ಹಠ ಕಟ್ಟಿ ಶೌಚಗೃಹ ಕಟ್ಟಿಸಿದ ವಿದ್ಯಾರ್ಥಿನಿ

<ಚಿನ್ನ ಅಡವಿಟ್ಟು ಬಾಲಕಿ ಕನಸು ನೆರವೇರಿಸಿದ ಹೆತ್ತವರು>

ವಿಜಯವಾಣಿ ಸುದ್ದಿಜಾಲ ಮೂಡುಬಿದಿರೆ
ಮೂಡುಕೊಣಾಜೆ ಪರಿಸರದ ಮೂರನೇ ತರಗತಿ ವಿದ್ಯಾರ್ಥಿನಿ ಶೌಚಗೃಹ ನಿರ್ಮಾಣ ಬಗ್ಗೆ ಹಠ ಹಿಡಿದು, ಹೆತ್ತವರ ಮನವೊಲಿಸಿ ಶೌಚಗೃಹ ಕಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾಳೆ.

ಶಿರ್ತಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೂಡುಕೊಣಾಜೆ ಗ್ರಾಮದ ಕುದ್ರೈಲ್ ನಿವಾಸಿ ಕೂಲಿ ಕಾರ್ಮಿಕ ಶೀನ-ಲೀಲಾ ದಂಪತಿಯ ಇಬ್ಬರು ಮಕ್ಕಳ ಪೈಕಿ ಕಿರಿಯವಳಾದ ಕಾವ್ಯ ಸ್ಥಳೀಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿನಿ. ಶಾಲೆಯಲ್ಲಿ ಆರೋಗ್ಯ ಕಾರ್ಯಕರ್ತೆಯರು ಹೇಳಿದ ಸ್ವಚ್ಛತೆ ಪಾಠದಿಂದ ಪ್ರೇರಿತಳಾದ ಕಾವ್ಯ ತನ್ನ ಮನೆಯಲ್ಲಿ ಶೌಚಗೃಹವಿಲ್ಲ ಎಂಬ ಕೊರಗಿನಿಂದ ಹೆತ್ತವರ ಬಳಿ ವಿಷಯ ಪ್ರಸ್ತಾಪಿಸಿದ್ದಳು. ಪುಟ್ಟ ಮಗಳ ಮನವಿ ನಿರಾಕರಿಸಲಾಗದೆ ಶೌಚಗೃಹ ಕಟ್ಟಿಕೊಳ್ಳಲು ಮುಂದಾದಾಗ ಹಲವು ಸಂಕಷ್ಟಗಳು ಎದುರಾಯಿತು.

ಕೆಲ ವರ್ಷಗಳ ಹಿಂದೆ ಸೋಗೆ ಮಾಡಿನ ಸೂರಿದ್ದ ಮನೆ ರಿಪೇರಿ ಮಾಡಿಸಿದಾಗ ಒಂದೂವರೆ ಲಕ್ಷ ರೂ.ಸಾಲವಾಗಿತ್ತು. ಹಕ್ಕುಪತ್ರ ಸಮಸ್ಯೆಯೂ ಬಗೆಹರಿಸಿರಲಿಲ್ಲ. ಸೂರಿದ್ದರೂ ಬಯಲು ಶೌಚಗೃಹಕ್ಕೆ ಹೊಂದಿಕೊಂಡಿದ್ದ ಕುಟುಂಬದಲ್ಲಿ ಕಾವ್ಯ ಮಾಡಿದ ಹಠಕ್ಕೆ ಸೋತು ಪಂಚಾಯಿತಿಯವರನ್ನು ಸಂಪರ್ಕಿಸಿದಾಗ ಪೂರಕ ಸ್ಪಂದನೆ ಸಿಗಲಿಲ್ಲ. ಕೊನೆಗೆ ಕಾವ್ಯಳ ಹಠಕ್ಕೆ ಮನೆಯವರು ಚಿನ್ನ ಅಡವಿಟ್ಟು 30 ಸಾವಿರ ರೂ. ವೆಚ್ಚದಲ್ಲಿ ಶೌಚಗೃಹ, ಬಾತ್‌ರೂಂ ಕಟ್ಟಿಸಿದರು.

ಈ ನಡುವೆ ಪಂಚಾಯಿತಿ ಅರ್ಜಿಗೆ ವರ್ಷ ತುಂಬಿದೆ. ಅಲ್ಲಿನವರ ಸಲಹೆಯಂತೆ ಲೀಲಾ ಅವರ ಅರ್ಜಿಯ ಬದಲಾಗಿ ಒಂದು ತಿಂಗಳ ಹಿಂದೆ ಪತಿ ಶೀನ ಅವರ ಹೆಸರಲ್ಲಿ ಮತ್ತೊಂದು ಅರ್ಜಿಯನ್ನೂ ಸಲ್ಲಿಸಿದ್ದರು. ವಿಪರ್ಯಾಸ ಎಂದರೆ ಶೌಚಗೃಹ ಕಟ್ಟಿದ ಜಾಗದಲ್ಲಿ ನಾಗಬೀದಿಯ ಸಮಸ್ಯೆ ಎದುರಾಯಿತು. ಹಾಗಾಗಿ ಶೌಚಗೃಹ ಬಳಕೆಗೆ ಮೊದಲು ಪರಿಹಾರ ಕಾರ್ಯಗಳತ್ತ ಗಮನ ಹರಿಸಿದ್ದಾರೆ. ಜತೆಗೆ ಪಂಚಾಯಿತಿಯವರ ಸಹಾಯದ ನಿರೀಕ್ಷೆಯಲ್ಲಿದ್ದಾರೆ.

Leave a Reply

Your email address will not be published. Required fields are marked *