ವಿದ್ಯಾರ್ಥಿ ಥಳಿಸಿದ ಶಿಕ್ಷಕಿ ಅಮಾನತು

ಬೆಳಗಾವಿ: ವಿದ್ಯಾರ್ಥಿಯನ್ನು ಮನಬಂದಂತೆ ಥಳಿಸಿದ್ದಕ್ಕೆ ಖಾಸಬಾಗದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕಿ ಎಸ್.ಪಿ.ಬುಡವಿ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಡಿಡಿಪಿಐ ಎ.ಬಿ.ಪುಂಡಲೀಕ ಆದೇಶ ಹೊರಡಿಸಿದ್ದಾರೆ.

ಕಳೆದೊಂದು ವಾರದ ಹಿಂದೆ ವಿದ್ಯಾರ್ಥಿ ಕಾಲಿಗೆ ಬಾಸುಂಡೆ ಬರುವಂತೆ ಶಿಕ್ಷಕಿ ಥಳಿಸಿದ್ದರು. ಕಲಿಕಾ ಚಟುವಟಿಕೆ ಪೂರ್ಣಗೊಳಿಸದ ಕಾರಣಕ್ಕೆ ಥಳಿಸಿದ್ದಾರೆ ಎಂದು ಮಾಹಿತಿ ಸಿಕ್ಕಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿ ಬೆಳಗ್ಗೆ ಪಾಲಕರು ಸಹ ಬೆಳಗ್ಗೆ ಶಾಲೆ ಆವರಣದಲ್ಲಿ ಪ್ರತಿಭಟನೆ ನಡೆಸಿದ್ದರು.

ಈ ಬಗ್ಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಕೆಲಹಾಕಿ ವರದಿ ನೀಡಿದ್ದು, ಅದರ ಅನುಸಾರವಾಗಿ ಕ್ರಮ ಕೈಗೊಳ್ಳಲಾಗಿದೆ ಎಂದು ಡಿಡಿಪಿಐ ಆನಂದ ಪುಂಡಲೀಕ ವಿಜಯವಾಣಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ಬೆಳಗ್ಗೆ ಶಾಲೆಯಲ್ಲಿ ಧರಣಿ ನಡೆಸಿದ್ದ ಪಾಲಕರು, ಶಿಕ್ಷಕಿ ವಿದ್ಯಾರ್ಥಿಗಳಿಂದ ತಮ್ಮ ಮಕ್ಕಳನ್ನು ಆರೈಕೆ ಮಾಡಿಸುತ್ತಾರೆ. ಹೋಂ ವರ್ಕ್ ಮಾಡದ ಕಾರಣಕ್ಕೆ 5ನೇ ತರಗತಿ ವಿದ್ಯಾರ್ಥಿ ಕಾಲಿಗೆ ಬಾಸುಂಡೆ ಬರುವಂತೆ ಹೊಡೆದಿದ್ದಾರೆ. ಅವರನ್ನು ಸೇವೆಯಿಂದ ಅಮಾನತು ಮಾಡುವಂತೆ ಒತ್ತಾಯಿಸಿದ್ದರು.

ಶಾಲೆಗೆ ಮುತ್ತಿಗೆ ಹಾಕಿ ಮುಖ್ಯಾಧ್ಯಾಪಕರು ಹಾಗೂ ಇತರೆ ಶಿಕ್ಷಕರನ್ನು ಮನಬಂದಂತೆ ತರಾಟೆಗೆ ತೆಗೆದುಕೊಂಡಿದ್ದರು.
ಶಿಕ್ಷಕಿ ವಿದ್ಯಾರ್ಥಿಯನ್ನು ಥಳಿಸಿದ್ದು ತಪ್ಪು. ವಾರದ ಹಿಂದೆ ಈ ಘಟನೆ ನಡೆದಿದೆ.ಪಾಲಕರು ಧರಣಿ ನಡೆಸಿದಾಗ ಗಮನಕ್ಕೆ ಬಂದಿದೆ.

| ಕೆ.ಡಿ.ಬಡಿಗೇರ, ಬಿಇಒ, ಬೆಳಗಾವಿ ನಗರ ವಲಯ