ಬಡತನದ ವಿರುದ್ಧ ನಡೆದಿದೆ ಹೈ ಜೋಶ್​ನ ಹೋರಾಟ!

ಮನೆಯಲ್ಲಿ ಬಡತನದ್ದೇ ದರ್ಬಾರು, ಕಾಲೇಜ್ ಮೆಟ್ಟಿಲು ಹತ್ತೇ ಇಲ್ಲ, ಹೊರಜಗತ್ತು ಹೇಗಿದೆ ಗೊತ್ತಿಲ್ಲ, ಇಂಗ್ಲಿಷು, ಗಣಿತವೆಂದರೆ ಭೂತ ಕಂಡಷ್ಟೇ ಭಯ, ದುಡಿಯುವ ವಯಸ್ಸು ಬರ್ತಾ ಇದೆ, ಮುಂದೆ ಮದ್ವೆ-ಗಿದ್ವೆ ಅಂತ ಮಾಡ್ಕೊಂಡು ಪುಟ್ಟಗೂಡಿನ ಸಂಸಾರ ಕಟ್ಕೋಬೇಕು… ಆದರೆ, ಕೆಲಸ ನೀಡೋರ್ಯಾರು? ಕೂಲಿ ಮಾಡಿದ್ರೂ ಹೊಟ್ಟೆ ತುಂಬಲ್ಲ, ಹಾಗಾದರೆ ಮುಂದಿನ ಬದುಕು… ಇಂಥದ್ದೊಂದು ಪ್ರಶ್ನೆ, ತಳಮಳ, ಸಂಕಟ ಹಳ್ಳಿಗಳ, ಆರ್ಥಿಕವಾಗಿ ಹಿಂದುಳಿದ ಲಕ್ಷೋಪಲಕ್ಷ ಯುವಕ/ಯುವತಿಯರದ್ದು. ನಮ್ಮಲ್ಲಿ ನಿರುದ್ಯೋಗ ಪ್ರಮಾಣದ ಅಂಕಿಸಂಖ್ಯೆಗಳನ್ನು ಇಟ್ಟುಕೊಂಡು ರಾಜಕಾರಣ ಮಾಡ್ತಾರೆ! ‘ಉದ್ಯೋಗ ಸೃಷ್ಟಿಸಿಲ್ಲ’ ಎಂದು ಒಬ್ಬರನ್ನೊಬ್ಬರು ಬೈದುಕೊಳ್ಳುತ್ತಾರೆ. ರಾಜಕಾರಣಿಗಳ ವರಸೆಯೇ ಅಷ್ಟು, ಬಿಡಿ. ಆದರೆ, ಹೀಗೆ ಜೀವನಕೌಶಲ, ವೃತ್ತಿಕೌಶಲ ಇಲ್ಲದ ಯುವಕರಿಗೆ ಕೆಲಸ ನೀಡುವುದು ಹೇಗೆ ಎಂಬ ಪ್ರಶ್ನೆ ಪೆಡಂಭೂತವಾಗಿ ಕಾಡತೊಡಗಿದಾಗ ಕಾಪೋರೇಟ್ ಝುಗಮಗದ ವ್ಯಕ್ತಿಯೊಬ್ಬ ಬೆಂಗಳೂರಿನ ಕೊಳೆಗೇರಿಗಳಲ್ಲಿ ಸುತ್ತುತ್ತಾರೆ, ಅಲ್ಲಿನ ಕಹಿವಾಸ್ತವಗಳನ್ನು ಅರಿಯುತ್ತಾರೆ. ವಾಪಸ್ ಬಂದವರೇ ‘ದ ನಡ್ಜ್’ ಫೌಂಡೇಷನ್ ಸ್ಥಾಪಿಸುತ್ತಾರೆ. ಈಗ ಈ ಫೌಂಡೇಷನ್​ನ ‘ಗುರುಕುಲ’ ವರ್ಷಕ್ಕೆ ಮೂರು ಸಾವಿರಕ್ಕೂ ಅಧಿಕ ಜನರಿಗೆ ಕೆಲಸ ಕೊಡಿಸುತ್ತಿದೆ, ದೂರದ ಯಾದಗಿರಿ, ಕಲಬುರಗಿ, ರಾಯಚೂರಿನಲ್ಲಿ ದನ, ಕುರಿ, ಆಡು ಮೇಯಿಸಿಕೊಂಡಿದ್ದ, ಅರ್ಧಕ್ಕೇ ಶಾಲೆ ಬಿಟ್ಟು ಪಡ್ಡೆಗಳ ಗ್ಯಾಂಗ್ ಕಟ್ಟಿಕೊಂಡಿದ್ದ, ಗುಟ್ಕಾ ಮೆಲ್ಲುತ್ತ ಕಟ್ಟೆಗಳಲ್ಲಿ ಕೂತು ಹಾಳುಹರಟೆಯಲ್ಲಿ ತೊಡಗಿದ್ದ, ಹಾಗೇ, ‘ಜೀವನದಲ್ಲಿ ಏನಾದರೂ ಸಾಧಿಸಬೇಕು’ ಎಂಬ ಹಸಿವಿಟ್ಟುಕೊಂಡಿದ್ದ ಮಕ್ಕಳೆಲ್ಲ ಇಲ್ಲಿ ಬಂದು ಅರಳು ಹುರಿದಂತೆ ಇಂಗ್ಲಿಷ್ ಮಾತಾಡುತ್ತ, ಕಂಪ್ಯೂಟರ್ ನಿರ್ವಹಿಸುತ್ತ ಆತ್ಮವಿಶ್ವಾಸದಿಂದ ವೃತ್ತಿ ರಂಗಕ್ಕೆ ಧುಮುಕುತ್ತಿದ್ದಾರೆ. ಒಳ್ಳೆ ಸಂಬಳ ಎಣಿಸುತ್ತ ಕುಟುಂಬದ ಬಡತನವನ್ನು ದೂರ ಮಾಡುತ್ತಿದ್ದಾರೆ! ಅಷ್ಟಕ್ಕೂ, ಈ ಪವಾಡ ಇಲ್ಲಿ ಪ್ರತಿ ಮೂರು ತಿಂಗಳಿಗೊಮ್ಮೆ ಸಾಕಾರಗೊಳ್ಳುತ್ತದೆ/ಗೊಳ್ಳುತ್ತಿದೆ!! ಬಡತನ, ನಿರುದ್ಯೋಗದ ಅತಿ ಹಳೇ ಕಾಯಿಲೆಗೆ ಹೀಗೆ ಹೊಸ ಮತ್ತು ಪರಿಣಾಮಕಾರಿ ಮದ್ದು ಕಂಡುಹಿಡಿದ ವ್ಯಕ್ತಿ, ಕಾಪೋರೇಟ್ ಲೋಕದಲ್ಲಿ 15 ದೇಶಗಳ 430 ತಂಡಗಳಿಗೆ ಮುಖ್ಯಸ್ಥರಾಗಿದ್ದು, ಪ್ರತಿಷ್ಠಿತ ಗೂಗಲ್ ಸಂಸ್ಥೆಯಲ್ಲಿ ಆಯಕಟ್ಟಿನ ಹುದ್ದೆಯಲ್ಲಿ ಕಾರ್ಯನಿರ್ವಹಿಸಿ 35ನೇ ವಯಸ್ಸಿಗೇ ಸಾಧನೆಯ ಎತ್ತರಕ್ಕೆ ತಲುಪಿದವರು. ಹೆಸರು ಅತುಲ್ ಸತಿಜಾ. ಅವರ ಕನಸಿನ ಶಕ್ತಿಯೇ ಇವತ್ತು ಅಸಾಧಾರಣವಾದ ಬದಲಾವಣೆಗೆ ಮುನ್ನುಡಿ ಬರೆದಿದೆ. ಈ ಕೆಲಸ ಕಾಪೋರೇಟ್ ಲೋಕಕ್ಕೆ ಎಷ್ಟು ಇಷ್ಟವಾಗಿದೆಯೆಂದರೆ 150ಕ್ಕೂ ಹೆಚ್ಚು ದೊಡ್ಡ-ಮಧ್ಯಮ ಕಂಪನಿಗಳು ಸಿಎಸ್​ಆರ್ ಅಡಿಯಲ್ಲಿ ನೆರವಿನ ಹಸ್ತ ಚಾಚಿವೆ. ನಂದನ್ ನಿಲೇಕಣಿ ಅವರಂತೂ ‘ಬ್ರಿಲಿಯಂಟ್ ಐಡಿಯಾ’ ಅಂತ ಶ್ಲಾಘಿಸಿ, 100 ಕೋಟಿ ರೂ.ಗಳನ್ನು ಸಿಎಸ್​ಆರ್ ಅಡಿ ಒದಗಿಸಿದ್ದಾರೆ.

ಈ ಪಯಣ ಶುರುವಾದ ಪರಿಯೂ ಪ್ರೇರಣಾದಾಯಕ. ಅತುಲ್ ಮೂಲತಃ ಹರಿಯಾಣದ ಚಂಡೀಗಢದವರು. ಮಧ್ಯಮ ವರ್ಗದ ಕುಟುಂಬ. ಆದರೂ, ಇವರ ತಂದೆ ಕಷ್ಟದಲ್ಲಿರುವ ಸಂಬಂಧಿಕರಿಗೆ ಯಾವಾಗಲೂ ಸಹಾಯ ಮಾಡುತ್ತಿದ್ದರಂತೆ. ಇದನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದ ಅತುಲ್ ಮುಂದೆ ತಾನು ದೊಡ್ಡವನಾಗಿ, ಗಳಿಸಲು ಆರಂಭಿಸಿದ ಮೇಲೆ ಅಪ್ಪನ ಹಾಗೆ ಇತರರಿಗೆ ಸಹಾಯ ಮಾಡಬೇಕು ಅಂತ ಅಂದುಕೊಂಡರಂತೆ. ಬಿ.ಟೆಕ್, ಎಂಬಿಎ ಪೂರ್ಣಗೊಳಿಸಿ 1998ರಲ್ಲಿ ಇನ್ಪೋಸಿಸ್ ಉದ್ಯೋಗಿಯಾಗಿ ಸೇರಿಕೊಂಡರು. ಮುಂದೆ, ಗೂಗಲ್, ಇನ್​ವೊಬಿಯಂಥ ಪ್ರತಿಷ್ಠಿತ ಸಂಸ್ಥೆಗಳ ಉನ್ನತ ಹುದ್ದೆಯೇರಿ, ಯಶಸ್ಸು ತಮ್ಮದಾಗಿಸಿಕೊಂಡರು. 40ನೇ ವಯಸ್ಸಿನೊಳಗೆಯೇ ಸಾಮಾಜಿಕ ಕೆಲಸ ಆರಂಭಿಸಬೇಕು ಎಂದು ಸಂಕಲ್ಪಿಸಿದಾಗ, ಏನು ಮಾಡೋದು ಎಂಬ ಪ್ರಶ್ನೆಯಿತ್ತು. ಅದಕ್ಕಾಗಿ, ದೆಹಲಿಯಲ್ಲಿ ‘ಎಂಡ್​ಪವರ್ಟಿ’ ಎಂಬ ಸ್ವಯಂಸೇವಾ ಸಂಸ್ಥೆಗೆ ವಾಲೆಂಟರ್ ಆಗಿ ಸೇರಿಕೊಂಡರು. ವಾರಾಂತ್ಯಗಳಲ್ಲಿ ದೆಹಲಿಯ ಕೊಳೆಗೇರಿ ಪ್ರದೇಶಗಳಿಗೆ ಹೋಗಿ ಅಲ್ಲಿನ ಆರೋಗ್ಯ ವ್ಯವಸ್ಥೆ ಸುಧಾರಿಸಲು ಯತ್ನಿಸುವುದು, ಉಚಿತ ಆರೋಗ್ಯ ಶಿಬಿರಗಳನ್ನು ಏರ್ಪಡಿಸುವುದು, ಮಕ್ಕಳಿಗೆ ಜೀವನಕೌಶಲ ಹೇಳಿಕೊಡುವುದು… ಹೀಗೆ ಹಲವು ಚಟುವಟಿಕೆ ಕೈಗೊಂಡರು. ಸಮಾಜದ ಸಮಸ್ಯೆಗಳು ಮತ್ತು ಅದಕ್ಕೆ ಸ್ಪಂದಿಸುವ ಪರಿ ಸ್ಪಷ್ಟವಾಗುತ್ತಿದ್ದಂತೆ ಅತುಲ್​ರಲ್ಲಿ ಆತ್ಮವಿಶ್ವಾಸ ಬೆಳೆಯಿತು. ಮುಂದೆ, ಎಂಡ್​ಪವರ್ಟಿ ಸಂಸ್ಥೆಯ ನಿರ್ದೇಶಕರಾಗಿ, ಬಳಿಕ ಅಧ್ಯಕ್ಷರಾಗಿ 2-3 ವರ್ಷ ಕಾರ್ಯನಿರ್ವಹಿಸಿದ ಬಳಿಕ ಗಟ್ಟಿ ಅನುಭವದ ಆಧಾರ ದೊರಕಿತ್ತು.

ಬೆಂಗಳೂರಿನ ಆಡುಗೋಡಿ, ಲಗ್ಗೆರೆ, ಎಚ್​ಎಸ್​ಆರ್ ಲೇಔಟ್, ಲಿಂಗರಾಜಪುರ ಮುಂತಾದ ಕೊಳೆಗೇರಿಗಳಲ್ಲಿ ಖುದ್ದು ಓಡಾಡಿ, ಅಲ್ಲಿನ ಬದುಕನ್ನು ಅರ್ಥೈಸಿಕೊಂಡಾಗ ಬಹಳಷ್ಟು ಯುವಕರು ಕೆಲಸ ಇಲ್ಲದೆ ಕಾಲಹರಣ ಮಾಡುತ್ತಿರುವುದು ಇಲ್ಲವೆ ದುಶ್ಚಟದಲ್ಲಿ ತೊಡಗಿಕೊಂಡದ್ದು ಮನದಟ್ಟಾಯಿತು. ಇದಕ್ಕೆ ಪರಿಹಾರ ನೀಡಲು ಮತ್ತು ಪೂರ್ಣ ಸಮಯ ಕೊಡಲು ಸಂಕಲ್ಪಿಸಿ 2015ರ ಜನವರಿಯಲ್ಲಿ ಉದ್ಯೋಗಕ್ಕೆ ರಾಜೀನಾಮೆ ನೀಡಿ (38ನೇ ವರ್ಷದಲ್ಲಿ) ಅದೇ ವರ್ಷದ ನವೆಂಬರ್​ನಲ್ಲಿ ‘ದ ನಡ್ಜ್’ (ಡಿಡಿಡಿ.ಠಿಜಛ್ಞಿ್ಠಜಛಿ.ಟ್ಟಜ/) ಫೌಂಡೇಷನ್ ಸ್ಥಾಪಿಸಿದರು. ಯುವಕರಿಗೆ ಜೀವನ ಮತ್ತು ಉದ್ಯೋಗ ಕೌಶಲ ಎರಡನ್ನೂ ಒದಗಿಸುವ ಉದ್ದೇಶದಿಂದ ‘ಗುರುಕುಲ’ ಸ್ಥಾಪಿಸಿದ್ದು, ಬಡತನ ನಿವಾರಣೆಯ, ಉದ್ಯೋಗಸೃಷ್ಟಿಯ ಯಶಸ್ವಿ ಪ್ರಯೋಗಶಾಲೆಯಾಗಿ ಬದಲಾಗಿದೆ. ಮೂರು ತಿಂಗಳ ಉಚಿತ ವಸತಿ, ಊಟದೊಂದಿಗೆ ತರಬೇತಿ ನೀಡಿ, ಕೆಲಸ ಕೊಡಿಸಿ, ಆ ಬಳಿಕವೂ ವೃತ್ತಿಏಳ್ಗೆಗೆ ಸಹಕರಿಸುವ ಗುರುಕುಲ ಬಡಕುಟುಂಬಗಳ ಯುವಸಮೂಹಕ್ಕೆ ಸಂಜೀವಿನಿಯಾಗಿದೆ. ವಿದ್ಯೆ, ಕೌಶಲ ಇಲ್ಲದ ಯುವಕ/ಯುವತಿಯರಿಗೆ ಇಲ್ಲಿ ಪ್ರಧಾನ ಆದ್ಯತೆ! ಯಾರು ಇಲ್ಲಿ ಸೇರಬಹುದು ಎಂಬ ಪ್ರಶ್ನೆಯೇ? ಕನಿಷ್ಠ 8ನೇ ತರಗತಿ ಪಾಸಾದ, 18ರಿಂದ 26 ವರ್ಷದ ಯುವಕ-ಯುವತಿಯರಿಗೆ ಗುರುಕುಲದ ಬಾಗಿಲು ತೆರೆದಿದೆ. 10ನೇ ಕ್ಲಾಸ್ ಪಾಸ್/ಫೇಲಾದವರು, ಪಿಯುಸಿ ಪಾಸ್/ಫೇಲಾದವರು, ಡಿಗ್ರಿ ಪೂರ್ಣಗೊಳಿಸಿದವರು, ಅರ್ಧದಲ್ಲೇ ಬಿಟ್ಟ ಬಡ, ಗ್ರಾಮೀಣ ಕುಟುಂಬಗಳ ಯುವಕರು ಎರಡು ಜತೆ ಬಟ್ಟೆ ತೆಗೆದುಕೊಂಡು ಬೆಂಗಳೂರಿಗೆ ಬಂದರೆ ಸಾಕು, ಇಲ್ಲಿನ ಕಾಡುಗೋಡಿಯಲ್ಲಿ ಯುವಕ-ಯುವತಿಯರಿಗೆ ಪ್ರತ್ಯೇಕವಾದ ಗುರುಕುಲವಿದೆ. ಊಟ, ತಿಂಡಿ, ಇರಲು ಜಾಗ ಅಲ್ಲದೆ ದಿನಬಳಕೆಗೆ ಅಗತ್ಯವಾದ ಪೇಸ್ಟ್​ನಿಂದ ಹಿಡಿದು ಸಾಬೂನಿನವರೆಗೂ ಎಲ್ಲವನ್ನೂ ಸಂಸ್ಥೆಯೇ ನೀಡುತ್ತದೆ (ಸಂಪರ್ಕಕ್ಕಾಗಿ: 080-33705399). ರಾಜಧಾನಿ ದೆಹಲಿಯಲ್ಲೂ ಈ ಗುರುಕುಲ ಸ್ಥಾಪಿಸಲಾಗಿದೆ. 50ಕ್ಕೂ ಹೆಚ್ಚು ನುರಿತ ತರಬೇತುದಾರರು, ಏಳು ಜನ ಪ್ರಾಂಶುಪಾಲರು, ಐವರು ವಾರ್ಡನ್​ಗಳು ಸೇರಿದಂತೆ 200ಕ್ಕೂ ಹೆಚ್ಚು ಸಿಬ್ಬಂದಿ ಇದ್ದಾರೆ. ಈ ಪೈಕಿ ಹೆಚ್ಚಿನವರು ಮಾಹಿತಿ-ತಂತ್ರಜ್ಞಾನ, ಇಂಜಿನಿಯರಿಂಗ್ ವಿಭಾಗದಿಂದ ಬಂದವರು.

‘ಬರೀ ವೃತ್ತಿಕೌಶಲ ಕಲಿಸಿದರೆ ಸಾಲದು. ಅದರಿಂದ ಕೆಲಸ ಸಿಗಬಹುದು. ಆದರೆ, ಜೀವನ ನಿರ್ವಹಿಸುವುದನ್ನು ಕಲಿಸಿ ಕೊಡಬೇಕು. ಆಗ ಈ ಯುವಕರಲ್ಲಿ ನಿಜವಾದ ಬದಲಾವಣೆ ಕಂಡು, ಅವರು ಸ್ವಾವಲಂಬಿಯಾಗಿ ಬದುಕಲು ಸಾಧ್ಯ’ ಎನ್ನುವ ಅತುಲ್ ಈ ನಿಟ್ಟಿನಲ್ಲಿ ಜೀವನಕೌಶಲದ ಭಾಗವಾಗಿ ವ್ಯಕ್ತಿತ್ವ ವಿಕಸನ, ಕುಟುಂಬ ನಿರ್ವಹಣೆ, ಆರ್ಥಿಕ, ಆರೋಗ್ಯ ನಿರ್ವಹಣೆಯ ಕೌಶಲ, ಸಾಮಾಜಿಕವಾಗಿ ಅಭಿವೃದ್ಧಿಗೊಳ್ಳುವುದು, ಸಾಕ್ಷರತೆ ಮತ್ತು ಅರಿವಿನ ಪ್ರಮಾಣ ಹೆಚ್ಚಿಸಿಕೊಳ್ಳುವುದನ್ನು ಕಲಿಸುತ್ತಿದ್ದಾರೆ. ವೃತ್ತಿಕೌಶಲದ ಭಾಗವಾಗಿ, ಬರವಣಿಗೆ, ಓದು, ಡಿಜಿಟಲ್ ಸಾಕ್ಷರತೆ, ಇಂಗ್ಲಿಷ್ ಸಂಭಾಷಣೆ, ಸಂವಹನ ಸಾಮರ್ಥ್ಯದ ಜತೆಗೆ ಉದ್ಯೋಗಕ್ಕಾಗಿ ಬಿಪಿಒ ತರಬೇತಿ, ಎಲೆಕ್ಟ್ರಿಷಿಯನ್ ತರಬೇತಿ, ಪ್ಲಂಬಿಂಗ್, ರಿಟೇಲ್ ಮಳಿಗೆಗಳಲ್ಲಿ ಕಾರ್ಯನಿರ್ವಹಿಸುವ ವಿಧಾನ (ಮಾರ್ಕೆಟಿಂಗ್, ಷೋರೂಂ ನಿರ್ವಹಣೆ), ಡೆಲಿವರಿ ಬಾಯ್ಗಳಾಗಲು ಬೇಕಾಗುವ ಕೌಶಲ ಹೇಳಿಕೊಡಲಾಗುತ್ತದೆ. ಯುವತಿಯರಿಗೆ ಬ್ಯೂಟಿಷಿಯನ್ ತರಬೇತಿ ನೀಡಲಾಗುತ್ತಿದೆ. ಉದ್ಯೋಗ ಮಾರುಕಟ್ಟೆಯಲ್ಲಿರುವ ಅವಕಾಶಗಳು, ಬೇಡಿಕೆಗಳನ್ನು ಅಧ್ಯಯನ ಮಾಡಿಯೇ ಈ ಕೋರ್ಸ್​ಗಳನ್ನು ರೂಪಿಸಲಾಗಿದೆ ಮತ್ತು ಕಾಲಕಾಲಕ್ಕೆ ಸಣ್ಣ ಮಾರ್ಪಾಡುಗಳೊಂದಿಗೆ ಅದನ್ನು ಮತ್ತಷ್ಟು ಪರಿಣಾಮಕಾರಿಯಾಗಿಸಲಾಗುತ್ತದೆ. ವಿಶೇಷವೆಂದರೆ, ಇವುಗಳ ಪ್ರಾಕ್ಟಿಕಲ್ ತರಬೇತಿಗೆ ಸುಸಜ್ಜಿತ ಲ್ಯಾಬ್​ಗಳನ್ನು ಸ್ಥಾಪಿಸಲಾಗಿದ್ದು, ಥೇರಿಗಿಂತ ಪ್ರಾಯೋಗಿಕ ಕಲಿಕೆಗೆ ಹೆಚ್ಚಿನ ಒತ್ತು ನೀಡಲಾಗಿದೆ. ಬೆಳಗ್ಗೆ 9ರಿಂದ 7ರವರೆಗೆ ತರಗತಿಗಳನ್ನು ನಡೆಸಲಾಗುತ್ತದೆ. ರಿಸರ್ಚ್ ತಂಡ, ವಿಶ್ಲೇಷಣಾ ತಂಡ, ಪ್ರವೇಶಾತಿ ತಂಡ… ಹೀಗೆ ಹಲವು ವಿಭಾಗಗಳು ಕಾಪೋರೇಟ್ ಮಾದರಿಯಲ್ಲೇ ಕಾರ್ಯನಿರ್ವಹಿಸುತ್ತಿವೆ. ಮೊದಲ ಎರಡು ವಾರ ಜೀವನಕೌಶಲ, ಸಂಸ್ಕಾರಕ್ಕೆ ಒತ್ತು ಕೊಟ್ಟು ಬಳಿಕ ವೃತ್ತಿಕೌಶಲದ ತರಬೇತಿ ಆರಂಭಿಸಲಾಗುತ್ತೆ. ಮೂರು ತಿಂಗಳ ತರಬೇತಿ ಪೂರ್ಣಗೊಂಡ ಬಳಿಕ ‘ಕಾನ್ವೋಕೇಶನ್’ ಏರ್ಪಡಿಸಿ ಪ್ರಮಾಣಪತ್ರ ವಿತರಣೆ ಮಾಡಲಾಗುತ್ತದೆ. ಅಂದಹಾಗೆ, ಈ ಅಭ್ಯರ್ಥಿಗಳಿಗೆ ಅಂಕ, ರ‍್ಯಾಂಕಿಂಗ್ ನಿಗದಿಪಡಿಸದೆ ಅವರ ನಡವಳಿಕೆ ಮತ್ತು ಕಲಿಕೆ ಆಧಾರದ ಮೇಲೆ ‘ಕರ್ವ ಪಾಯಿಂಟ್ಸ್’ ನೀಡಲಾಗುತ್ತದೆ. ಅಲ್ಲದೆ, ಗುರುಕುಲಕ್ಕೆ ಸಹಕರಿಸುತ್ತಿರುವ ಪ್ರತಿಷ್ಠಿತ ಕಂಪನಿಗಳು ಈ ಅಭ್ಯರ್ಥಿಗಳ ಸಂದರ್ಶನ ನಡೆಸಿ, ಕೆಲಸ ನೀಡುತ್ತವೆ. ತರಬೇತಿ ಪಡೆದ ಎಲ್ಲ ಅಭ್ಯರ್ಥಿಗಳು ಉದ್ಯೋಗ ಪಡೆದುಕೊಳ್ಳುತ್ತಾರೆ. ‘ಲೈಫ್ ಗಾರ್ಡ್’ ಎಂಬ ಸಂಸ್ಥೆಯ ಸಹಾಯವಾಣಿ ತಂಡ ಅಭ್ಯರ್ಥಿಗಳು ತರಬೇತಿ ಪೂರ್ಣಗೊಳಿಸಿ ಹೋದ ಬಳಿಕವೂ ಅವರ ಕಷ್ಟಗಳಿಗೆ ಸ್ಪಂದಿಸುತ್ತದೆ. ಉದ್ಯೋಗ ಬದಲಾವಣೆಗೆ, ಹೆಚ್ಚಿನ ಸಂಬಳವಿದ್ದಲ್ಲಿ ಸೇರಿಕೊಳ್ಳುವಲ್ಲಿ ಸಹಾಯ ಮಾಡುತ್ತದೆ. ಹೊರ ಊರಿನ ಅಭ್ಯರ್ಥಿಗಳೇ ಹೆಚ್ಚಿರುವುದರಿಂದ ಯಾವುದೇ ಸಮಸ್ಯೆ ಬಂದರೂ ಅದನ್ನು ಬಗೆಹರಿಸಲಾಗುತ್ತದೆ.

‘‘ನಮ್ಮ ದೇಶದಲ್ಲಿ ಪ್ರತಿ ತಿಂಗಳು 10 ಲಕ್ಷ ಉದ್ಯೋಗಾಕಾಂಕ್ಷಿಗಳು ಹುಟ್ಟಿಕೊಳ್ಳುತ್ತಾರೆ. ಈ ಸಂಖ್ಯೆ 15 ವರ್ಷಗಳವರೆಗೆ ಮುಂದುವರಿಯಲಿದೆ. ಉದ್ಯೋಗಾವಕಾಶಗಳಿಗೆ ಕೊರತೆಯೇನಿಲ್ಲ. ಆದರೆ ಕೌಶಲವೇ ಇಲ್ಲದೆ ಕೆಲಸ ಸಿಗೋದು ಹೇಗೆ? ಈ ಕೊರತೆಯನ್ನು ನೀಗಿಸಲೆಂದೆ ಕಾರ್ಯನಿರ್ವಹಿಸುತ್ತಿದ್ದೇವೆ. ವರ್ಷಕ್ಕೆ ಮೂರು ಸಾವಿರಕ್ಕಿಂತ ಅಧಿಕ ಗ್ರಾಮೀಣಿಗರಿಗೆ ಕೆಲಸ-ಜೀವನದರ್ಶನ ಒದಗಿಸುತ್ತಿದ್ದೇವೆ’ ಎನ್ನುವ ಅತುಲ್, ಬಡತನ ಹೆಚ್ಚಾಗಿರುವ ಜಾಖಂಡ್​ನಲ್ಲಿ ಗುರುಕುಲ ಸ್ಥಾಪನೆಗೆ ನಿರ್ಧರಿಸಿದ್ದಾರೆ. ಹಳ್ಳಿ ಯುವಕರ ಮೊಗದಲ್ಲಿನ ಆತ್ಮವಿಶ್ವಾಸ, ನಗು, ಜೀವನ ಎದುರಿಸುವ ಛಲವನ್ನು ಕಂಡಾಗ ಬಡತನವನ್ನು ಸೋಲಿಸುವ ಇಂಥ ಮಾದರಿಗಳ ವೈಶಿಷ್ಟ್ಯ ಮನದಟ್ಟಾಗುತ್ತದೆ. ಅತುಲ್ ಮತ್ತು ಅವರ ತಂಡ ಹೊಸದೊಂದು ಪ್ರಯೋಗವನ್ನು ವಿಶಿಷ್ಟವಾಗಿ ಮಾಡಿದ್ದು, ಬಡತನದ ಬವಣೆ ಸೋಲಲಿ, ದುಡಿಯುವ ಕೈಗಳು ಬಲವಾಗಲಿ ಎಂದು ಆಶಿಸೋಣ.

(ಲೇಖಕರು ‘ವಿಜಯವಾಣಿ’ ಸಹಾಯಕ ಸುದ್ದಿ ಸಂಪಾದಕರು)

One Reply to “ಬಡತನದ ವಿರುದ್ಧ ನಡೆದಿದೆ ಹೈ ಜೋಶ್​ನ ಹೋರಾಟ!”

  1. ಬಡತನ ಇಂದು ನಮ್ಮ ದಡ್ಡತನ ಎನ್ನುವುದಲ್ಲಿ ಎರಡು ಮಾತಿಲ್ಲ,
    ಮಾನಸಿದರೆ ಮಾರ್ಗ ಎನ್ನುವುದನ್ನು ಅತುಲ್ ತೋರಿಸಿಕೊಟ್ಟಿದ್ದಾರೆ.

Comments are closed.