ಪೊಲೀಸ್ ಪೇದೆ ಅಮಾನತಿಗೆ ಆಗ್ರಹ

ತರೀಕೆರೆ: ಪೊಲೀಸ್ ಪೇದೆಯೊಬ್ಬರು ವಿದ್ಯಾರ್ಥಿ ಮೇಲೆ ಅನಗತ್ಯವಾಗಿ ಹಲ್ಲೆ ನಡೆಸಿದ ಕ್ರಮವನ್ನು ಖಂಡಿಸಿ ಬಾವಿಕೆರೆ ಗ್ರಾಮಸ್ಥರು ಶನಿವಾರ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.

ಪಾನಿಪೂರಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ದ್ವಿತೀಯ ಪಿಯುಸಿ ವಿದ್ಯಾರ್ಥಿ ಬಾವಿಕೆರೆ ಗ್ರಾಮದ ಅಖಿಲೇಶ್​ನಾಯ್ಕ ಮಂಗಳವಾರ ಸಂಜೆ ಪಾನಿಪೂರಿ ಅಂಗಡಿ ಎದುರು ಸ್ವಚ್ಛ ಮಾಡುವಾಗ ಲಕ್ಕವಳ್ಳಿ ಠಾಣೆಯ ಪೇದೆಯೊಬ್ಬರ ಮೇಲೆ ನೀರು ಚಿಮ್ಮಿದೆ. ಇದರಿಂದ ಕೆರಳಿದ ಪೇದೆ ಅಖಿಲೇಶ್​ನಾಯ್ಕನ ಮೇಲೆ ಹಲ್ಲೆ ನಡೆಸಿ ಗಾಯಗೊಳಿಸಿ ಗೂಂಡಾ ವರ್ತನೆ ತೋರಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಅಮಾಯಕ ವಿದ್ಯಾರ್ಥಿ ಮೇಲೆ ಹಲ್ಲೆ ನಡೆಸಿ ಗಾಯಗೊಳಿಸಿದ ಪೇದೆಯನ್ನು ತಕ್ಷಣವೇ ಸೇವೆಯಿಂದ ಅಮಾನತುಗೊಳಿಸಬೇಕು ಎಂದು ಆಗ್ರಹಿಸಿದರು.

ಲಕ್ಕವಳ್ಳಿ ಠಾಣೆ ಪ್ರಭಾರ ಪಿಎಸ್​ಐ ಗೋವಿಂದ್​ನಾಯ್ಕ ಪ್ರತಿಭಟನಾ ಘಟನಾ ಸ್ಥಳಕ್ಕೆ ಆಗಮಿಸಿ ತಪ್ಪಿತಸ್ಥ ಪೇದೆಯ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವ ಭರವಸೆ ನೀಡಿದರಲ್ಲದೆ, ಪ್ರತಿಭಟನಾಕಾರರ ಮನವೊಲಿಸಿ ಧರಣಿ ಮೊಟಕುಗೊಳಿಸುವಂತೆ ಮನವಿ ಮಾಡಿದರು. ಇದರಿಂದಾಗಿ ಗ್ರಾಮಸ್ಥರು ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಹಿಂಪಡೆದಿದ್ದಾರೆ.

ರಸ್ತೆ ತಡೆ ನಡೆಸಿದ್ದರಿಂದ ರಾಜ್ಯ ಹೆದ್ದಾರಿಯಲ್ಲಿ ವಾಹನ ಸಂಚಾರ ಒಂದು ಗಂಟೆಗೂ ಅಧಿಕ ಕಾಲ ಅಸ್ತವ್ಯಸ್ತವಾಗಿತ್ತು.