ವಿದ್ಯಾರ್ಥಿಗಳ ಜಾನಪದ ನೃತ್ಯ ಸ್ಪರ್ಧೆ

ಮಡಿಕೇರಿ: ಜಾನಪದ ಗೀತೆ, ಕಲೆ, ನೃತ್ಯ ಹೀಗೆ ಸಂಸ್ಕೃತಿಯನ್ನು ಒತ್ತಾಯಕ್ಕೆ ಮಾಡದೆ ಪ್ರೀತಿಯಿಂದ ಮಾಡಬೇಕು ಎಂದು ಕರ್ನಾಟಕ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಬಿ.ಜಿ.ಅನಂತಶಯನ ಹೇಳಿದರು.

ನಗರದ ಭಾರತೀಯ ವಿದ್ಯಾಭವನ ಸಭಾಂಗಣದಲ್ಲಿ ಮಡಿಕೇರಿ ತಾಲೂಕು ಜಾನಪದ ಪರಿಷತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಶನಿವಾರ ಮಡಿಕೇರಿ ತಾಲೂಕು ಮಟ್ಟದ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಜಾನಪದ ನೃತ್ಯ ಸ್ಪರ್ಧೆಯ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಾನಪದ ಸಾಹಿತ್ಯದಲ್ಲಿನ ಪ್ರೀತಿ, ಸೌಂದರ್ಯ ಬೇರೆ ಯಾವುದರಿಂದಲೂ ಸಿಗಲು ಸಾಧ್ಯವಿಲ್ಲ. ಜಾನಪದ ಹೃದಯದಿಂದ ಹೃದಯಕ್ಕೆ ಬಂದ ಕಲೆಯಾಗಿದೆ. ಈ ಕಲೆಯನ್ನು ಉಳಿಸಿ ಬೆಳಸುವುದು ಪ್ರತಿಯೊಬ್ಬರದ್ದಾಗಿದೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಭಾರತೀಯ ವಿದ್ಯಾಭವನ ಕೊಡಗು ಘಟಕ ಅಧ್ಯಕ್ಷ ಕೆ.ಎಸ್.ದೇವಯ್ಯ, ಜಾನಪದ ಸಾಹಿತ್ಯದ ಮಹತ್ವದ ಬಗ್ಗೆ ಪ್ರತಿಯೊಬ್ಬರಿಗೂ ಅರಿವು ಅಗತ್ಯವುದು. ಜಾನಪದ ಸಾಹಿತ್ಯ ಪ್ರತಿಯೊಬ್ಬರ ಜೀವನದ ಅವಿಭಾಜ್ಯ ಅಂಗವಾಗಿದ್ದು, ನಿತ್ಯ ಜರುಗುವ ಘಟನೆ ಒಳಗೊಂಡಿದೆ. ಜಾನಪದ ಸಾಹಿತ್ಯದ ಬೇರುಗಳು ಭಾರತೀಯ ಸಂಸ್ಕೃತಿಯಲ್ಲಿ ಆಳವಾಗಿ ಬೇರೂರಿದರೂ ಅದರ ಚಿಗುರು ಹೆಚ್ಚಾಗಿ ವೃದ್ಧಿಸಬೇಕು ಎಂದು ತಿಳಿಸಿ, ಭಾರತೀಯ ವಿದ್ಯಾಭವನದಿಂದ ಜಿಲ್ಲಾ ಜಾನಪದ ಸಾಹಿತ್ಯ ಪರಿಷತ್‌ಗೆ 10 ಸಾವಿರ ರೂ. ದೇಣಿಗೆ ನೀಡಿದರು.

ಜಾನಪದ ಪರಿಷತ್ ಜಿಲ್ಲಾ ಉಪಾಧ್ಯಕ್ಷ ಬಿ.ಕೆ.ರವೀಂದ್ರ ರೈ, ನಿರ್ದೇಶಕಿ ಜಯಲಕ್ಷ್ಮೀ ಮಾತನಾಡಿದರು. ವೇದಿಕೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕೆ.ಟಿ.ದರ್ಶನ್, ಗ್ರೀನ್‌ಸಿಟಿ ೆರಂ ಅಧ್ಯಕ್ಷ ಕುಕ್ಕೇರ ಜಯ ಚಿಣ್ಣಪ್ಪ, ಜಾನಪದ ಪರಿಷತ್ ಜಿಲ್ಲಾ ಉಪಾಧ್ಯಕ್ಷ ಅಂಬೆಕಲ್ ಕುಶಾಲಪ್ಪ, ಪ್ರಧಾನ ಕಾರ್ಯದರ್ಶಿ ಎಸ್‌ಐ ಮುನ್ನೀರ್ ಅಹಮ್ಮದ್, ರೋಟರಿ ಮಿಸ್ಟಿಹಿಲ್ಸ್ ನಿರ್ದೇಶಕರಾದ ಅಂಬೆಕಲ್ ವಿನೋದ್, ಪ್ರಸಾದ್‌ಗೌಡ, ಶಶಿ ಮೊಣ್ಣಪ್ಪ, ತಾಲೂಕು ಜಾನಪದ ಪರಿಷತ್ ಪ್ರಧಾನ ಕಾರ್ಯದರ್ಶಿ ಸಂಗೀತಾ ಪ್ರಸನ್ನ, ಖಜಾಂಜಿ ಅಂಬೆಕಲ್ ನವೀನ್ ಕುಶಾಲಪ್ಪ, ಎಚ್.ಟಿ.ಅನಿಲ್, ಅಂಬೆಕಲ್ ನವೀನ್ ಕುಶಾಲಪ್ಪ ಇದ್ದರು.

ತಾಲೂಕಿನ 28 ಶಾಲೆಗಳಿಂದ 172 ವಿದ್ಯಾರ್ಥಿಗಳು 1 ರಿಂದ 4, 5 ರಿಂದ 7 ಮತ್ತು 8 ರಿಂದ 10ನೇ ತರಗತಿ ಭಾಗಗಳಲ್ಲಿ ಜಾನಪದ ನೃತ್ಯ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.