ಸ್ಟ್ರಾಂಗ್ ರೂಂನಲ್ಲಿ ಅಭ್ಯರ್ಥಿಗಳ ಭವಿಷ್ಯ ಭದ್ರ

ಮತಯಂತ್ರವಿರುವ ಸರ್ಕಾರಿ ಮಹಾವಿದ್ಯಾಲಯದ ಸುತ್ತ ಬಿಗಿ ಬಂದೋಬಸ್ತ್

ಮಂಡ್ಯ: ದೇಶದಲ್ಲಿಯೇ ಹೈವೊಲ್ಟೇಜ್ ಕ್ಷೇತ್ರ ಎನಿಸಿರುವ ಮಂಡ್ಯ ಲೋಕಸಭಾ ಕ್ಷೇತ್ರದ ಚುನಾವಣೆ ಮುಗಿದಿದ್ದು, ಅಭ್ಯರ್ಥಿಗಳ ಭವಿಷ್ಯವಿರುವ ಮತಯಂತ್ರಗಳು ಸ್ಟ್ರಾಂಗ್‌ನಲ್ಲಿ ಭದ್ರವಾಗಿವೆ.

ಮತಯಂತ್ರಗಳನ್ನು ಇಡಲಾಗಿರುವ ನಗರದ ಸರ್ಕಾರಿ ಮಹಾವಿದ್ಯಾಲಯ(ಸ್ವಾಯತ್ತ)ದ ಆವರಣದಲ್ಲಿ ಸ್ಥಾಪಿಸಲಾಗಿರುವ ಸ್ಟ್ರಾಂಗ್ ರೂಂಗೆ ಬಿಗಿ ಬಂದೋಬಸ್ತ್ ಹಾಕಲಾಗಿದೆ. ಕಾಲೇಜು ಆವರಣದೊಳಗೆ ಸಾರ್ವಜನಿಕರ ಪ್ರವೇಶವನ್ನು ಸಂಪೂರ್ಣ ನಿಷೇಧಿಸಲಾಗಿದ್ದು, ಇಡೀ ಕಾಲೇಜು ಆವರಣ ಗಡಿ ಭದ್ರತಾ ಪಡೆ ಹಾಗೂ ಪೊಲೀಸರ ಸುಪರ್ದಿಗೆ ಒಳಪಟ್ಟಿದೆ.

ಗುರುವಾರ ಮತದಾನದ ಬಳಿಕ ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಸೇರಿದ ಎಂಟು ವಿಧಾನಸಭಾ ಕ್ಷೇತ್ರಗಳಿಂದ ಬಂದ ಮತಯಂತ್ರಗಳನ್ನು ಡಿ-ಮಸ್ಟರಿಂಗ್ ಮಾಡಿ ಕೊಠಡಿಗೆ ಸೇರಿಸಲಾಯಿತು. ಮತಯಂತ್ರ ಹಾಗೂ ವಿವಿಪ್ಯಾಟ್ ಮೆಷಿನ್‌ಗಳ ಲೆಕ್ಕ ಪಡೆದು, ಭದ್ರತಾ ಕೊಠಡಿಯೊಳಗೆ ಸೇರಿಸುವಷ್ಟರಲ್ಲಿ ತಡರಾತ್ರಿಯಾಗಿತ್ತು. ಸಂಪೂರ್ಣ ಪ್ರಕ್ರಿಯೆ ಮುಗಿದ ಬಳಿಕ ಕೊಠಡಿಗಳಿಗೆ ಬೀಗ ಹಾಕಿ ಸೀಲ್ ಮಾಡಿ ವಿಶೇಷ ಭದ್ರತಾ ವ್ಯವಸ್ಥೆ ಕಲ್ಪಿಲಾಯಿತು.

ಗಡಿಭದ್ರತಾ ಪಡೆಯ ಒಂದು ಕಂಪನಿ ಭದ್ರತಾ ಕೊಠಡಿಯ ಮೇಲುಸ್ತುವಾರಿ ವಹಿಸಿಕೊಂಡಿವೆ. ಸುಮಾರು 64 ಸಿಬ್ಬಂದಿ ಮೂರು ಶಿಫ್ಟ್‌ನಲ್ಲಿ ಭದ್ರತಾ ಕೊಠಡಿಯ ಕಾವಲು ಕಾಯಲಿದ್ದಾರೆ. ಇನ್ನು ಭದ್ರತೆಯ ದೃಷ್ಟಿಯಿಂದ ಕಿಟಕಿಗಳನ್ನು ಮುಚ್ಚಲಾಗಿದೆ.
ಹದ್ದಿನ ಕಣ್ಣು: ಸರ್ಕಾರಿ ಮಹಾವಿದ್ಯಾಲಯ(ಸ್ವಾಯತ್ತ)ದ ಕೊಠಡಿಯೊಳಗೆ ಸಿಸಿ ಕ್ಯಾಮರಾ ಅಳವಡಿಸಲಾಗಿದ್ದು, ಭದ್ರತೆಯ ಮೇಲೆ ಹದ್ದಿನ ಕಣ್ಣಿಡಲಾಗಿದೆ. ಕಟ್ಟಡದ ಹೊರಭಾಗ, ಒಳಭಾಗ, ಸ್ಟ್ರಾಂಗ್ ರೂಂ ಮುಂಭಾಗದಲ್ಲೆಲ್ಲಾ ಸಿಸಿ ಕ್ಯಾಮರಾ ಅಳವಡಿಸಲಾಗಿದ್ದು, ಯಾವುದೇ ರೀತಿಯ ಭದ್ರತಾ ಲೋಪ ಎದುರಾಗದಂತೆ ಮುಂಜಾಗ್ರತೆ ವಹಿಸಲಾಗಿದೆ. ಗಡಿ ಭದ್ರತಾ ಪಡೆಯವರೊಂದಿಗೆ ರಾಜ್ಯ ಸಶಸ ಪೊಲೀಸ್‌ನ 3 ತುಕಡಿ, ಜಿಲ್ಲಾ ಸಶಸ ಮೀಸಲು ಪಡೆ ಹಾಗೂ 150 ಸ್ಥಳೀಯ ಪೊಲೀಸರು ಕರ್ತವ್ಯ ನಿರ್ವಹಿಸಲಿದ್ದಾರೆ. ಇನ್ನು ಇವರ ಮೇಲುಸ್ತುವಾರಿಗಾಗಿ ನಾಲ್ಕು ಉಪ ಅಧೀಕ್ಷಕರು, 6 ಇನ್ಸ್‌ಪೆಕ್ಟರ್, 8 ಸಬ್ ಇನ್ಸ್‌ಪೆಕ್ಟರ್ ಅವರನ್ನು ನಿಯೋಜಿಸಲಾಗಿದೆ. ಪ್ರತಿ ಹಂತದಲ್ಲಿಯೂ ಮತ್ತು ಪ್ರತಿ ಇಂತಿಷ್ಟು ಸಮಯದಲ್ಲಿ ಎಸ್ಪಿ, ಎಎಸ್ಪಿ ಮಾಹಿತಿ ಪಡೆದುಕೊಳ್ಳಲಿದ್ದಾರೆ.
ನಿಷೇಧಾಜ್ಞೆ ಜಾರಿ: ಭದ್ರತೆ ದೃಷ್ಟಿಯಿಂದ ಮಹಾವಿದ್ಯಾಲಯದ ಸುತ್ತಲಿನ 100 ಮೀ. ಪ್ರದೇಶದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದ್ದು, ಪ್ರವೇಶ ದ್ವಾರದಲ್ಲಿ ಬ್ಯಾರಿಕೇಡ್ ಅಳವಡಿಸಲಾಗಿದೆ. ಸ್ಥಳೀಯ ಪೊಲೀಸರು ಕಾಲೇಜಿನ ಪ್ರವೇಶ ದ್ವಾರಗಳಲ್ಲಿ ಗಸ್ತು ತಿರುಗುತ್ತಾ ಭದ್ರತೆಯ ಮೇಲೆ ಕಟ್ಟೆಚ್ಚರ ವಹಿಸಿದ್ದಾರೆ.

ಇನ್ನು ಮತಯಂತ್ರಗಳ ಸುರಕ್ಷತೆ ದೃಷ್ಟಿಯಿಂದ ಮತಯಂತ್ರಗಳನ್ನು ಇಡಲಾಗಿರುವ ಕೊಠಡಿಗಳಿಗೆ ಕಲ್ಪಿಸಿದ್ದ ವಿದ್ಯುತ್ ವ್ಯವಸ್ಥೆ ಕಡಿತಗೊಳಿಸಲಾಗಿದೆ. ನೀರಿನ ಸಂಪರ್ಕ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ವಿದ್ಯುತ್ ಶಾರ್ಟ್‌ಸರ್ಕ್ಯೂಟ್ ಅಥವಾ ನೀರಿನ ಅವಘಡಗಳಿಂದ ಮತಯಂತ್ರಗಳಿಗೆ ಸಂಭವಿಸಬಹುದಾದ ಹಾನಿಯನ್ನು ತಪ್ಪಿಸುವ ಸಲುವಾಗಿ ಮುಂಜಾಗ್ರತೆಯಾಗಿ ಈ ಕ್ರಮ ವಹಿಸಲಾಗಿದೆ.