ಒಂದೇ ರಾತ್ರಿ 2 ಬಾರಿ ಕಾಲೇಜು ವಿದ್ಯಾರ್ಥಿನಿಯ ಜೀವ ರಕ್ಷಣೆ ಮಾಡಿದ ಈತನಿಗಿದೆ ವಿಶಿಷ್ಟ ಗುಣ !

ಮುಂಬೈ: ಇಲ್ಲಿನ ಕಾಲೇಜು ವಿದ್ಯಾರ್ಥಿನಿಯೋರ್ವಳ ಪಾಲಿಗೆ ಸೈಯದ್​ ಹುಸ್ಸೇನ್​ ಎಂಬುವವರು ಅಕ್ಷರಶಃ ದೇವರಾಗಿದ್ದಾರೆ. ಒಂದೇ ರಾತ್ರಿಯಲ್ಲಿ ಎರಡು ಬಾರಿ ಆಕೆಯ ಜೀವವನ್ನು ರಕ್ಷಿಸಿ ಹುಡುಗಿಯ ಕುಟುಂಬದವರು ಸದಾ ನೆನಪಿನಲ್ಲಿಟ್ಟುಕೊಳ್ಳುವಂತಾಗಿದ್ದಾರೆ.

ಒಂದು ಅಪರೂಪದ ಕಥೆಯಿದು…

ಸೈಯದ್ ನಸ್ಸೀರ್​ ಹುಸ್ಸೇನ್​ (43) ಎಂಬುವರು ಮುಂಬೈನ ಡಿಯೋನರ್​ ನಿವಾಸಿ. ಸೋಮವಾರ ರಾತ್ರಿ ಸುಮಾರು 8.30ರ ಸಮಯದಲ್ಲಿ ವಶಿಯಲ್ಲಿರುವ ತಮ್ಮ ಅಂಗಡಿಯಿಂದ ಮನೆಗೆ ತೆರಳುತ್ತಿದ್ದರು. ಸ್ವಲ್ಪ ದೂರದಲ್ಲಿರುವ ಸೇತುವೆ ಮೇಲೆ, ತುಂಬ ಚೆನ್ನಾಗಿ ಉಡುಪು ಧರಿಸಿದ್ದ ಯುವತಿ ಬರಿಗಾಲಿನಲ್ಲಿ ನಡೆದುಕೊಂಡು ಹೋಗುತ್ತಿರುವುದನ್ನು ನೋಡಿದ್ದಾರೆ. ಕಳೆದ ಎರಡು ವರ್ಷಗಳಲ್ಲಿ ಹೀಗೆ ಬರಿಗಾಲಿನಲ್ಲಿ ಹೋಗುವ ಹುಡುಗಿಯರು ಆತ್ಮಹತ್ಯೆಗೆ ಯತ್ನಿಸಿ ಅವರನ್ನು ಹುಸ್ಸೇನ್​ ರಕ್ಷಿಸಿದ್ದರು. ಇದನ್ನು ನೆನಪಿಸಿಕೊಂಡ ಹುಸ್ಸೇನ್​ ಕೂಡಲೇ ತಮ್ಮ ಬೈಕ್​ ಬಿಟ್ಟು ಆ ವಿದ್ಯಾರ್ಥಿನಿಯ ಬಳಿ ಓಡಿದರು. ಅಷ್ಟರಲ್ಲಾಗಲೇ ಅವಳು ಸೇತುವೆ ಮೇಲೆ ಹತ್ತಿ, ಕೆಳಗೆ ಹಾರಲು ಯತ್ನಿಸುತ್ತಿದ್ದಳು. ವೇಗವಾಗಿ ಓಡಿದ ಹುಸ್ಸೇನ್​ ಆಕೆಯ ಕೈ ಹಿಡಿದು ಎಳೆದು ರಕ್ಷಿಸಿದರು.

ಆಕೆಯ ಬಗ್ಗೆ ವಿಚಾರಿಸಿದಾಗ ಪಿಯುಸಿ ಎರಡನೇ ವರ್ಷದ ವಿದ್ಯಾರ್ಥಿನಿಯೆಂದೂ, ಪ್ರಿಯತಮನಿಂದ ಮೋಸ ಹೋದ ಬಳಿಕ ನೊಂದು ಆತ್ಮಹತ್ಯೆಗೆ ಯತ್ನಿಸುತ್ತಿರುವುದಾಗಿ ತಿಳಿಸಿದಳು. ನಂತರ ಆಕೆಯನ್ನು ಮನೆಗೆ ಕರೆದುಕೊಂಡು ಹೋಗಲು ವಿಳಾಸ ​ ಕೇಳಿದಾಗ ಮೊದಲು ಸುಳ್ಳು ಹೇಳಿ ದಾರಿ ತಪ್ಪಿಸಿದಳು. ಕೊನೆಗೆ ಆಕೆಗೆ ಬುದ್ಧಿವಾದ ಹೇಳಿ ಮನೆಗೆ ಕರೆದುಕೊಂಡು ಹೋಗುವಷ್ಟರಲ್ಲಿ ಮನೆಯ ಬಾಗಿಲಿಗೆ ಬೀಗ ಹಾಕಲಾಗಿತ್ತು. ನೆರೆಮನೆಯವರನ್ನು ಕೇಳಿದ್ದಕ್ಕೆ, ವಿದ್ಯಾರ್ಥಿನಿಯ ತಾಯಿಗೆ ಆರೋಗ್ಯದಲ್ಲಿ ಏರುಪೇರಾಗಿದ್ದರಿಂದ ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರು ಎಂದು ವಿಷಯ ತಿಳಿಸಿ, ತಮಗೆ ಪಾಲಕರು ನೀಡಿದ್ದ ಮನೆ ಕೀಯನ್ನು ಅವರಿಗೆ ಕೊಟ್ಟರು.

ಹುಡುಗಿಯನ್ನು ಮನೆಗೆ ಸೇರಿಸಿದ ಹುಸ್ಸೇನ್​, ನೆರೆ ಮನೆಯವರ ಬಳಿ ಆಕೆಯನ್ನು ಗಮನಿಸಿ, ವಿಚಾರಿಸಿಕೊಳ್ಳಿ ಎಂದು ಹೇಳಿ ಹೋದರು. ಆದರೆ, ಸ್ವಲ್ಪ ದೂರ ಹೋಗುವಷ್ಟರಲ್ಲಿ ಅವರ ಮನಸಲ್ಲಿ ತಳಮಳ. ಆ ಹುಡುಗಿಯೇನಾದರೂ ಮತ್ತೆ ಆತ್ಮಹತ್ಯೆಗೆ ಯತ್ನಿಸಿದರೆ ಎಂಬ ಭಯ ಶುರುವಾಗಿ ಹಾಗೇ ಮತ್ತೆ ವಾಪಸ್​ ಬಂದರು. ಬರುವಷ್ಟರಲ್ಲಿ ಮತ್ತೆ ಮನೆಯೊಳಗಿಂದ ಬೀಗ ಹಾಕಿಕೊಂಡಿದ್ದಳು. ನೆರೆಹೊರೆಯವರ ಸಹಾಯದಿಂದ ಬಾಗಿಲು ಒಡೆದು ಒಳಗೆ ಹೋಗಿ ನೋಡಿದಾಗ ಫ್ಯಾನ್​ಗೆ ನೇಣು ಬಿಗಿದುಕೊಂಡಿದ್ದಳು. ತಕ್ಷಣ ಅವಳನ್ನು ಆಸ್ಪತ್ರೆಗೆ ಸೇರಿಸಲಾಯಿತು.

ಘಟನೆ ಬಗ್ಗೆ ಕೇಳಿದ ವಿದ್ಯಾರ್ಥಿನಿಯ ತಂದೆ, ನಾವು ಹುಸ್ಸೇನ್​ ಅವರಿಗೆ ಚಿರಋಣಿಯಾಗಿದ್ದೇವೆ ಎಂದಿದ್ದಾರೆ. ವಶಿ ಸೇತುವೆ ಮೇಲಿನಿಂದ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ಆ ಸ್ಥಳದಲ್ಲಿ ಬೀದಿ ದೀಪದವಿಲ್ಲ. ಅಲ್ಲಿ ರಾತ್ರಿ ಸಮಯದಲ್ಲಿ ಬೆಳಕು ಇರುವಂತೆ ಮಾಡಬೇಕು ಎಂದು ಹುಸ್ಸೇನ್​ ತಿಳಿಸಿದ್ದಾರೆ.