Friday, 16th November 2018  

Vijayavani

Breaking News

ನಾಸಾ ಮೆಚ್ಚುಗೆ ಪಡೆದ ಕಲಬುರಗಿಯ ನೇಹಾ ಕಿರಣ

Friday, 29.12.2017, 8:05 PM       No Comments

| ಪ್ರಭಾಕರ ಜೋಶಿ

ಕಲಬುರಗಿ: ಜಿಲ್ಲೆಯ ಹಳ್ಳಿ ಹುಡುಗಿಯೊಬ್ಬಳು ವಿಶ್ಯವಿಖ್ಯಾತ ಬಾಹ್ಯಾಕಾಶ ಸಂಸ್ಥೆ ನಾಸಾ ನೀಡುವ ತರಬೇತಿಗೆ ಆಯ್ಕೆಯಾಗಿ ಹುಬ್ಬೇರಿಸುವಂತೆ ಮಾಡಿದ್ದಾಳೆ.

9ನೇ ತರಗತಿ ಓದುತ್ತಿರುವ ವಿದ್ಯಾರ್ಥಿನಿ ನೇಹಾ ಕಿರಣ ಬಾಹ್ಯಾಕಾಶ ವಿಜ್ಞಾನದಲ್ಲಿ ತೋರಿದ ಆಸಕ್ತಿ ಮತ್ತು ರೋಬೊಟ್ ತಂತ್ರಜ್ಞಾನದಲ್ಲಿ ಮಾಡಿದ ಪ್ರಯೋಗಾತ್ಮಕ ಪ್ರದರ್ಶನದಿಂದಾಗಿ ಯುನೈಟೆಡ್ ನೇಷನ್ಸ್ ಆಫ್ ಅಮೆರಿಕದ ನಾಸಾ ಸಂಸ್ಥೆಯ ಶೈಕ್ಷಣಿಕ ಪ್ರವಾಸಕ್ಕೆ ಆಯ್ಕೆಯಾಗಿ 10 ದಿನದ ತರಬೇತಿ ಪಡೆದು ಗಮನ ಸೆಳೆದಿದ್ದಾಳೆ.

ಯಾರು ಈಕೆ?

ಸೇಡಂ ತಾಲೂಕಿನ ಹಂಗನಳ್ಳಿ ನೇಹಾ ಕಿರಣ ಹುಟ್ಟೂರು. ಪ್ರಸಕ್ತ ಅರಬ್ ಸಂಯುಕ್ತ ರಾಷ್ಟ್ರದ ಆಲ್​ಫುಜರಾಯಿ ಪ್ರಾಂತ್ಯದ ದಿಬ್ಬಾ ಎಂಬಲ್ಲಿರುವ ದಿ ಮಾಡರ್ನ್ ಇಂಡಿಯನ್ ಸ್ಕೂಲ್​ನಲ್ಲಿ 9ನೇ ತರಗತಿ ಓದುತ್ತಿದ್ದಾಳೆ. ನೇಹಾಕಿರಣ ತಂದೆ ಬಸವರಾಜ ನಿಪ್ಪಾಣಿ ಯುಎಇನ ಸಿಮೆಂಟ್ ಕಾರ್ಖಾನೆಯಲ್ಲಿ ಇಂಜಿನಿಯರ್ ಆಗಿದ್ದಾರೆ. ತಾಯಿ ಭುವನೇಶ್ವರಿ ಅಲ್ಲಿಯೇ ಶಾಲಾ ಶಿಕ್ಷಕಿ.

ನಾಸಾ ಮೆಚ್ಚುಗೆ

ನೇಹಾಗೆ ಬಾಲ್ಯದಿಂದಲೂ ವಿಜ್ಞಾನದಲ್ಲಿ ತೀವ್ರ ಆಸಕ್ತಿ. ಶಾಲೆ ಪ್ರಾಜೆಕ್ಟ್ ವರ್ಕ್​ಗೆ ಸ್ವಯಂ ರೂಪಿಸಿದ ರೋಬೊದಿಂದ ಗಮನ ಸೆಳೆದು ನಾಸಾ ಮೆಚ್ಚುಗೆ ಗಳಿಸಿದ್ದಾಳೆ. ಈ ದಿಸೆಯಲ್ಲಿ ನಾಸಾ ಸಂಸ್ಥೆ 10 ದಿನದ ವಿಶೇಷ ತರಬೇತಿಗೆ ನೇಹಾಳನ್ನು ಆಯ್ಕೆ ಮಾಡಿ ತರಬೇತಿ ನೀಡಿ ಈಕೆ ಕಾರ್ಯನಿರ್ವಹಣೆಗೆ ಮೆಚ್ಚುಗೆ ಸೂಚಿಸಿದೆ.

ನಾಸಾ ಮೆಚ್ಚುಗೆಯಿಂದ ಉತ್ತೇಜಿತಗೊಂಡಿರುವ ನೇಹಾ ಬಾಹ್ಯಾಕಾಶ ಕ್ಷೇತ್ರದಲ್ಲೇ ಕೆಲಸ ಮಾಡುವ ಉತ್ಸಾಹ ತೋರಿದ್ದಾಳೆ. ಈ ರಂಗದಲ್ಲಿಯೇ ಮುಂದಿನ ಶಿಕ್ಷಣ ಪಡೆಯುವುದಾಗಿ ಹೇಳುತ್ತಾಳೆ.

ತಂದೆ ಕೆಲಸದ ನಿಮಿತ್ತ ಯುಎಇನಲ್ಲಿ ಇರುವುದಾಗಿಯೂ ಮುಂದಿನ ವರ್ಷ ಭಾರತಕ್ಕೆ ಮರಳಿ ಶಿಕ್ಷಣ ಮುಂದುವರಿಸುವುದಾಗಿ ಹೇಳುವ ನೇಹಾ, ಬಾಹ್ಯಾಕಾಶ ವಿಜ್ಞಾನಿಯಾಗುವ ಅಪೇಕ್ಷೆ ಹೊಂದಿದ್ದೇನೆ. ಈ ದಿಸೆಯಲ್ಲಿ ತಾಯಿ ಸೂಕ್ತ ನೆರವು ನೀಡುತ್ತಿದ್ದಾರೆ ಎನ್ನುತ್ತಾಳೆ. ಈಕೆ ಆಸಕ್ತಿ ಮತ್ತು ಸಾಧನೆ ಜಿಲ್ಲೆಯ ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡುವಂತಾಗಲಿ ಎನ್ನುತ್ತಾರೆ ನೇಹಾ ತಾಯಿ ಭುವನೇಶ್ವರಿ.

ನಾನು ವೃತ್ತಿಯಿಂದ ಇಂಜಿನಿಯರ್ ಆಗಿದ್ದರಿಂದ ಸಹಜವೇ ವೈಜ್ಞಾನಿಕ ದೃಷ್ಟಿಕೋನದ ಚರ್ಚೆ, ವಿಜ್ಞಾನಕ್ಕೆ ಸಂಬಂಧಿಸಿದಂತೆ ಜಗತ್ತಿನಲ್ಲಿ ಆಗುತ್ತಿರುವ ಬೆಳವಣಿಗೆಗಳ ಚರ್ಚೆಗಳು ಮನೆಯಲ್ಲಿ ನಡೆಯುತ್ತಿರುತ್ತವೆ. ಇದರಿಂದ ನೇಹಾಗೂ ವಿಜ್ಞಾನ ವಿಷಯಗಳ ಬಗ್ಗೆ ಹೆಚ್ಚಿನ ಆಸಕ್ತಿ ಮೂಡಿದೆ. ಈ ಕ್ಷೇತ್ರದಲ್ಲೇ ಏನಾದರೂ ಸಾಧಿಸಲಿ ಎಂದು ಪ್ರೋತ್ಸಾಹಿಸುತ್ತಿದ್ದೇವೆ.

| ಬಸವರಾಜ ನಿಪ್ಪಾಣಿ, ನೇಹಾಳ ತಂದೆ

ಯುಎಇನಲ್ಲಿರುವ ದಿ ಮಾಡರ್ನ್ ಇಂಡಿಯನ್ ಸ್ಕೂಲ್​ನಲ್ಲಿ ಓದುತ್ತಿರುವ ನನಗೆ ಪ್ರಾಥಮಿಕ ಶಾಲಾ ದಿನಗಳಿಂದಲೂ ಪ್ರಾಜೆಕ್ಟ್ ವರ್ಕ್​ಗಳಿಗೆ ಅಂತರಿಕ್ಷದ ಮಾದರಿ, ರೋಬೋಟ್​ಗಳ ಮಾದರಿಗಳನ್ನು ಮಾಡುತ್ತಿದ್ದೆ. ನನ್ನ ಆಸಕ್ತಿ ಅರಿತ ತಾಯಿ ಮತ್ತು ಶಿಕ್ಷಕರು ನಾಸಾ ಶೈಕ್ಷಣಿಕ ಪ್ರವಾಸಕ್ಕೆ ಪ್ರಮೋಟ್ ಮಾಡಿದರು. ನಾಸಾ ಅಧಿಕಾರಿಗಳು ನನ್ನ ಮಾದರಿಗಳನ್ನು ಇಷ್ಟ ಪಟ್ಟರು. ಈ ವಿಷಯದಲ್ಲಿ ಮತ್ತಷ್ಟು ಸಾಧನೆ ಮಾಡಲು ಅವರು ನೀಡಿದ 10 ದಿನದ ತರಬೇತಿ ಬಹಳ ಸಹಕಾರಿಯಾಗಿದೆ.

| ನೇಹಾ ಕಿರಣ, ನಾಸಾ ಮೆಚ್ಚುಗೆ ಪಡೆದ ವಿದ್ಯಾರ್ಥಿನಿ

 

Leave a Reply

Your email address will not be published. Required fields are marked *

Back To Top