ಮೃತರ ಸಂಬಂಧಿಕರ ಪ್ರತಿಭಟನೆ

ಬಾಗಲಕೋಟೆ: ಮುಧೋಳ ಡಿಸ್ಟಿಲರಿ ಘಟಕದಲ್ಲಿ ಉಂಟಾದ ಸ್ಫೋಟ ಘಟನೆಯಲ್ಲಿ ಮೃತರ ಕುಟುಂಬ ಸದಸ್ಯರು ಹಾಗೂ ರೈತ ಮುಖಂಡರು ತಾಲೂಕು ಆಸ್ಪತ್ರೆ ಎದುರು ಭಾನುವಾರ ರಾತ್ರಿ ಪ್ರತಿಭಟನೆ ಆರಂಭಿಸಿದ್ದಾರೆ.

ಮುಧೋಳ ತಾಲೂಕು ಆಸ್ಪತ್ರೆಯ ಶವಾಗಾರದಲ್ಲಿರುವ ಮೃತರ ಪಾರ್ಥಿವ ಶರೀರ ತೆಗೆದುಕೊಳ್ಳದೆ ಪ್ರತಿಭಟನೆ ನಡೆಸಿದರು.

ಮೃತರ ಕುಟುಂಬಗಳಿಗೆ ಕಾರ್ಖಾನೆಯಿಂದ ಹೆಚ್ಚಿನ ಪರಿಹಾರ ನೀಡಬೇಕು. ದೊಡ್ಡ ದುರಂತ ಸಂಭವಿಸಿದರೂ ರಾಜ್ಯ ಸರ್ಕಾರದಿಂದ ಸ್ಪಂದನೆ ಸಿಕ್ಕಿಲ್ಲ. ಮುಖ್ಯಮಂತ್ರಿ ಪರಿಹಾರ ಘೊಷಣೆ ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮುಖ್ಯಮಂತ್ರಿಗಳು ಸ್ಥಳಕ್ಕೆ ಆಗಮಿಸಬೇಕು. ಮೃತ ಕುಟುಂಬಗಳಿಗೆ ಪರಿಹಾರ ಘೊಷಣೆ ಮಾಡಬೇಕು. ಇಲ್ಲವಾದಲ್ಲಿ ಶವ ಪಡೆಯುವುದಿಲ್ಲ ಎಂದು ಬಿಗಿಪಟ್ಟು ಹಿಡಿದು ಕುಳಿತಿದ್ದಾರೆ.

ಮಂಡ್ಯದಲ್ಲಿ ನಡೆದ ಬಸ್ ದುರಂತ ಹಾಗೂ ಮೈಸೂರು ಜಿಲ್ಲೆಯಲ್ಲಿ ವಿಷಾಹಾರ ಸೇವಿಸಿ ಮೃತ ಕುಟುಂಬದವರಿಗೆ ಸರ್ಕಾರ ತಕ್ಷಣ ಪರಿಹಾರ ಘೊಷಣೆ ಮಾಡಿದ್ದಲ್ಲದೆ, ಮುಖ್ಯಮಂತ್ರಿ ಸೇರಿ ಸಚಿವರು ಸ್ಥಳಕ್ಕೆ ಧಾವಿಸಿದ್ದರು. ಆದರೆ, ಮುಧೋಳದಲ್ಲಿ ದೊಡ್ಡ ಪ್ರಮಾಣದ ದುರಂತ ಸಂಭವಿಸಿದರೂ ಜಿಲ್ಲಾ ಉಸ್ತುವಾರಿ ಸಚಿವರು, ಸಿಎಂ ಸೇರಿ ಸರ್ಕಾರದ ಪ್ರತಿನಿಧಿಗಳೂ ಸ್ಥಳಕ್ಕೆ ಬಂದಿಲ್ಲ. ಉತ್ತರ ಕರ್ನಾಟಕದ ಜನರ ಸಾವಿಗೆ ಕಿಮ್ಮತ್ತಿಲ್ಲ ಎಂಬ ಸರ್ಕಾರದ ಧೋರಣೆ ತೋರಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ರಾತ್ರಿ ತಾಲೂಕು ಆಸ್ಪತ್ರೆಗೆ ಮುಧೋಳ ಶಾಸಕ ಗೋವಿಂದ ಕಾರಜೋಳ ಭೇಟಿ ನೀಡಿ, ಗಾಯಾಳುಗಳ ಆರೋಗ್ಯ ವಿಚಾರಿಸಿದರು. ಮೃತ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.

ಈ ವೇಳೆ ಮಾಧ್ಯಮಗಳ ಜತೆ ಮಾತನಾಡಿದ ಗೋವಿಂದ ಕಾರಜೋಳ, ಘಟನೆ ನಿಜಕ್ಕೂ ನೋವು ತಂದಿದೆ. ಘಟನೆ ನಡೆಯಬಾರದಿತ್ತು. ಮೃತ ಕುಟುಂಬಗಳಿಗೆ ರಾಜ್ಯ ಸರ್ಕಾರ ಪರಿಹಾರ ಘೊಷಣೆ ಮಾಡಬೇಕಿತ್ತು. ಇತ್ತೀಚೆಗೆ ನಡೆದ ಎರಡು ಘಟನೆಗಳಲ್ಲಿ ಪರಿಹಾರ ಘೊಷಣೆ ಮಾಡಿದ್ದ ಸರ್ಕಾರ, ಇಲ್ಲಿ ಮಾತ್ರ ಪರಿಹಾರ ಘೊಷಣೆ ಮಾಡಿಲ್ಲ. ಸರ್ಕಾರದ ಈ ಕ್ರಮ ವಿರೋಧಿಸಿ, ಸೋಮವಾರ ಅಧಿವೇಶನದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ, ಜಗದೀಶ ಶೆಟ್ಟರ ಸೇರಿ ಬಿಜೆಪಿ ಶಾಸಕರು ಪ್ರತಿಭಟನೆ ಮಾಡುತ್ತೇವೆ. ಸರ್ಕಾರ ಪರಿಹಾರ ಘೊಷಣೆ ಮಾಡುವವರೆಗೂ ಬಿಡುವುದಿಲ್ಲ ಎಂದು ಘೊಷಣೆ ಮಾಡಿದರು. ಬಳಿಕ ಪ್ರತಿಭಟನಾ ಸ್ಥಳಕ್ಕೆ ತೆರಳಿ, ಸರ್ಕಾರದಿಂದ ಪರಿಹಾರ ಕೊಡಿಸಲು ಅಧಿವೇಶನದಲ್ಲಿ ಗಮನ ಸೆಳೆದು, ಪ್ರತಿಭಟನೆ ನಡೆಸುತ್ತೇನೆ. ಕಾರ್ಖಾನೆ ಮಾಲೀಕರ ಮನೆಗೆ ತೆರಳಿ, ಹೆಚ್ಚಿನ ಪರಿಹಾರ ನೀಡುವಂತೆ ಕೋರುತ್ತೇನೆ. ಧರಣಿ ಕೈಬಿಟ್ಟು ಮೃತರ ಅಂತ್ಯಸಂಸ್ಕಾರ ನೆರವೇರಿಸಬೇಕೆಂದು ಮನವಿ ಮಾಡಿದರು.

ಸರ್ಕಾರ ಮತ್ತು ಕಾರ್ಖಾನೆಯಿಂದ ಖಚಿತ ಭರವಸೆ ಸಿಗುವವರೆಗೂ ಪ್ರತಿಭಟನೆ ಕೈಬಿಡಲ್ಲ ಎಂದು ಪ್ರತಿಭಟನಾಕಾರರು ಬಿಗಿಪಟ್ಟು ಹಿಡಿದಿದ್ದು, ಶವ ಪಡೆಯದೆ ತಡರಾತ್ರಿವರೆಗೂ ಧರಣಿ ಮುಂದು ವರಿಸಿದ್ದರು. ಶಾಸಕ ಗೋವಿಂದ ಕಾರಜೋಳ ಅವರು ಕಾರ್ಖಾನೆ ಮಾಲೀಕರ ಮನೆಗೆ ತೆರಳಿ, ಚರ್ಚೆ ನಡೆಸಿದ್ದಾರೆ.