತನ ಸ್ನೇಹಿತ ಬಸವರಾಜ್ ಕೂಡ ಪಾರ್ಟಿಯಲ್ಲಿ ಪಾಲ್ಗೊಂಡಿದ್ದ. ಕೇಕ್ ಕತ್ತರಿಸಿದ ಬಳಿಕ ಅದೇ ಕೊಠಡಿಯಲ್ಲಿ ಊಟ ಮಾಡಿದ್ದರು. ಈ ವೇಳೆ ಹಿರಿಯ ವಿದ್ಯಾರ್ಥಿಗಳಾದ ರವಿತೇಜ, ಶ್ರೀಕಾಂತ್, ಸ್ಟಾಲಿನ್, ಕೃಷ್ಣ ಹಾಗೂ ಇತರೆ ಬಿಪಿಎಡ್ ವಿದ್ಯಾರ್ಥಿಗಳು 163ನೇ ಕೊಠಡಿಗೆ ನುಗ್ಗಿ ಬಸವರಾಜ್ ಜತೆ ಗಲಾಟೆ ತೆಗೆದಿದ್ದಾರೆ. ಆಗ ಕೊಠಡಿಯಿಂದ ಹೊರಹೋಗಲು ಮುಂದಾದಾಗ ತಮ್ಮನ್ನು ಥಳಿಸಿದ್ದಾರೆ ಎಂದು ಬಸವರಾಜ್ ಮತ್ತು ಮಾರಪ್ಪ ದೂರಿನಲ್ಲಿ ಆರೋಪಿಸಿದ್ದಾರೆ.

    ಹಲ್ಲೆ ಖಂಡಿಸಿ ಹಾಸ್ಟೆಲ್ ಮುಂಭಾಗ ಪ್ರತಿಭಟನೆ

    ಹಾಸ್ಟೆಲ್​ಗೆ ನುಗ್ಗಿ ಹಲ್ಲೆ ನಡೆಸಿದ ಹಿರಿಯ ವಿದ್ಯಾರ್ಥಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಶುಕ್ರವಾರ ತಡರಾತ್ರಿ ಹಾಸ್ಟೆಲ್ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು. ಮದ್ಯ ಸೇವಿಸಿ ಹಾಸ್ಟೆಲ್​ಗೆ ನುಗ್ಗಿದ್ದಾರೆ. ಅದನ್ನು ಪ್ರಶ್ನಿಸಿದ್ದಕ್ಕೆ ಅವಾಚ್ಯವಾಗಿ ನಿಂದಿಸಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದರು. ಶನಿವಾರ (ಜ.11) ಬೆಳಗ್ಗೆ ಹಾಸ್ಟೆಲ್​ಗೆ ಆಗಮಿಸಿದ ವಿವಿ ಕುಲಪತಿ ಪ್ರೊ. ಕೆ.ಆರ್.ವೇಣುಗೋಪಾಲ್ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿ, ವಿದ್ಯಾರ್ಥಿಗಳ ಮನವೊಲಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಸಿನಿಮಾ

    Latest Posts