ನಡುರಸ್ತೆಯಲ್ಲಿ ಹೊಡೆದಾಡಿದ ವಿದ್ಯಾರ್ಥಿಗಳು

ಕುಂದಾಪುರ: ಇಲ್ಲಿನ ಶಾಸ್ತ್ರಿ ವೃತ್ತದ ಬಳಿ ಎರಡು ಕಾಲೇಜಿನ ವಿದ್ಯಾರ್ಥಿಗಳು ಸೋಮವಾರ ನಡುರಸ್ತೆಯಲ್ಲಿ ರಾಡ್ ಹಿಡಿದು ರೌಡಿಗಳಂತೆ ಹೊಡೆದಾಡಿಕೊಂಡಿದ್ದು, ಓರ್ವ ವಿದ್ಯಾರ್ಥಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾನೆ.
ಕಳೆದ ಶನಿವಾರ ಕಾಲೇಜೊಂದರ ವಿದ್ಯಾರ್ಥಿಗೆ ಮತ್ತೊಂದು ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾಥಿಗಳು ಹಲ್ಲೆ ನಡೆಸಿದ್ದರು. ಇದಕ್ಕೆ ಪ್ರತೀಕಾರವಾಗಿ ಹಲ್ಲೆಗೆ ಒಳಗಾದ ವಿದ್ಯಾರ್ಥಿ ತಮ್ಮ ಕಾಲೇಜಿನ ವಿದ್ಯಾರ್ಥಿಗಳ ತಂಡದ ಜತೆ ಆ ಕಾಲೇಜು ಮೈದಾನಕ್ಕೆ ಬಂದಿದ್ದ. ಹಲ್ಲೆ ಮಾಡಿದ ವಿದ್ಯಾರ್ಥಿ ಊಟದ ಸಮಯದಲ್ಲಿ ಹೊರಗೆ ಬರುತ್ತಿರುವುದನ್ನು ಕಂಡು ಕೈಯಲ್ಲಿ ರಾಡ್ ಆತನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಸಾರ್ವಜನಿಕರು ಮಧ್ಯೆ ಪ್ರವೇಶಿಸಿ ಅನಾಹುತ ತಪ್ಪಿಸಿದ್ದಾರೆ. ಆದರೆ, ಹಲ್ಲೆ ತಡೆಯಲು ಬಂದವರ ಮೇಲೂ ವಿದ್ಯಾರ್ಥಿಗಳು ಏರಿ ಹೋಗಿದ್ದಾರೆ.

ಕೆಲಸಮಯದ ಹಿಂದೆ ಇಲ್ಲಿನ ಸರ್ಕಾರಿ ಕಾಲೇಜು ವಿದ್ಯಾರ್ಥಿಗಳು ರಸ್ತೆಯಲ್ಲಿ ಹೊಡೆದಾಡಿಕೊಂಡಿದ್ದೂ ಅಲ್ಲದೆ, ಪದವಿಪೂರ್ವ ಕಾಲೇಜು ಆವರಣದಲ್ಲೇ ಚೂರಿಯಿಂದ ಇರಿದು ಪರಾರಿಯಾದ ಘಟನೆ ನಡೆದಿತ್ತು.

ಪುರಸಭೆ ಸದಸ್ಯ, ನಟನ ಮೇಲೂ ಹಲ್ಲೆ ಯತ್ನ: ಹಲ್ಲೆ ಬಿಡಿಸಲು ಮುಂದಾದ ಪುರಸಭೆ ಸದಸ್ಯ ಗಿರೀಶ್ ಜಿ.ಕೆ ಅವರ ಕಾರ್ ಕೀ ಕಿತ್ತುಕೊಂಡಿದ್ದಲ್ಲದೆ ಅವರ ಮೇಲೂ ಹಲ್ಲೆ ಯತ್ನ ನಡೆದಿದೆ. ಅದೇ ದಾರಿಯಲ್ಲಿ ಹೋಗುತ್ತಿದ್ದ ಕಿರುತೆರೆ ನಟ ರಕ್ಷಿತ್ ಶೆಟ್ಟಿ ಹೊಡೆದಾಟ ಬಿಡಿಸಲು ಮುಂದಾಗಿದ್ದು, ವಿದ್ಯಾರ್ಥಿಗಳು ಅವರ ಮೇಲೂ ಹಲ್ಲೆಗೆ ಮುಂದಾಗಿದ್ದರು. ಸ್ಥಳೀಯರು ಒಟ್ಟು ಸೇರುವುದನ್ನು ಕಂಡ ವಿದ್ಯಾರ್ಥಿಗಳು ಸ್ಥಳದಿಂದ ಕಾಲು ಕಿತ್ತಿದ್ದಾರೆ.