ಚಿಕ್ಕಮಗಳೂರು: ವಿದ್ಯಾರ್ಥಿಗಳಿಗೆ ಪದವಿ ಹಂತವು ಬಹಳ ಪ್ರಮುಖ ಘಟ್ಟ. ಈ ಹಂತದಲ್ಲಿ ಪರಿಶ್ರಮದಿಂದ ಓದಿದಾಗ ಜೀವನದ ಗುರಿ ಮುಟ್ಟಲು ಸಾಧ್ಯ ಆದಿಚುಂಚನಗಿರಿ ಸಂಸ್ಥಾನದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.
ನಗರದ ಎಐಟಿ ಕಾಲೇಜಿನಲ್ಲಿ ಬುಧವಾರ ಆಯೋಜಿಸಿದ್ದ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಸ್ವಾಗತ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಅವರು, ಸಮಯ ವ್ಯರ್ಥ ಮಾಡಿದರೆ ಜೀವನ ರೂಪಿಸಿಕೊಳ್ಳುವುದು ಕಷ್ಟವಾಗಲಿದೆ ಎಂದರು.
ವಿದ್ಯಾರ್ಥಿಗಳು ಏಕಾಗ್ರತೆಯಿಂದ ಓದಿನ ಕಡೆ ಗಮನಹರಿಸಬೇಕು. ಓದಿನ ಜತೆಗೆ ಕೌಶಲ ತರಬೇತಿ ಪಡೆದುಕೊಳ್ಳಬೇಕು. ದೇಶ, ಅಂತಾರಾಷ್ಟ್ರೀಯ ಮಟ್ಟದಲ್ಲಿ ತಂತ್ರಜ್ಞಾನವು ಬಹಳಷ್ಟು ಮುಂದುವರಿದಿದೆ. ಪ್ರತಿ ಕ್ಷೇತ್ರದ ಬಗ್ಗೆಯೂ ಸಾಮಾನ್ಯ ಜ್ಞಾನ ಪಡೆದುಕೊಳ್ಳಬೇಕು. ಯಾವುದೇ ಕ್ಷೇತ್ರದಲ್ಲಿ ಮುಂದುವರಿಯಬೇಕಾದರೆ ಶಿಕ್ಷಣ ಅಗತ್ಯ ಎಂದು ತಿಳಿಸಿದರು.
ಶಾಸಕ ಎಚ್.ಡಿ.ತಮ್ಮಯ್ಯ ಮಾತನಾಡಿ, ವಿದ್ಯಾರ್ಥಿಗಳಿಗೆ ಜೀವನದಲ್ಲಿ ಯಶಸ್ಸು ಮತ್ತು ವೈಫಲ್ಯ ಎರಡರ ಬಗ್ಗೆಯೂ ಅರಿವು ಮೂಡಿಸಬೇಕು. ಆಗ ಅವರು ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಮುಂದಾಗುತ್ತಾರೆ. ಪ್ರತಿಯೊಬ್ಬರಿಗೂ ಜೀವನದಲ್ಲಿ ಸಮಸ್ಯೆಗಳು ಬಂದೇ ಬರುತ್ತವೆ. ಆದರೆ ಅದಕ್ಕೆ ಪರಿಹಾರವೂ ಇದೆ. ಆತ್ಮಸ್ಥೈರ್ಯದಿಂದ ಸವಾಲುಗಳನ್ನು ಎದುರಿಸಿದಾಗ ಗುರಿ ಸಾಧನೆ ಸಾಧ್ಯ ಎಂದು ಹೇಳಿದರು.
ಆದಿಚುಂಚನಗಿರಿ ಸಂಸ್ಥಾನದಿಂದ ಹಲವಾರು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಲಾಗಿದೆ. ಇಲ್ಲಿ ವಿದ್ಯೆ ಜತೆಗೆ ಬದುಕು ರೂಪಿಸಿಕೊಳ್ಳುವ ಸಂಸ್ಕಾರ ಕಲಿಸಲಾಗುತ್ತಿದೆ. ತಂದೆ-ತಾಯಿ ಹಿಡಿತದಲ್ಲಿ ಬೆಳೆದವರು ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ಬೆಳೆಯಲು ಸಾಧ್ಯ. ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಪಡೆದುಕೊಂಡಿರುವ ಯುವಕ, ಯುವತಿಯರು ದೇಶ, ವಿದೇಶದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ತಿಳಿಸಿದರು.
ಆದಿಚುಂಚನಗಿರಿ ಮಹಾವಿದ್ಯಾಲಯದ ರಿಜಿಸ್ಟ್ರಾರ್ ಡಾ. ಸಿ.ಕೆ.ಸುಬ್ಬರಾಯ, ಸಲಹೆಗಾರ ಡಾ. ಇ.ಎಸ್.ಚಕ್ರವರ್ತಿ, ಪ್ರಾಂಶುಪಾಲ ಡಾ.ಸಿ.ಟಿ.ಜಯದೇವ ಇತರರಿದ್ದರು.