ಬ್ಯಾಡಗಿ: ಸರ್ಕಾರಿ ಶಾಲೆಗಳಿಗೆ 2022-23ರಲ್ಲಿ ಮಂಜೂರಾದ ಶೌಚಗೃಹಗಳ ಕಟ್ಟಡ ನಿರ್ಮಾಣ ಅಪೂರ್ಣವಾಗಿದ್ದು, ವಿದ್ಯಾರ್ಥಿಗಳು ಶೌಚಕ್ಕೆ, ಮೂತ್ರ ವಿಸರ್ಜನೆಗೆ ಪರದಾಡುವಂತಾಗಿದೆ.
ತಾಲೂಕಿನ 15 ಗ್ರಾಮಗಳ ಪ್ರಾಥಮಿಕ ಹಾಗೂ ಬ್ಯಾಡಗಿ ಪಟ್ಟಣದ 12 ಪ್ರಾಥಮಿಕ ಶಾಲೆಗಳಲ್ಲಿ ಶೌಚಗೃಹ ನಿರ್ವಿುಸುವಂತೆ ಪಾಲಕರು ಹಾಗೂ ವಿವಿಧ ಸಂಘಟನೆಗಳು ಹೋರಾಟ ನಡೆಸಿದ್ದವು. ಎರಡು ವರ್ಷಗಳ ಹಿಂದೆ 27 ಶಾಲೆಗಳಿಗೆ ಶೌಚಗೃಹಗಳು ಮಂಜೂರಾಗಿವೆ.
ಪಟ್ಟಣದ ಸರ್ಕಾರಿ ಪ್ರಾಥಮಿಕ ಶಾಲೆ ನೆಹರು ನಗರ, ಉರ್ದು ಹೆಣ್ಣು ಮಕ್ಕಳ ಶಾಲೆ, ಎಸ್ಜೆಜೆಎಂ, ಸಂಗಮೇಶ್ವರ ನಗರ, ಪಟ್ಟಣದ ಮಾದರಿ ಪ್ರಾಥಮಿಕ ಶಾಲೆ, ಶಿವಪುರ ಬಡಾವಣೆ, ಕೋಳೂರು ಕ್ಯಾಂಪ್, ಈದ್ಗಾ ಪ್ರದೇಶದ ಶಾಲೆ, ಬೆಟ್ಟದಮಲ್ಲೇಶ್ವರ ಬಡಾವಣೆ, ಅಗಸನಹಳ್ಳಿ ಹಿರಿಯ ಹಾಗೂ ಕಿರಿಯ ಪ್ರಾಥಮಿಕ ಶಾಲೆಗಳಿಗೆ ತಲಾ 5.20 ಲಕ್ಷ ರೂಪಾಯಿಯಂತೆ ಒಟ್ಟು 62.40 ಲಕ್ಷ ರೂ. ಮಂಜೂರಾಗಿದೆ. ಕೆಆರ್ಐಡಿಎಲ್ನಿಂದ ಪಟ್ಟಣದಲ್ಲಿ 12 ಕಟ್ಟಡ ನಿರ್ವಿುಸುತ್ತಿದ್ದು, ಇಂಜಿನಿಯರ್ಗಳ ನಿರ್ಲಕ್ಷ್ಯದಿಂದ ಕಾಮಗಾರಿ ಪೂರ್ಣಗೊಂಡಿಲ್ಲ. ಕಾಮಗಾರಿ ಮುಗಿಸುವಂತೆ ಎಸ್ಡಿಎಂಸಿ, ಮುಖ್ಯ ಶಿಕ್ಷಕರು, ಪಾಲಕರು ಸಾಕಷ್ಟು ಬಾರಿ ದೂರಿತ್ತರೂ ಇಂದಿಗೂ ಪರಿಹಾರ ಸಿಕ್ಕಿಲ್ಲ.
ತಾಲೂಕಿನ ಹೊಸ ಶಿಡೇನೂರು ಮಾದರಿ ಪ್ರಾಥಮಿಕ ಶಾಲೆ, ಹೆಡಿಗ್ಗೊಂಡ ಹಿರಿಯ ಪ್ರಾಥಮಿಕ ಶಾಲೆ, ಕಾಶಂಬಿ ಕಿರಿಯ ಪ್ರಾಥಮಿಕ ಶಾಲೆ, ಬಡಮಲ್ಲಿ ಹಿರಿಯ ಪ್ರಾಥಮಿಕ ಶಾಲೆ, ಬಡಮಲ್ಲಿ ತಾಂಡಾ ಶಾಲೆ, ಛತ್ರದ ನಿಂಗಮ್ಮ ಕಳಸೂರುಮಠ ಉನ್ನತೀಕರಿಸಿದ ಶಾಲೆ, ಸೂಡಂಬಿ, ಕದರಮಂಡಲಗಿ, ತುಮರಿಕೊಪ್ಪ, ಬುಡಪನಹಳ್ಳಿ, ಅಳಲಗೇರಿ, ಅಂಗರಗಟ್ಟಿ, ಚಿಕ್ಕಬಾಸೂರು, ಸಿದ್ದಾಪುರ, ಕಲ್ಲೆದೇವರ ತಾಂಡಾಗಳ ಶಾಲೆಗಳು ಸೇರಿದಂತೆ ಒಟ್ಟು 15 ಶಾಲೆಗಳಿಗೆ ಶಿಕ್ಷಣ ಇಲಾಖೆ ಹಾಗೂ ಗ್ರಾಮ ಪಂಚಾಯಿತಿ ಜಂಟಿಯಾಗಿ ತಲಾ 5 ಲಕ್ಷ ರೂ.ವೆಚ್ಚದಲ್ಲಿ ಒಟ್ಟು 75 ಲಕ್ಷ ರೂ. ವೆಚ್ಚದಲ್ಲಿ ಶೌಚಗೃಹ ಕಟ್ಟಡ ನಿರ್ವಿುಸಲಾಗುತ್ತಿದೆ.
ಶಾಲೆಗಳಲ್ಲಿ ಮಕ್ಕಳ ಅನುಪಾತಕ್ಕೆ ತಕ್ಕಂತೆ ಶೌಚಗೃಹಗಳಿರಬೇಕು. ಆದರೆ, ಎಲ್ಲಿಯೂ ಈ ನಿಯಮ ಅನ್ವಯವಾಗಿಲ್ಲ. ಕೆಲ ಶಾಲೆಗಳಲ್ಲಿ ನೀರಿನ ಕೊರತೆಯಿಂದ ವಾತಾವರಣ ಕೆಟ್ಟು ಹೋಗಿವೆ. ಬಹುತೇಕ ಮಕ್ಕಳು ಬಯಲು ಆಶ್ರಯಿಸಿದರೆ, ಕೆಲ ಮಕ್ಕಳು ಮನೆ ಆಶ್ರಯಿಸಿದ್ದಾರೆ. ಆದರೆ, ಶಾಲಾ ಅವಧಿಯಲ್ಲಿ ಮಕ್ಕಳು ಅನುಭವಿಸುವ ಸಂಕಟ ಹೇಳತೀರದು. ಈಗ ಮಂಜೂರಾದ ಶೌಚಗೃಹಗಳನ್ನು ನಿರ್ವಿುಸಲು ಸಂಬಂಧಿಸಿದ ಗುತ್ತಿಗೆದಾರರು ವರ್ಷಗಟ್ಟಲೆ ವಿಳಂಬ ಮಾಡುತ್ತಿರುವುದು ಪಾಲಕರು ಹಾಗೂ ಶಿಕ್ಷಕರ ಆಕ್ರೋಶಕ್ಕೆ ಕಾರಣವಾಗಿದೆ.
ಶಿಕ್ಷಣ ಇಲಾಖೆ ಮೌನ: 2022-23ರಲ್ಲಿ ಗ್ರಾಮೀಣ ಪ್ರದೇಶದ ಶಾಲೆಗಳಿಗೆ ಮಂಜೂರಾದ ಶೌಚಗೃಹ ಕಟ್ಟಡಗಳ ಕಾಮಗಾರಿಯನ್ನು ಸ್ಥಳೀಯ ಪಂಚಾಯಿತಿಗಳು ಇನ್ನೂ ಕೈಗೆತ್ತಿಕೊಂಡಿಲ್ಲ. ಪಟ್ಟಣದಲ್ಲಿ ಶಾಲೆಗಳಲ್ಲಿ ಕಟ್ಟಡಗಳು ಇಂದಿಗೂ ಪೂರ್ಣಗೊಂಡಿಲ್ಲ. ಶಾಲೆಯ ಆವರಣದಲ್ಲಿ ಹಾಕಿದ ಕಟ್ಟಡ ಸಾಮಗ್ರಿಗಳಿಂದ ಮಕ್ಕಳಿಗೆ ಆಟವಾಡಲು ತೊಂದರೆಯಾಗುತ್ತಿದೆೆ. ಕಾಮಗಾರಿಗೆ ಬಳಸಿದ ಸಿಮೆಂಟ್ ಇಟ್ಟಿಗೆ ಸೇರಿದಂತೆ ಕೆಲ ಸಾಮಗ್ರಿಗಳು ಕಳಪೆಯಾಗಿವೆ ಎಂದು ಪಾಲಕರು ಆರೋಪಿಸಿದ್ದಾರೆ. ಬಿಇಒ ಕೂಡಲೇ ಸಂಬಂಧಿಸಿದ ಅಕಾರಿಗಳ ಮೇಲೆ ಒತ್ತಡ ತರುವ ಮೂಲಕ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಬೇಕಿದೆ.
ತಾಲೂಕಿನ ಎಲ್ಲ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಮಕ್ಕಳಿಗೆ ಶೌಚಗೃಹ ಸೇರಿದಂತೆ ಮೂಲಸೌಕರ್ಯ ಕಲ್ಪಿಸಲಾಗಿದೆ. ಹೊಸದಾಗಿ ಕೆಲ ಶಾಲೆಗಳಲ್ಲಿ ಕಟ್ಟಡ ಶುರುವಾಗಿವೆ. ಗುತ್ತಿಗೆದಾರರ ವಿಳಂಬ ಇತ್ಯಾದಿ ಸಮಸ್ಯೆಗಳಿಂದ ಕಾಮಗಾರಿ ಸ್ಥಗಿತಗೊಂಡಿದೆ. ಶೀಘ್ರವೇ ಸಂಬಂಧಿಸಿದವರ ಗಮನಕ್ಕೆ ತಂದು ಅನುಕೂಲ ಕಲ್ಪಿಸುತ್ತೇನೆ.
| ಎಸ್.ಜಿ. ಕೋಟಿ, ಕ್ಷೇತ್ರ ಶಿಕ್ಷಣಾಧಿಕಾರಿ ಬ್ಯಾಡಗಿ
ಪಟ್ಟಣದಲ್ಲಿ ಎಸ್ಜೆಜೆಎಂ ಶಾಲೆ ಶೌಚಗೃಹ ಕಾಮಗಾರಿ ವಿಳಂಬವಾಗಿದ್ದು, ಉಳಿದ ಎಲ್ಲ ಕಟ್ಟಡಗಳು ನಿರ್ಮಾಣ ಹಂತದಲ್ಲಿವೆ. ಅನುದಾನ ಈಗ ಪೂರ್ಣಪ್ರಮಾಣದಲ್ಲಿ ಬಿಡುಗಡೆಯಾಗಿದ್ದು, ಶೀಘ್ರದಲ್ಲೆ ಕಟ್ಟಡ ಪೂರ್ಣಗೊಳಿಸಲಾಗುವುದು.
| ಆರ್. ಸಿದ್ದೇಶ್ವರ, ಕೆಆರ್ಐಡಿಎಲ್ ಇಂಜಿನಿಯರ್