ಎಸ್‌ಎಫ್‌ಐ ಕಾರ್ಯಕರ್ತರ ಪ್ರತಿಭಟನೆ

ಹಾಸನ: ಉನ್ನತ ಶಿಕ್ಷಣದವರೆಗೆ ವ್ಯಾಸಂಗ ಮಾಡುತ್ತಿರುವ ರಾಜ್ಯದ ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಬಸ್‌ಪಾಸ್ ನೀಡಬೇಕು ಎಂದು ಆಗ್ರಹಿಸಿ ಸ್ಟುಡೆಂಟ್ ಫೆಡರೇಷನ್ ಆಫ್ ಇಂಡಿಯಾ (ಎಸ್‌ಎಫ್‌ಐ) ಕಾರ್ಯಕರ್ತರು ಬುಧವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ನಗರದ ಗಂಧದ ಕೋಠಿ ಆವರಣದಿಂದ ಮೆರವಣಿಗೆಯಲ್ಲಿ ಬಂದ ವಿದ್ಯಾರ್ಥಿಗಳು ಹಾಗೂ ಕಾರ್ಯಕರ್ತರು ಆರ್‌ಸಿ ರಸ್ತೆ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿ ತಲುಪಿದರು.
ಉಚಿತ ಬಸ್‌ಪಾಸ್ ನೀಡುವಂತೆ ಭಾರತ ವಿದ್ಯಾರ್ಥಿ ಪರಿಷತ್ ಹಲವು ವರ್ಷಗಳಿಂದ ಹೋರಾಟ ನಡೆಸುತ್ತಿದೆ. ರಾಜ್ಯದಲ್ಲಿ ಮೂರು ವರ್ಷಗಳಿಂದ ತೀವ್ರ ಬರಗಾಲವಿದೆ. ದುಬಾರಿ ಶೈಕ್ಷಣಿಕ ಶುಲ್ಕ ಹಾಗೂ ಬಸ್‌ಪಾಸ್ ಶುಲ್ಕ ಪಾವತಿಸಿ ಓದುವುದು ಕಷ್ಟವಾಗಿದೆ. ಇದರಿಂದ ವಿದ್ಯಾರ್ಥಿಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಅಲ್ಲದೆ, ರಾಜ್ಯದಲ್ಲಿ ಬಸ್‌ಪಾಸ್ ಪ್ರಯಾಣ ದರ ಇತರೆ ರಾಜ್ಯಗಳಿಗಿಂತ ಹೆಚ್ಚಾಗಿದೆ. ಈ ಕಾರಣದಿಂದ ವಿದ್ಯಾರ್ಥಿಗಳಿಗೆ ಆರ್ಥಿಕ ಹೊರೆಯಾಗುತ್ತದೆ. ಆದ್ದರಿಂದ ಎಲ್ಲ ವರ್ಗದ ವಿದ್ಯಾರ್ಥಿಗಳಿಗೂ ಉಚಿತ ಬಸ್‌ಪಾಸ್ ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಹಿಂದಿನ ಕಾಂಗ್ರೆಸ್ ಸರ್ಕಾರ ತನ್ನ ಬಜೆಟ್‌ನಲ್ಲಿ ಉನ್ನತ ಶಿಕ್ಷಣದವರೆಗಿನ ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಬಸ್‌ಪಾಸ್ ನೀಡುವುದಾಗಿ ಘೋಷಿಸಿತ್ತು. ಆದರೆ, ಸಮ್ಮಿಶ್ರ ಸರ್ಕಾರದ ನಿರ್ಲಕ್ಷ್ಯದಿಂದ ವಿದ್ಯಾರ್ಥಿಗಳು ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ. ಆದ್ದರಿಂದ ಕೇರಳ, ತಮಿಳುನಾಡು ಮಾದರಿಯಲ್ಲಿ ರಾಜ್ಯದಲ್ಲೂ ಬಸ್‌ಪಾಸ್ ವಿತರಿಸಬೇಕು. ಇಲ್ಲವಾದರೆ ಜೂ.15 ರಂದು ಬೆಂಗಳೂರಿನ ಶಾಂತಿನಗರದ ಕೆಎಸ್‌ಆರ್‌ಟಿಸಿ ಮುಖ್ಯ ಕಚೇರಿಗೆ ಮುತ್ತಿಗೆ ಹಾಕುವುದಾಗಿ ಎಚ್ಚರಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಹಾಯಕ ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಲಾಯಿತು.
ಎಸ್‌ಎಫ್‌ಐ ಜಿಲ್ಲಾ ಕಾರ್ಯದರ್ಶಿ ಎಂ.ಆಶಾ, ಉಪಾಧ್ಯಕ್ಷೆ ರಕ್ಷಿತಾ, ತಾಲೂಕು ಅಧ್ಯಕ್ಷ ರಮೇಶ್, ಸಂಚಾಲಕರಾದ ಗೌತಮಿ, ಪ್ರೇಮಾ, ಪ್ರಸನ್ನ, ನಾಗೇಂದ್ರ, ನವೀನ್‌ಕುಮಾರ್, ಗಗನ್ ಇತರರು ಇದ್ದರು.

Leave a Reply

Your email address will not be published. Required fields are marked *