ಬೀದಿನಾಯಿಗಳ ಸ್ಥಳಾಂತರ ಮಾಂಸಕ್ಕಾಗಿ ಸಾಗಾಟ ವದಂತಿ

ಭಟ್ಕಳ: ಇತ್ತೀಚಿಗೆ ಮುಂಡಳ್ಳಿಯಲ್ಲಿ ನಡೆದ ನಾಯಿ ದಾಳಿ ಪ್ರಕರಣ ವಿಭಿನ್ನ ರೂಪ ಪಡೆದುಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಮಾಂಸ ಮಾಡಲು ನಾಯಿಗಳನ್ನು ಸಾಗಿಸುತ್ತಿದ್ದ ಮಿನಿ ಟೆಂಪೋ ಒಂದನ್ನು ಜನರು ಹಿಡಿದು ಆರೋಪಿ ಸಹಿತ ಪೋಲಿಸರ ವಶಕ್ಕೆ ನೀಡಿದ್ದಾರೆ ಎಂಬ ಮಾಹಿತಿ ಚಿತ್ರ ಸಹಿತ ಭಿತ್ತರವಾಗುತ್ತಿದೆ. ಇದರೊಂದಿಗೆ ನಾಯಿಗಳನ್ನು ಸಾಗಿಸುತ್ತಿರುವ ವಿಡಿಯೋ ಕ್ಲಿಪ್ಪಿಂಗ್ ಕೂಡ ಅಟ್ಯಾಚ್ ಮಾಡಲಾಗಿದೆ. ಕೆಲವರು ಇದನ್ನು ಸತ್ಯವೆಂದು ನಂಬಿದ್ದು, ಸ್ಥಳೀಯ ಮಾಂಸದ ಹೋಟೆಲ್‌ಗಳಲ್ಲಿ ಊಟ ಮಾಡಲು ಅನುಮಾನ ಪಡುವಂತಾಗಿದೆ.

ನಿಜವಾಗಿ ನಡೆದದ್ದು ಏನು?: ಕೆಲದಿನಗಳ ಹಿಂದೆ ಮುಂಡಳ್ಳಿಯಲ್ಲಿ ಹುಚ್ಚುನಾಯಿಯೊಂದು ದಾಳಿ ನಡೆಸಿ ವೃದ್ಧೆಯೊಬ್ಬರು ಮೃತಪಟ್ಟಿದ್ದರು. ಇನ್ನೂ ಮೂವರನ್ನು ನಾಯಿಗಳು ಕಚ್ಚಿ ಗಾಯಗೊಳಿದ್ದವು. ಇದರಿಂದ ಆಕ್ರೋಶಗೊಂಡ ಸ್ಥಳೀಯರು ಪಂಚಾಯಿತಿಗೆ ದೂರು ನೀಡಿ ಬೀದಿ ನಾಯಿಗಳನ್ನು ಹಿಡಿದು ಬೇರೆಡೆ ಸಾಗಿಸುವಂತೆ ಒತ್ತಾಯಿಸಿದ್ದರು. ಅದರಂತೆ ತಮಿಳುನಾಡಿನ ನಾಯಿ ಹಿಡಿಯುವ ತಂಡವನ್ನು ಕರೆಸಲಾಗಿತ್ತು. ಅವರು ಕಾರ್ಯಾಚರಣೆ ನಡೆಸಿ 22 ನಾಯಿಗಳನ್ನು ಹಿಡಿದಿದ್ದರು. ಅದನ್ನು ಮುಟ್ಟಳ್ಳಿ ಪಂಚಾಯಿತಿ ವ್ಯಾಪ್ತಿಯ ಸಾಗರ ರೋಡ್‌ನಲ್ಲ್ಲಿ ಬಿಡುವಾಗ ಸ್ಥಳೀಯರೊಬ್ಬರು ನೋಡಿ ಹುಚ್ಚು ನಾಯಿಯನ್ನು ಇಲ್ಲಿ ಬಿಡುತ್ತಿದ್ದಾರೆ ಎಂದು ಜನರನ್ನು ಸೇರಿಸಿದ್ದರು. ಸ್ಥಳೀಯರು ನಾಯಿಯನ್ನು ಅಲ್ಲಿ ಬಿಡದಂತೆ ತಡೆಯೊಡ್ಡಿದರು. ಬಳಿಕ ಪೊಲೀಸರು ಆಗಮಿಸಿ ಜನರನ್ನು ನಿಯಂತ್ರಿಸಿ ಪಶುವೈದ್ಯರೊಡನೆ ಸಮಾಲೋಚಿಸಿ ತಾಲೂಕಿನ ಗಡಿಭಾಗಕ್ಕೆ ನಾಯಿಗಳನ್ನು ಒಯ್ದು ಬಿಟ್ಟಿದ್ದರು.

ಸಾಮಾಜಿಕ ಜಾಲತಾಣಗಳಲ್ಲಿ ಬರುವ ಸಂದೇಶಗಳ ಸತ್ಯಾಸತ್ಯತೆಯನ್ನು ಸಾರ್ವಜನಿಕರು ಪರೀಶೀಲಿಸಬೇಕು. ಸಾಮಾಜಿಕ ಸ್ವಾಸ್ಥೃ ಕದಡುವವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *