ಮಧು ಸಾವಿನ ಪ್ರಕರಣ ತನಿಖೆಗೆ ಆಗ್ರಹ

ರಾಯಚೂರು: ವಿದ್ಯಾರ್ಥಿನಿ ಮಧು ಪತ್ತಾರ ಎಂಬಾಕೆಯ ಶಂಕಾಸ್ಪದ ಸಾವಿನ ಕುರಿತು ತನಿಖೆ ನಡೆಸಿ, ತಪ್ಪಿತಸ್ಥರ ಶಿಕ್ಷೆಗೆ ಒತ್ತಾಯಿಸಿ ನವೋದಯ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳು ಗುರುವಾರ ಪ್ರತಿಭಟನೆ ನಡೆಸಿದರು.

ಕಾಲೇಜು ಮುಂಭಾಗ ಸೇರಿದ ವಿದ್ಯಾರ್ಥಿಗಳು ‘ಜಸ್ಟಿಸ್ ಫಾರ್ ಮಧು’ ಘೊಷಣೆಯೊಂದಿಗೆ ಎಲ್​ವಿಡಿ ಕಾಲೇಜುವರೆಗೆ ಆಗಮಿಸಿ, ತಹಸೀಲ್ದಾರ್​ಗೆ ಮನವಿ ಸಲ್ಲಿಸಿದರು. ಮಧು ಸಾವಿನ ಹಿಂದೆ ಅನುಮಾನಗಳಿವೆ. ಶವ ನೋಡಿದರೆ ಆತ್ಮಹತ್ಯೆಯಲ್ಲ ಎನ್ನುವುದು ತಿಳಿಯುತ್ತದೆ. ನಿಷ್ಪಕ್ಷಪಾತ ತನಿಖೆ ನಡೆಯಬೇಕು, ವಿದ್ಯಾರ್ಥಿನಿ ಕುಟುಂಬಕ್ಕೆ ನ್ಯಾಯ ಒದಗಿಸಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಮಧು ಏ.13ರ ಬೆಳಗ್ಗೆ ಕಾಲೇಜಿಗೆ ಹೋದವಳು ಮನೆಗೆ ಮರಳಿಲ್ಲ. ಏ.15ರ ಸಂಜೆ 5ಕ್ಕೆ ಮಾಣಿಕಪ್ರಭು ದೇವಸ್ಥಾನದ ಹಿಂದೆ ಯುವತಿಯೊಬ್ಬಳ ಶವ ಸಿಕ್ಕಿದೆ ಎಂದು ತಿಳಿದಿದ್ದರಿಂದ ಏ.16ರ ಬೆಳಗ್ಗೆ ಹೋಗಿ ನೋಡಿದಾಗ ಶವ ನನ್ನ ಮಗಳದ್ದು ಎಂಬುದಾಗಿ ಗೊತ್ತಾಗಿದೆ ಎಂದು ವಿದ್ಯಾರ್ಥಿನಿ ತಂದೆ ನಾಗರಾಜ ಪತ್ತಾರ ನೇತಾಜಿನಗರ ಠಾಣೆಗೆ ದೂರು ನೀಡಿದ್ದರು. ಪ್ರಕರಣದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ‘ಜಸ್ಟಿಸ್ ಫಾರ್ ಮಧು’ ಅಭಿಯಾನ ಆರಂಭಿಸಲಾಗಿದೆ. ಪ್ರತಿಭಟನೆ ನಂತರ ಎಚ್ಚೆತ್ತ ಪೊಲೀಸರು, ಗುರುವಾರ ರಾತ್ರಿ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಎಂದು ಎಫ್​ಐಆರ್ ಬದಲಿಸಿದ್ದಾರೆ. ಸುದರ್ಶನ್ ಯಾದವ್ ಎಂಬುವರನ್ನು ಬಂಧಿಸಿ ನ್ಯಾಯಾಧೀಶರ ಮುಂದೆ ಹಾಜರು ಪಡಿಸಲಾಯಿತು.