Friday, 16th November 2018  

Vijayavani

ಜನಾರ್ದನರೆಡ್ಡಿ ಕೇಸ್ ಬೆನ್ನಲ್ಲೇ ಡಿಕೆಶಿಗೆ ಬಂಧನ ಭೀತಿ - ಇಡಿಯಿಂದ 3ನೇ ಬಾರಿ ಇಡಿ ನೋಟಿಸ್ ಜಾರಿ        ಆ್ಯಂಬಿಂಡೆಟ್ ಪ್ರಕರಣದಲ್ಲಿ ಇಡಿ ಹೆಸರಿಗೆ ಆಕ್ಷೇಪ - ಸಿಸಿಬಿ ವಿರುದ್ಧ ಇಡಿ ಜಂಟಿ ನಿರ್ದೇಶಕ ಗರಂ        ಸಚಿವ ಸಂಪುಟ ವಿಸ್ತರಣೆಗೆ ಧನುರ್ಮಾಸದ ಎಫೆಕ್ಟ್ - ಸದ್ಯಕ್ಕಿಲ್ಲ ಆಕಾಂಕ್ಷಿಗಳಿಗೆ ಸಚಿವ ಭಾಗ್ಯ - ಕಾಂಗ್ರೆಸ್ಸಿಗರಲ್ಲಿ ಮತ್ತೆ ಅಸಮಾಧಾನ        ರಾಜ್ಯಾದ್ಯಂತ ಭುಗಿಲೆದ್ದ ರೈತರ ಹೋರಾಟದ ಕಿಚ್ಚು - ರೈತರನ್ನು ಭೇಟಿಯಾಗುವುದಾಗಿ ಹೇಳಿದ ಕುಮಾರಸ್ವಾಮಿ        ಗಾಂಧಿ ಕುಟುಂಬ ಬಿಟ್ಟು ಬೇರೆಯವರು ಎಐಸಿಸಿ 5 ಅಧ್ಯಕ್ಷರಾಗಲಿ - ಕಾಂಗ್ರೆಸ್​ಗೆ ಪ್ರಧಾನಿ ಮೋದಿಯಿಂದ ನೇರ ಸವಾಲು        ತಮಿಳುನಾಡಿನಾದ್ಯಂತ ಗಜ ಚಂಡಮಾರುತದ ಅರ್ಭಟ - 20ಕ್ಕೂ ಹೆಚ್ಚು ಮಂದಿ ದುರ್ಮರಣ - ಅಪಾರ ಆಸ್ತಿ ಪಾಸ್ತಿ, ಬೆಳೆ ನಾಶ       
Breaking News

ಹಳೆ ಬೇರು ಹೊಸ ಚಿಗುರು

Wednesday, 11.07.2018, 3:03 AM       No Comments

ವಿದ್ಯಾರ್ಥಿಗಳಿಗೆ ಅನುಭವದ ಬಾಗಿಲು ತೆರೆಯುವ ಇಂಟರ್ನ್​ಶಿಪ್

ಓದುವ ವಿದ್ಯಾರ್ಥಿಗಳಿಗೆ ಒಮ್ಮೆ ಕೆಲಸ ಸಿಕ್ಕರೆ ಸಾಕಪ್ಪ ಆರಾಮಾಗಿ ಇರಬಹುದು ಎಂಬ ಕಲ್ಪನೆ ಇರುತ್ತದೆ. ಆದರೆ ಕೆಲಸಕ್ಕೆ ಸೇರಿದ ಮೇಲೆ ಅದರ ಒತ್ತಡ ಹೇಗಿರುತ್ತದೆ ಎಂಬುದು ಗೊತ್ತಾಗುತ್ತದೆ. ಜವಾಬ್ದಾರಿಗಳನ್ನು ನಿಭಾಯಿಸಲಾಗದೆ ಸೋಲುವವರೂ ಇದ್ದಾರೆ. ಹೀಗಾಗಿ ವಿದ್ಯಾರ್ಥಿ ದೆಸೆಯಲ್ಲಿಯೇ ಕೆಲಸದ ಅನುಭವವನ್ನೂ ಪಡೆದುಕೊಳ್ಳುವ ಅವಕಾಶವಿದ್ದರೆ? ಇಂತಹದ್ದೊಂದು ಅವಕಾಶ ಕಲ್ಪಿಸಿಕೊಡುವುದೇ ಇಂಟರ್ನ್​ಶಿಪ್.

|ಅಕ್ಷತಾ ಮುಂಡಾಜೆ

ಆಕೆ ಮಿಥಿಲಾ ಕಾಲೇಜಿನಲ್ಲಿ ಅಧ್ಯಾಪಕರ ಮೆಚ್ಚಿನ ವಿದ್ಯಾರ್ಥಿನಿ. ಓದುವುದರಲ್ಲಿ ಯಾವತ್ತೂ ಮುಂದು. ಪ್ರಾಥಮಿಕ ಶಾಲೆಯಿಂದ ಹಿಡಿದು ಪದವಿ ಶಿಕ್ಷಣ ಪಡೆಯುವವರೆಗೂ ಶೇ. 90ಕ್ಕಿಂತ ಕಡಿಮೆ ಅಂಕ ಪಡೆದೇ ಇಲ್ಲ. ಹೀಗಾಗಿ ಗೆಳೆಯ-ಗೆಳತಿಯರಂತೆ ತನಗೂ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಸುಲಭವಾಗಿ ಕೆಲಸ ದೊರೆಯುತ್ತದೆ ಎಂದೇ ಆಕೆ ಭಾವಿಸಿದ್ದಳು. ಒಂದೆರಡು ವರ್ಷಗಳಲ್ಲೇ ಜೀವನದಲ್ಲಿ ಸೆಟ್ಲ್ ಆಗಿ ಬಿಡುತ್ತೇನೆಂದು ಕನಸು ಕಂಡ ಹುಡುಗಿ ಇಂದು ಕೆಲಸವಿಲ್ಲದೆ ಮನೆಯಲ್ಲೇ ಕುಳಿತಿದ್ದಾಳೆ.

ಆಕೆಯ ಶೈಕ್ಷಣಿಕ ಸಾಧನೆಗಳನ್ನು ನೋಡಿ ಕಂಪನಿಗಳು ಸಂದರ್ಶನಕ್ಕೆ ಕರೆಯುತ್ತವೆ. ಕೆಲವೆಡೆ ಉದ್ಯೋಗವೂ ದೊರೆತಿದೆ. ಆದರೆ ಅಲ್ಲಿ ಆಕೆ ಸೋಲುತ್ತಾಳೆ. ಯಾಕೆ ಹೀಗೆ ಎಂದು ಅದೆಷ್ಟೋ ಬಾರಿ ತನ್ನನ್ನು ತಾನೇ ಪ್ರಶ್ನಿಸಿಕೊಂಡಿದ್ದಾಳೆ. ತನ್ನ ಲೆಕ್ಕಾಚಾರವೆಲ್ಲಾ ಹೇಗೆ ಉಲ್ಟಾ ಆಗಿಹೋಯಿತು ಎನ್ನುವುದಕ್ಕೆ ಆಕೆಯಲ್ಲಿ ಉತ್ತರವೇ ಇಲ್ಲ. ಇದಕ್ಕೆ ಪ್ರಮುಖ ಕಾರಣ ಆಕೆಗೆ ಪುಸ್ತಕದಲ್ಲಿದ್ದ ವಿಚಾರಗಳ ಬಗ್ಗೆ ಜ್ಞಾನವಿತ್ತೇ ಹೊರತು, ಕೆಲಸದ ಸ್ಥಳದಲ್ಲಿ ಅಳವಡಿಸಿಕೊಳ್ಳಬೇಕಾದ ಕೆಲ ಸಂಗತಿಗಳು ಆಕೆಗೆ ತಿಳಿಯುತ್ತಿರಲಿಲ್ಲ. ಕೆಲಸಕ್ಕೂ ಪುಸ್ತಕಕ್ಕೂ ಹೋಲಿಕೆಯೇ ಇಲ್ಲದೆ ಹೇಗೆ ಕೆಲಸ ಮಾಡುವುದೆಂದು ತೋಚದೆ ಕೈಚೆಲ್ಲಿ ಕುಳಿತುಕೊಳ್ಳುವ ಪ್ರಸಂಗವೂ ಎದುರಾಗಿತ್ತು.

ಹೌದು, ಸಾಮಾನ್ಯವಾಗಿ ಇಂತಹದ್ದೊಂದು ಸಮಸ್ಯೆಯನ್ನು ಬಹಳಷ್ಟು ವಿದ್ಯಾರ್ಥಿಗಳು ಎದುರಿಸುತ್ತಾರೆ. ಓದಿದ್ದೇ ಒಂದು, ಮಾಡುತ್ತಿರುವುದೇ ಒಂದು ಎನ್ನುವ ಸ್ಥಿತಿ ಅವರದ್ದು. ಆದರೆ ಇಂಟರ್ನ್​ಶಿಪ್​ಗಳು ಇಂತಹ ಸಮಸ್ಯೆಗಳಿಗೆ ಪರಿಹಾರ ಮಾರ್ಗಗಳು. ಇಂಟರ್ನ್​ಶಿಪ್ ನಮ್ಮ ಜ್ಞಾನಕ್ಕೆ ಸಾಣೆ ಹಿಡಿಯುವ ಕೆಲಸ ಮಾಡುತ್ತದೆ. ಜತೆಗೆ ಹೊಸ ಜ್ಞಾನವನ್ನು ಗಳಿಸಲು ಸಹಾಯ ಮಾಡುವುದರ ಜತೆಗೆ ಅದೇ ಕಂಪನಿಯಲ್ಲಿಯೇ ಕೆಲಸಕ್ಕೆ ತೆಗೆದುಕೊಳ್ಳುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ.

ಸಾಮಾನ್ಯವಾಗಿ 2ರಿಂದ 6 ತಿಂಗಳು ಇಂಟರ್ನ್ ಶಿಪ್​ನ ಅವಧಿ ಇರುತ್ತದೆ. ಈ ಅವಧಿಯಲ್ಲಿ ವಿದ್ಯಾರ್ಥಿಗಳು ತಮಗೆ ಸಂಬಂಧಿಸಿದ ಕ್ಷೇತ್ರದ ಆಫೀಸ್ ಕೆಲಸಗಳು ಹೇಗಿರುತ್ತವೆ ಎಂಬುದನ್ನು ತಿಳಿದುಕೊಳ್ಳಲು ಅನುಕೂಲವಾಗುತ್ತದೆ. ಹೊಸ ಕೌಶಲಗಳು ಮತ್ತು ಅವರಲ್ಲಿ ಆಗಲೇ ಇರುವ ಕೌಶಲಗಳನ್ನು ಅಭಿವೃದ್ಧಿಪಡಿಸಲು ಇದು ನೆರವಾಗುತ್ತದೆ. ಅದರಲ್ಲೂ ಹೆಚ್ಚಿನ ಇಂಟರ್ನ್​ಶಿಪ್​ಗಳು ಪಾರ್ಟ್ ಟೈಮ್ ವರ್ಕ್ ಫ್ರಾಮ್ ಹೋಮ್ ಆಯ್ಕೆಗಳನ್ನು ಹೊಂದಿರುತ್ತವೆ. ಇದರಿಂದ ವಿದ್ಯಾರ್ಥಿಗಳು ಕಾಲೇಜಿಗೆ ಹೋಗುತ್ತಿರುವ ಅವಧಿಯಲ್ಲೇ ಇಂಟರ್ನ್​ಶಿಪ್ ಕೂಡ ಪೂರೈಸಲು ಅನುಕೂಲವಾಗುತ್ತದೆ. ಇಂಟರ್ನ್​ಶಾಲಾ ಎನ್ನುವ ಸಂಸ್ಥೆಯೊಂದು ನಡೆಸಿದ ಸಮೀಕ್ಷೆಯ ಪ್ರಕಾರ ಶೇ.75 ವಿದ್ಯಾರ್ಥಿಗಳು ಆಫೀಸ್​ಗೆ ತೆರಳಿ ಮಾಡುವ ಇಂಟರ್ನ್​ಶಿಪ್​ಗಿಂತಲೂ ಮನೆಯಿಂದಲೇ ಮಾಡಬಹುದಾದ ಇಂಟರ್ನ್​ಶಿಪ್​ಗೆ ಹೆಚ್ಚಿನ ಒತ್ತು ನೀಡುತ್ತಾರೆ.

ಇಂಟರ್ನ್​ಶಿಪ್​ಗಳ್ಯಾಕೆ ಮುಖ್ಯ?

ಇಂಜಿನಿಯರಿಂಗ್ ವಿದ್ಯಾಭ್ಯಾಸ ಪಡೆದುಕೊಳ್ಳುತ್ತಿರುವ ವಿದ್ಯಾರ್ಥಿಗಳಿಗೆ ಮೂರು ಇಂಟರ್ನ್​ಶಿಪ್​ಗಳನ್ನು ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆ ಕಡ್ಡಾಯಗೊಳಿಸಿದೆ. ಹೀಗಾಗಿ ಇಂಟರ್ನ್​ಶಿಪ್ ಎನ್ನುವಂತದ್ದು ವಿದ್ಯಾರ್ಥಿಯೊಬ್ಬನಿಗೆ ಎಷ್ಟು ಮುಖ್ಯ ಎನ್ನುವುದು ಇಲ್ಲಿ ಸ್ಪಷ್ಟವಾಗುತ್ತದೆ. ಇದು ನಿಜವಾದ ಉದ್ಯೋಗದ ವಾತಾವರಣ ಹೇಗಿರುತ್ತದೆ ಎನ್ನುವುದನ್ನು ವಿದ್ಯಾರ್ಥಿಗೆ ತಿಳಿಸಿಕೊಡುವುದರ ಜತೆಗೆ ವೃತ್ತಿಪರ ಅನುಭವ ಪಡೆಯಲು ನೆರವಾಗುತ್ತವೆ. ಇಂಟರ್ನ್​ಶಿಪ್ ಎನ್ನುವುದು ಕಾಪೋರೆಟ್ ಕಂಪನಿಗಳಿಗೆ ಸೀಮಿತವಲ್ಲ. ಬೇರೆ ಬೇರೆ ಕ್ಷೇತ್ರಗಳಲ್ಲಿ ಬೇರೆ ಬೇರೆ ರೀತಿಯಲ್ಲಿ ಇಂಟರ್ನ್​ಶಿಪ್​ಗೆ ಅವಕಾಶಗಳಿವೆ.

ಕೌಶಲ ಅಭಿವೃದ್ಧಿಗೆ ಸಹಕಾರಿ

ವಿದ್ಯಾರ್ಥಿ ದೆಸೆಯಲ್ಲಿ ಪುಸ್ತಕ, ಓದು, ಪರೀಕ್ಷೆ ಮುಂತಾದವುಗಳೆಡೆ ಮಾತ್ರವೇ ಹೆಚ್ಚಿನ ಗಮನವಿರುತ್ತದೆ. ಆದರೆ ಕಚೇರಿ ವಾತಾವರಣ ಹೇಗಿರುತ್ತದೆ ಎನ್ನುವ ಸಣ್ಣ ಕಲ್ಪನೆಯೂ ವಿದ್ಯಾರ್ಥಿಗಳಿಗೆ ಇರುವುದಿಲ್ಲ. ಇದೇ ಕೆಲವೊಮ್ಮೆ ವಿದ್ಯಾರ್ಥಿಗಳು ಕೆಲಸಕ್ಕೆ ಹೊಂದಿಕೊಳ್ಳಲು ತೊಡಕಾಗಿರುತ್ತದೆ. ಆದರೆ ಇಂಟರ್ನ್​ಶಿಪ್ ಇಂತಹದ್ದೊಂದು ವಾತಾವರಣವನ್ನು ಪರಿಚಯಿಸಲು ಸಹಕಾರಿ. ಇಲ್ಲಿ ಕಲಿಕೆಗೆ ಅವಕಾಶವೂ ಹೆಚ್ಚು. ಓರ್ವ ವ್ಯಕ್ತಿ ಕಂಪನಿಯೊಂದಕ್ಕೆ ನೌಕರನಾಗಿ ಸೇರಿದಾಗ ಆತನ ಹಿರಿಯ ಅಧಿಕಾರಿ ಆತನೊಂದಿಗೆ ನಡೆದುಕೊಳ್ಳುವ ರೀತಿಗೂ ಓರ್ವ ವಿದ್ಯಾರ್ಥಿಗೆ ಹೇಳಿಕೊಡುವ ರೀತಿಗೂ ವ್ಯತ್ಯಾಸವಿರುತ್ತದೆ. ಈ ಅವಕಾಶವನ್ನು ಬಳಸಿಕೊಳ್ಳಿ. ಕಚೇರಿ ಕೆಲಸಗಳನ್ನು ಕೇಳಿ ತಿಳಿದು ಅರಿತುಕೊಂಡು ಮಾಡಿ. ಜತೆಗೆ ಹೊಸ ಹೊಸ ಸವಾಲುಗಳನ್ನು ಸ್ವೀಕರಿಸುವುದಕ್ಕೂ ಹಿಂದೇಟು ಹಾಕದಿರಿ. ಯಾಕೆಂದರೆ ಅಲ್ಲಿ ನಿಮ್ಮ ಮಾರ್ಗದರ್ಶನಕ್ಕೆ ಸಾಕಷ್ಟು ಜನರಿರುತ್ತಾರೆ.

ನಿಜ ಜೀವನದ ಅನುಭವ

ವಿದ್ಯಾರ್ಥಿಗಳಿಗೆ ತಮ್ಮ ಆಯ್ಕೆ ಸರಿಯಾಗಿದೆಯೇ ಎಂದು ತಿಳಿದುಕೊಳ್ಳುವುದಕ್ಕೆ ಇಂಟರ್ನ್​ಶಿಪ್ ಉತ್ತಮ ಅವಕಾಶ. ಸಾಮಾನ್ಯವಾಗಿ ವಿದ್ಯಾರ್ಥಿಗಳು ಮನೆಯವರು ಹೇಳಿದರೆಂದೋ, ಗೆಳೆಯರು ಹೇಳಿದರೆಂದೋ ತಮಗೆ ಇಷ್ಟ ಇದ್ದೋ ಇಲ್ಲದೆಯೋ ಕೋರ್ಸ್​ಗಳನ್ನು ಆಯ್ದುಕೊಂಡಿರುತ್ತಾರೆ. ಇವರಿಗೆ ತಮ್ಮ ಆಯ್ಕೆ ತಪ್ಪೋ ಸರಿಯೋ ಎಂದು ತಿಳಿಯಲು

ಇಂಟರ್ನ್​ಶಿಪ್ ಅವಕಾಶ ಮಾಡಿಕೊಡುತ್ತದೆ. ಹೊಸ ಅವಕಾಶಗಳು, ತಮ್ಮ ವಿದ್ಯೆಗೆ ಇರುವ ವೇದಿಕೆಗಳು, ಪ್ರಾಯೋಗಿಕ ಕೌಶಲಗಳನ್ನು ಬೆಳೆಸಿಕೊಳ್ಳುವುದಕ್ಕೂ ಇದು ಸಹಕಾರಿ.

ಕರಿಯರ್ ಆಯ್ಕೆಯಲ್ಲಿಯೂ ಇದು ನೆರವಾಗುತ್ತದೆ. ನೀವು ಓದಿರುವ ಫೀಲ್ಡ್​ನಲ್ಲಿಯೇ ಹೊಸ ಅವಕಾಶಗಳಿರುವ ಬಗ್ಗೆ ತಿಳಿದುಕೊಳ್ಳಲು ಅನುಕೂಲವಾಗುತ್ತದೆ. ಕಚೇರಿಯ ವಾತಾವರಣ ನಿಮ್ಮಲ್ಲಿ ಹೊಸತೊಂದು ಪರಿಕಲ್ಪನೆ ಮೂಡಿಸುವುದಕ್ಕೂ ಸಹಕಾರಿ. ಯಾವುದೋ ಸ್ಟಾರ್ಟ್​ಅಪ್, ಇನ್ಯಾವುದೋ ಆಪ್, ಕಿರುಚಿತ್ರ ನಿಮ್ಮನ್ನು ಹೊಸ ಆಲೋಚನೆಗೆ ದೂಡಬಹುದು. ಹಳೆ ಕಲ್ಪನೆಗೆ ಹೊಸತೊಂದು ರೂಪ ನೀಡಲು ಸಹಾಯ ಮಾಡಬಹುದು.

ಸೂಕ್ತ ಸಮಯ ಯಾವುದು?

ಇಂಟರ್ನ್​ಶಿಪ್​ಗೆ ಯಾವುದೋ ಒಂದು ಅವಧಿಯನ್ನು ಸೂಕ್ತ ಎಂದು ಹೇಳಲಾಗದು. ಆಯಾ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಒಂದೊಂದು ಅವಧಿಯನ್ನು ಇಂಟರ್ನ್​ಶಿಪ್​ಗೆ ಸೂಕ್ತ ಎಂದು ಪರಿಗಣಿಸಬಹುದಷ್ಟೇ. ಸಾಮಾನ್ಯವಾಗಿ ಬೇಸಿಗೆ ಮತ್ತು ಚಳಿಗಾಲದ ಅವಧಿಯಲ್ಲಿ ಇಂಟರ್ನ್​ಶಿಪ್​ಗೆ ಹೆಚ್ಚಿನ ಅವಕಾಶಗಳಿರುತ್ತವೆ. ಆದರೆ ಇಂಟರ್ನ್​ಶಿಪ್​ಗೆ ಹೋಗುವ ಮೊದಲು ಯಾವ ಸಂಸ್ಥೆಗೆ ಹೋಗುತ್ತಿರುವಿರಿ ಎನ್ನುವುದರ ಬಗ್ಗೆ ತಿಳಿದಿರಿ. ತೀರಾ ಬ್ಯುಸಿಯಾಗಿರುವ ಸಮಯದಲ್ಲಿ ಇಂಟರ್ನ್​ಶಿಪ್​ಗೆ ತೆರಳುವುದು ಉತ್ತಮವಲ್ಲ. ನಿಮಗೆ ಹೇಳಿಕೊಡುವುದಕ್ಕೂ ಅವಕಾಶ ಸಿಗದೇ ಹೋಗಬಹುದು. ಹೀಗಾಗಿ ಹೋಗುವ ಸಮಯ ನಿಮ್ಮ ಕಂಪನಿಯನ್ನು ಆಧರಿಸಿ ನಿರ್ಧರಿಸಿ. ಹೊಸತೇನನ್ನೋ ಕಲಿಯಲು ತೆರಳುತ್ತಿದ್ದೇನೆ ಎನ್ನುವುದು ತಲೆಯಲ್ಲಿರಬೇಕೆ ಹೊರತು ಅಲ್ಲಿನ ವಾತಾವರಣ ಹೇಗೋ ಏನೋ ಎಂಬುದರ ಬಗ್ಗೆ ಮೊದಲೇ ತಲೆ ಕೆಡಿಸಿಕೊಳ್ಳಬೇಡಿ. ಸಾಧ್ಯವಾದಲ್ಲಿ ನಿಮಗೆ ಮೆಚ್ಚುಗೆ ಇರುವ ಸಂಸ್ಥೆಯಲ್ಲಿಯೇ

ಇಂಟರ್ನ್​ಶಿಪ್​ನ ಅವಕಾಶ ಗಿಟ್ಟಿಸಿಕೊಳ್ಳಿ. ಯಾಕೆಂದರೆ ಇಂಟರ್ನ್​ಶಿಪ್ ಅವಧಿಯಲ್ಲಿ ನಿಮ್ಮ ಪರ್ಫಾಮೆನ್ಸ್ ನೋಡಿಕೊಂಡು ನಿಮಗೆ ಪ್ರೀ-ಪ್ಲೇಸ್​ವೆುಂಟ್ ಆಫರ್​ಗಳನ್ನೂ ನೀಡಬಹುದು. ಅಲ್ಲೇ ಕೆಲಸ ಸಿಕ್ಕುಬಿಡುತ್ತದೆ ಎನ್ನುವ ಅತಿಯಾದ ನಿರೀಕ್ಷೆ ಬೇಡ. ಯಾಕೆಂದರೆ ನೌಕರಿ ಖಾಲಿ ಇರದಿದ್ದಾಗ ಅವರು ನಿಮ್ಮನ್ನು ನೇಮಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಆದರೆ ನಿಮ್ಮ ಪರ್ಫಾಮೆನ್ಸ್ ಚೆನ್ನಾಗಿದ್ದರೆ ಮುಂದೊಂದು ದಿನ ಅಲ್ಲಿ ಕೆಲಸ ಖಾಲಿಯಾದಾಗ ಅವರು ನಿಮ್ಮನ್ನು ಆ ಹುದ್ದೆಗೆ ಪರಿಗಣಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ.

ಅವಕಾಶ ತಿಳಿಯೋದು ಹೇಗೆ?

ಹಿಂದೆಲ್ಲಾ ತಂತ್ರಜ್ಞಾನ ಅಭಿವೃದ್ಧಿಯಾಗಿರದ ಕಾಲದಲ್ಲಿ ಇಂಟರ್ನ್​ಶಿಪ್​ಗೆ ಎಲ್ಲಿ ಅವಕಾಶವಿದೆ ಎಂದು ತಿಳಿದುಕೊಳ್ಳುವುದೇ ದೊಡ್ಡ ಕೆಲಸವಾಗಿರುತ್ತಿತ್ತು. ಕಂಪನಿಗಳಿಗೆ ಪತ್ರ ಬರೆದು ಅವರಿಂದ ಉತ್ತರಕ್ಕಾಗಿ ನಿರೀಕ್ಷಿಸಬೇಕಾಗಿರುತ್ತಿತ್ತು. ಆದರೆ ಈಗ ತಂತ್ರಜ್ಞಾನ ಇದನ್ನು ತೀರಾ ಸರಳಗೊಳಿಸಿದೆ. ಒಂದು ಮೇಲ್ ಅಥವಾ ಒಂದು ಮೆಸೇಜ್ ಈ ಕಾರ್ಯವನ್ನು ನಿರ್ವಹಿಸುತ್ತದೆ. ಕೆಲ ಕಾಲೇಜುಗಳಲ್ಲಿ ಅವರೇ ಕಂಪನಿಗಳೊಂದಿಗೆ ಮಾತನಾಡಿ ಇಂಟರ್ನ್​ಶಿಪ್​ಗೆ ಅವಕಾಶ ಕಲ್ಪಿಸುತ್ತಾರೆ. ಕೆಲವೊಮ್ಮೆ ಕೆಲಸದಲ್ಲಿರುವ ಸೀನಿಯರ್​ಗಳ ಸಹಾಯವನ್ನೂ ನೀವು ಪಡೆದುಕೊಳ್ಳಬಹುದು. ಒಟ್ಟಿನಲ್ಲಿ ಹೇಳಬೇಕಾದರೆ ಇಂಟರ್ನ್​ಶಿಪ್ ಎನ್ನುವುದು ಟ್ರಯಲ್ ಆಂಡ್ ಎರರ್ ಎಕ್ಸ್​ಪರಿಮೆಂಟ್ ಇದ್ದಂತೆ. ಇಲ್ಲಿ ಕೆಲ ಪ್ರಯೋಗಗಳನ್ನು ಮಾಡಲು ಅವಕಾಶವಿರುತ್ತದೆ. ಭವಿಷ್ಯದ ಬಗ್ಗೆ ಸೂಕ್ತವಾಗಿ ಚಿಂತಿಸಲು ಇದು ಸೂಕ್ತ ವೇದಿಕೆ.

ವರ್ತನೆ ಸರಿಯಾಗಿರಲಿ

ಇಂಟರ್ನ್​ಶಿಪ್ ಅವಧಿಯಲ್ಲಿ ನಿಮ್ಮ ವರ್ತನೆಯೂ ಪ್ರಮುಖ ಪಾತ್ರವಹಿಸುತ್ತದೆ. ಒಂದೇ ಕಾಲೇಜಿನಿಂದ ನಾಲ್ಕೈದು ಜನರು ಒಂದೇ ಸಂಸ್ಥೆಗೆ ಇಂಟರ್ನ್​ಶಿಪ್​ಗೆ ಹೋಗಿದ್ದೀರಿ ಎಂದಾದರೆ ನಿಮ್ಮ ನಡುವೆ ವೈಷಮ್ಯವೇ ಇದ್ದರೂ ಅದನ್ನು ತೋರಗೊಡಬೇಡಿ. ಅಲ್ಲಿನ ಹಿರಿಯ ನೌಕರರ ಬಳಿ ವಿಷಯಗಳ ಬಗ್ಗೆ ರ್ಚಚಿಸುವಾಗ, ಅನುಮಾನಗಳನ್ನು ಕೇಳುವಾಗ ನಿಮ್ಮ ಹಾವಭಾವ ವಿನೀತವಾಗಿರಲಿ. ಕಂಪನಿಯ ನಿಯಮಗಳನ್ನು ನೀವೂ ಪಾಲಿಸಬೇಕಾಗಿರುತ್ತದೆ. ಸ್ವಚ್ಛತೆ, ಉಡುಗೆ ತೊಡುಗೆ ಮುಂತಾದವುಗಳ ಬಗ್ಗೆಯೂ ಗಮನವಿರಲಿ. ಕೆಲಸದ ವಿಷಯಕ್ಕೆ ಮಾತನಾಡಿ. ಆದರೆ ಕಾಲೇಜಿನಲ್ಲಿ ಹರಟುವಂತೆ ಸುಖಾಸುಮ್ಮನೆ ಮಾತುಕತೆಯೂ ಬೇಡ. ಅಲ್ಲಿರುವ ವಸ್ತುಗಳನ್ನು ಬಳಸುವಾಗಲೂ ಎಚ್ಚರವಹಿಸಿ. ಅದು ನಿಮ್ಮದಲ್ಲ ಎನ್ನುವುದು ಗಮನದಲ್ಲಿರಲಿ.

Leave a Reply

Your email address will not be published. Required fields are marked *

Back To Top