ಹರಪನಹಳ್ಳಿ: ಸಿಎಂ ಅವರು 2ಎ ಮೀಸಲಾತಿ ಹೋರಾಟವನ್ನು ಹತ್ತಿಕ್ಕುವ ಕುತಂತ್ರ ನಡೆಸಿದ್ದರಿಂದ ಇಷ್ಟೊಂದು ರಾದ್ಧಾಂತಕ್ಕೆ ಕಾರಣವಾಯಿತು ಎಂದು ವೀರಶೈವ ಪಂಚಮಸಾಲಿ ಸೌಹಾರ್ದ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಚಂದ್ರಶೇಖರ್ ಪೂಜಾರ್ ಆರೋಪಿಸಿದರು.
ಇಲ್ಲಿನ ಸಹಕಾರ ಸಂಘದಲ್ಲಿ ಶನಿವಾರ ಏರ್ಪಡಿಸಿದ್ದ ಪಂಚಮಸಾಲಿ ಸಮುದಾಯ ಮುಖಂಡರ ಸಭೆಯಲ್ಲಿ ಮಾತನಾಡಿದರು. 2ಎ ಮೀಸಲಾತಿ ಜಾರಿಗೊಳಿಸಬೇಕೆಂದು ಕೂಡಲಸಂಗಮದ ಬಸವಜಯ ಮೃತ್ಯುಂಜಯ ಶ್ರೀಗಳ ನೇತೃತ್ವದಲ್ಲಿ ಬೆಳಗಾವಿ ಸುವರ್ಣಸೌಧ ಮುಂದೆ ಶಾಂತಿಯುತವಾಗಿ ಹೋರಾಟ ನಡೆಸಲಾಗುತ್ತಿತ್ತು.
ಆದರೆ, ಹೋರಾಟ ಹತ್ತಿಕ್ಕಲು ಹೋರಾಟಗಾರರ ಮೇಲೆ ಪೊಲೀಸರಿಂದ ಲಾಠಿ ಚಾರ್ಜ್ ಮಾಡಿಸಿದ ರಾಜ್ಯ ಸರ್ಕಾರದ ಕ್ರಮ ಖಂಡನೀಯ. ಇದಕ್ಕೆ ಮುಂದಿನ ದಿನಗಳಲ್ಲಿ ಪಾಠವನ್ನು ಸಮಾಜ ಕಲಿಸಲಿದೆ ಎಂದರು. ಪಂಚಮಸಾಲಿ ಸಮಾಜದಲ್ಲೂ ಆರ್ಥಿಕ, ಶೈಕ್ಷಣಿಕ, ಸಾಮಾಜಿಕವಾಗಿ ಹಿಂದುಳಿದ ಕುಟುಂಬಗಳಿವೆ.
2ಎ ಮೀಸಲಾತಿ ನೀಡಿದರೆ ಮುನ್ನೆಲೆಗೆ ಬರಲು ಅನುಕೂಲವಾಗಲಿದೆ. ಈ ಬಗ್ಗೆ ಸರ್ಕಾರ ಗಮನಹರಿಸಬೇಕು ಎಂದರು.