ವಿದ್ಯಾರ್ಥಿಗಳಿಂದ ಸಂಚಾರ ತಡೆ

ಶಾಲೆ ಉನ್ನತೀಕರಣಕ್ಕೆ ಒತ್ತಾಯ ಸಾಲುಗಟ್ಟಿ ನಿಂತ ವಾಹನಗಳು

ಕಂಪ್ಲಿ: ಅರ್ಧ ಜಿಲೇಬಿ ಎಣ್ಯಾಗ… ನಮ್ಮ ಪ್ರೌಢಶಾಲೆ ತಡೆದವರು ಮಣ್ಣಾಗ…
ತಾಲೂಕಿನ ಮೆಟ್ರಿ ಗ್ರಾಮದ ಹೊನ್ನಳ್ಳಿ ಸಿದ್ದಪ್ಪನವರ ಸಹಿಪ್ರಾ ಶಾಲೆ ಉನ್ನತೀಕರಣಕ್ಕೆ ಆಗ್ರಹಿಸಿ ಬಳ್ಳಾರಿ-ಕಂಪ್ಲಿ ಹೆದ್ದಾರಿಯಲ್ಲಿ ಬುಧವಾರ ಸಂಚಾರ ತಡೆ ಕೈಗೊಂಡಿದ್ದ ವಿದ್ಯಾರ್ಥಿಗಳು ಹೀಗೆ ಘೋಷಣೆ ಕೂಗಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಪ್ರಾಥಮಿಕ ಶಾಲೆಯಲ್ಲಿ 1 ರಿಂದ 8 ನೇ ತರಗತಿಯಿದ್ದು, 178 ವಿದ್ಯಾರ್ಥಿಗಳು ದಾಖಲಾಗಿದ್ದಾರೆ. 9,10 ನೇ ತರಗತಿ ಆರಂಭಿಸಿ ಮೇಲ್ದರ್ಜೆಗೇರಿಸುವಂತೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು. ಇಲಾಖೆ ಅಧಿಕಾರಿಗಳು, ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಸ್ಥಳಕ್ಕೆ ಖುದ್ದು ಡಿಸಿ ಆಗಮಿಸಬೇಕು ಎಂದು ಪಟ್ಟು ಹಿಡಿದರು. ಸಂಚಾರ ತಡೆಯಿಂದ ಕಂಪ್ಲಿ, ಬಳ್ಳಾರಿ, ಮೆಟ್ರಿ ಸೇರಿ ಸುತ್ತಲಿನ ಹಳ್ಳಿಗೆ ತೆರಳುತ್ತಿದ್ದ ವಾಹನಗಳು ಎರಡು ಗಂಟೆಗಳ ಕಾಲ ಕಿಮೀಗಟ್ಟಲೇ ಸಾಲುಗಟ್ಟಿ ನಿಂತಿದ್ದವು. ಬಿಸಿಲಿನ ಝಳದಿಂದ ಪ್ರಯಾಣಿಕರು ಪರದಾಡಿದರು.

ಪರೀಕ್ಷೆಗೆ ಹಾಜರಾಗಲ್ಲ: ಒಂದೊಮ್ಮೆ ಶಾಲೆಯನ್ನು ಮೇಲ್ದರ್ಜೆಗೇರಿಸದಿದ್ದರೆ, ಪರೀಕ್ಷೆಗೆ ಹಾಜರಾಗುವುದಿಲ್ಲ. ವರ್ಗಾವಣೆ ಪತ್ರ ಪಡೆಯುವುದಿಲ್ಲ ಎಂದು 8 ನೇ ವಿದ್ಯಾರ್ಥಿಗಳು ಎಚ್ಚರಿಸಿದರು. ಎಸ್ಡಿಎಂಸಿ ಸದಸ್ಯ ಹುಚ್ಚಪ್ಪ ಮಾತನಾಡಿ, ಸ್ಥಳೀಯ ಜನಪ್ರತಿನಿಧಿಗಳು, ಮುಖಂಡರು ಇಲ್ಲಿನ ಖಾಸಗಿ ಶಾಲೆಯೊಂದಿಗೆ ಕೈಜೋಡಿಸಿ ಶಾಲೆ ಉನ್ನತೀಕರಣ ಮರೆತಿದ್ದಾರೆ ಎಂದು ಆರೋಪಿಸಿದರು.

ಸ್ಥಳಕ್ಕೆ ಆಗಮಿಸಿದ ಕಂಪ್ಲಿ ಠಾಣೆ ಪಿಎಸ್‌ಐ ಕೆ.ಬಿ.ವಾಸುಕುಮಾರ್ ಸಂಬಂಧಿಸಿದ ಅಧಿಕಾರಿಗಳ ಜತೆಗೆ ಚರ್ಚಿಸಿ ಸಮಸ್ಯೆ ಪರಿಹರಿಸುವುದಾಗಿ ಭರವಸೆ ನೀಡಿದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಸಂಚಾರ ತಡೆ ಕೈಬಿಟ್ಟರು. ಪಾಲಕರು, ಶಿಕ್ಷಣ ಪ್ರೇಮಿಗಳು ಇದ್ದರು.