ಬಸ್ ನಿಲ್ದಾಣ ಬಳಿ ಘಟನೆ | ಕಬ್ಬಿಣದ ರಸ್ತೆ ಡಿವೈಡರ್‌ನಲ್ಲಿ ಪ್ರವಹಿಸಿದ ವಿದ್ಯುತ್
ಕಲಬುರಗಿ : ನಗರದ ಕೇಂದ್ರ ಬಸ್ ನಿಲ್ದಾಣ ಬಳಿಯಲ್ಲಿ ಕರೆಂಟ್ ಶಾಕ್ ಹೊಡೆದು ವಿದ್ಯಾರ್ಥಿಯೊಬ್ಬ ಮೃತಪಟ್ಟಿದ್ದಾನೆ. ಮುಖ್ಯರಸ್ತೆಯಲ್ಲಿಯೇ ಜನರು ನೋಡ ನೋಡುತ್ತಿದ್ದಂತೆ ಪ್ರಾಣ ಬಿಟ್ಟಿದ್ದಾನೆ. ಇನ್ನಿಬ್ಬರು ಸುದೈವದಿಂದ ಪಾರಾಗಿದ್ದಾರೆ.
ಕಮಲರಾಜ ಮಲ್ಲಿಕಾರ್ಜುನ ಮೇತ್ರೆ (೧೪) ಮೃತಪಟ್ಟ ಬಾಲಕ. ಬಸವ ನಗರದ ನಿವಾಸಿಯಾಗಿದ್ದ ಆತ ಖಾಸಗಿ ಶಾಲೆಯಲ್ಲಿ ೯ನೇ ತರಗತಿ ಓದುತ್ತಿದ್ದ.
ಬಸ್ ನಿಲ್ದಾಣ ಮುಂಭಾಗದ ಮುಖ್ಯರಸ್ತೆಯಲ್ಲಿರುವ ಬೇಕರಿ ಬಳಿಯಲ್ಲಿ ಮೂವರು ಸ್ನೇಹಿತರು ಕೂಡಿಕೊಂಡು ರಸ್ತೆ ದಾಟುತ್ತಿದ್ದರು. ರಸ್ತೆ ಡಿವೈಡರ್‌ಗಾಗಿ ಅಳವಡಿಸಿರುವ ಕಬ್ಬಿಣದ ಸರಳಿಗೆ ಕರೆಂಟ್ ತಂತಿ ತಗುಲಿ ಅದರಲ್ಲಿ ವಿದ್ಯುತ್ ಪ್ರವಹಿಸಿದೆ. ಇದು ಗೊತ್ತಾದೆ ಬಾಲಕರು ಅದನ್ನು ಹಿಡಿದಾಗ ಒಬ್ಬನಿಗೆ ಶಾಕ್ ಹೊಡೆದಿದೆ. ಆತನ ಹಾಗೆ ನಿಲ್ಲುತ್ತಿದ್ದಂತೆ ಇನ್ನಿಬ್ಬರು ಗಾಬರಿಗೊಂಡಿದ್ದಾರೆ. ಜನರು ನೋಡಿದರು ಸಹಾಯ ಹಸ್ತ ಚಾಚಲಿಲ್ಲ.
ಸುದ್ದಿ ಅರಿಯುತ್ತಲೇ ಇನ್‌ಸ್ಪೆಕ್ಟರ್ ಅರುಣಕುಮಾರ ಹಾಗೂ ಪೊಲೀಸ್ ಸಿಬ್ಬಂದಿ ದೌಡಾಯಿಸಿದರು. ಪಾಲಿಕೆ ಆಯುಕ್ತ ಭುವನೇಶ ಪಾಟೀಲ್ ಇತರರು ಭೇಟಿ ನೀಡಿದರು. ಬಾಲಕನ ಶವವನ್ನು ಜಿಮ್ಸ್ ಆಸ್ಪತ್ರೆಗೆ ಸಾಗಿಸಿದರು. ಅಶೋಕ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.
ಕೇಂದ್ರ ಬಸ್ ನಿಲ್ದಾಣ ಬಳಿ ಕರೆಂಟ್ ಶಾಕ್ ಹೊಡೆದು ಬಾಲಕ ಮೃತಪಟ್ಟ ಘಟನೆ ನೋವು ತರಿಸಿದೆ. ಜೆಸ್ಕಾಂ ನಿರ್ಲಕ್ಷÈ ಕಂಡು ಬರುತ್ತಿದೆ. ಕೂಡಲೇ ಎಲ್ಲ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ. ಬಾಲಕನ ಕುಟುಂಬಕ್ಕೆ ಸರ್ಕಾರದಿಂದ ಸೂಕ್ತ ಪರಿಹಾರ ಕೊಡಿಸಲು ಪ್ರಯತ್ನಿಸುವೆ.
| ಅಲ್ಲಮಪ್ರಭು ಪಾಟೀಲ್ ಕಲಬುರಗಿ ದಕ್ಷಿಣ ಶಾಸಕ