More

    ರಾಯಬಾಗ: ವಿದ್ಯಾರ್ಥಿಗಳ ಸೈಕಲ್ ದುರಸ್ತಿಗೊಳಿಸಿ

    ರಾಯಬಾಗ: ಸರ್ಕಾರಿ ಪ್ರೌಢ ಶಾಲೆ ವಿದ್ಯಾರ್ಥಿಗಳಿಗೆ ನೀಡುವ ಉಚಿತ ಸೈಕಲ್‌ಗಳ ನಿರ್ವಹಣೆಗೆ ಒಂದು ವರ್ಷದವರೆಗೆ ಸರ್ಕಾರ ಹಣ ನೀಡುತ್ತಿದೆ. ಸೈಕಲ್ ಟೆಂಡರ್ ಪಡೆದವರಿಂದ ದುರಸ್ತಿ ಮಾಡಿಸಿಕೊಡಬೇಕು ಎಂದು ಬಿಇಒಗೆ ಜಿ.ಪಂ. ಉಪಕಾರ್ಯದರ್ಶಿ-1 (ಆಡಳಿತ) ಡಿ.ಎಂ. ಜಕ್ಕಪ್ಪಗೋಳ ಸೂಚಿಸಿದರು.

    ಪಟ್ಟಣದ ತಾಪಂ ಸಭಾಭವನದಲ್ಲಿ ಮಂಗಳವಾರ ಆಯೋಜಿಸಿದ್ದ ತಾಪಂ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. ಶಾಲೆಗಳಿಗೆ ಏಜೆನ್ಸಿಯವರು ನೀಡುವ ಸೈಕಲ್‌ಗಳ ಗುಣಮಟ್ಟವನ್ನು ಪರಿಶೀಲಿಸಿದ ನಂತರ ವಿದ್ಯಾರ್ಥಿಗಳಿಗೆ ವಿತರಿಸಬೇಕು ಎಂದು ಬಿಇಒ ಎಚ್.ಎ. ಭಜಂತ್ರಿಗೆ ತಿಳಿಸಿದರು. ಕೇಂದ್ರ ಸರ್ಕಾರ ಪ್ರವಾಹ ಪರಿಹಾರಧನ ಬಿಡುಗಡೆ ಮಾಡಿದೆ. ಅಧಿಕಾರಿಗಳು ಪ್ರವಾಹದಿಂದ ಹಾನಿಗೊಂಡ ಮನೆ, ಬೆಳೆ ಹಾನಿಗೆ ಸೂಕ್ತ ಪರಿಹಾರ ಒದಗಿಸುವ ಕಾರ್ಯ ಮಾಡಬೇಕು. ರಸ್ತೆ, ಕುಡಿಯುವ ನೀರಿನ ಘಟಕಗಳ ಕಾಮಗಾರಿಗಳನ್ನು ಸಮರ್ಪಕವಾಗಿ ನಿರ್ವಹಿಸಬೇಕು. ಜಿ.ಪಂ. ಸದಸ್ಯರನ್ನೊಳಗೊಂಡ ಕೆಡಿಪಿ ಸಭೆಯಲ್ಲಿ ತಾಲೂಕು ಮಟ್ಟದಲ್ಲಿ ಇರುವ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕು. ಉಳಿದ ಸಮಸ್ಯೆಗಳನ್ನು ಜಿ.ಪಂ. ಸಭೆಯಲ್ಲಿ ಪ್ರಸ್ತಾಪಿಸಲಾಗುವುದು ಎಂದು ಡಿ.ಎಂ. ಜಕ್ಕಪ್ಪಗೋಳ ತಿಳಿಸಿದರು.

    ತಾಪಂ ಅಧ್ಯಕ್ಷೆ ಸುಜಾತಾ ಪಾಟೀಲ ಮಾತನಾಡಿ, ಪ್ರವಾಹದಲ್ಲಿ ಬೆಳೆ ಹಾನಿಗೊಳಗಾದ ರೈತರಿಗೆ ಸರಿಯಾಗಿ ಹಣ ಜಮೆಯಾಗದೇ ವ್ಯತ್ಯಾಸವಾಗಿದೆ. ಕೆಲವೊಂದು ರೈತರಿಗೆ 4 ಸಾವಿರ ಹಣ ಜಮೆಯಾಗಿದ್ದರೆ, ಕೆಲ ರೈತರಿಗೆ 40 ಸಾವಿರ ಹಣ ಜಮೆಯಾಗಿದೆ ಎಂದು ಆಪಾದಿಸಿದರು.

    ತಾಲೂಕಿನ ಬಹಳಷ್ಟು ಸರ್ಕಾರಿ ಶಾಲೆಗಳಲ್ಲಿ ಶೌಚಗೃಹಗಳಿಲ್ಲ. ಇದರಿಂದ ಗ್ರಾಮೀಣ ಭಾಗದ ಹೆಣ್ಣು ಮಕ್ಕಳು ಶಾಲೆ ಬಿಡುತ್ತಿದ್ದಾರೆ. ಶಾಲೆಗಳಲ್ಲಿ ಸರಿಯಾದ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಕಾಂಪೌಂಡ್ ಇಲ್ಲ. ಬಿಇಒ ಅವರು ಕಚೇರಿಯಲ್ಲಿ ಕುಳಿತು ದೂರವಾಣಿಯಲ್ಲಿ ಅಂಕಿ-ಸಂಖ್ಯೆಗಳ ಮಾಹಿತಿ ಪಡೆಯುತ್ತಾರೆ ಎಂದು ಆರೋಪಿಸಿದರು. ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆ ಇದ್ದು, ಹಾಜರಾತಿಯಲ್ಲಿ ಹೆಚ್ಚು ಇರುತ್ತದೆ. ಸಿಡಿಪಿಒ ಅವರು ಕೇಂದ್ರಗಳಿಗೆ ಭೇಟಿ ನೀಡದೆ, ಕಚೇರಿಯಲ್ಲಿ ಕುಳಿತು ಎಲ್ಲವನ್ನೂ ನಿರ್ವಹಿಸುತ್ತಾರೆ. ಇನ್ನು ಸಾರ್ವಜನಿಕ ಆಸ್ಪತ್ರೆಯಲ್ಲಿ ನಾಯಿ ಕಡಿತಕ್ಕೆ ಒಳಗಾದ ರೋಗಿಗೆ ನೀಡುವ ಔಷಧ ಇರುವುದಿಲ್ಲ. ಕೇಳಿದರೆ ಖಾಲಿಯಾಗಿದೆ ಎಂದು ಸಬೂಬು ಹೇಳುತ್ತಾರೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳನ್ನು ತಾಪಂ ಅಧ್ಯಕ್ಷೆ ತರಾಟೆಗೆ ತೆಗೆದುಕೊಂಡರು. ಸರ್ಕಾರದ ಇಲಾಖೆಗಳಲ್ಲಿ ಸಾಕಷ್ಟು ಅನುದಾನ ಇದ್ದರೂ ಅಧಿಕಾರಿಗಳು ಸರಿಯಾಗಿ ಸದ್ಬಳಕೆ ಮಾಡುತ್ತಿಲ್ಲ ಎಂದು ಆರೋಪಿಸಿದರು. ಸಭೆಯಲ್ಲಿ ತಹಸೀಲ್ದಾರ್ ಚಂದ್ರಕಾಂತ ಭಜಂತ್ರಿ, ತಾಪಂ ಇಒ ಪ್ರಕಾಶ ವಡ್ಡರ, ತಾಪಂ ಉಪಾಧ್ಯಕ್ಷೆ ಸವಿತಾ ನಾಯಿಕ, ಜಿಪಂ ಸದಸ್ಯರಾದ ನಿಂಗಪ್ಪ ಪಕಾಂಡಿ, ಅಕ್ಬರ್‌ಅಲಿ ಮಾರೂಫ, ವಿಲಾಸಮತಿ ಪಾಟೀಲ, ಜಯಶ್ರೀ ಮೊಹಿತೆ ಹಾಗೂ ಇತರ ಅಧಿಕಾರಿಗಳು ಪಾಲ್ಗೊಂಡಿದ್ದರು.

    ಶುದ್ಧ ನೀರು ಒದಗಿಸಲು ಒತ್ತಾಯ

    ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆಯಿಂದ ಅಳವಡಿಸಿರುವ ಶುದ್ಧ ನೀರಿನ ಘಟಕಗಳು ಬಹುತೇಕ ಕಡೆಗಳಲ್ಲಿ ಸ್ಥಗಿತಗೊಂಡಿವೆ. ಆದ್ದರಿಂದ ಜನರಿಗೆ ಕುಡಿಯಲು ಶುದ್ಧ ನೀರು ಸಿಗುತ್ತಿಲ್ಲ. ಶುದ್ಧ ನೀರು ಒದಗಿಸಲು ಕ್ರಮ ಕೈಗೊಳ್ಳಬೇಕು. ಕೆಲವೊಂದು ಕಡೆಗಳಲ್ಲಿ ಓವರ್‌ಹೆಡ್ ಟ್ಯಾಂಕ್‌ಗಳು ಸೋರುತ್ತಿದ್ದರೂ ಅವುಗಳ ಕಡೆ ಗಮನ ಹರಿಸುತ್ತಿಲ್ಲವೆಂದು ಜಿಪಂ ಸದಸ್ಯರು ಆರೋಪಿಸಿದರು. ಹಳೇ ಓವರ್ ಹೆಡ್ ಟ್ಯಾಂಕ್‌ಗಳನ್ನು ಪರೀಕ್ಷಿಸಿ, ಜಲಸಂಗ್ರಹಕ್ಕೆ ಯೋಗ್ಯವಿಲ್ಲದ ಟ್ಯಾಂಕ್‌ಗಳನ್ನು ತೆರವುಗೊಳಿಸಲು ಪ್ರಸ್ತಾವನೆ ಸಲ್ಲಿಸುವಂತೆ ಡಿ.ಎಂ. ಜಕ್ಕಪ್ಪಗೋಳ ಅಧಿಕಾರಿಗಳಿಗೆ ಸೂಚಿಸಿದರು.


    ಜ. 20ರಂದು ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮ ನಡೆಯಲಿದೆ. 5 ವರ್ಷದೊಳಗಿನ ಮಕ್ಕಳಿಗೆ ಎರಡು ಹನಿ ಪೋಲಿಯೋ ಹಾಕಿಸಿ, ಪೋಲಿಯೋ ಮುಕ್ತ ರಾಷ್ಟ್ರ ಮಾಡಲು ಸಹಕರಿಸಬೇಕು. ತಾಲೂಕಿನಲ್ಲಿ ಒಟ್ಟು 55,339 ಐದು ವರ್ಷದೊಳಗಿನ ಮಕ್ಕಳಿದ್ದು, 207 ಲಸಿಕಾ ಕೇಂದ್ರಗಳಲ್ಲಿ 828 ಸಿಬ್ಬಂದಿ ಮತ್ತು 47 ಮೇಲ್ವಿಚಾರಕ ಸಿಬ್ಬಂದಿ ಕಾರ್ಯ ನಿರ್ವಹಿಸುವರು.
    | ಎಸ್.ಎಸ್. ಪಾಟೀಲ ಆರೋಗ್ಯ ಶಿಕ್ಷಣಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts