ರೈತರ ಬಂದ್​ಗೆ ಮಿಶ್ರ ಪ್ರತಿಕ್ರಿಯೆ

ಮಹಾಲಿಂಗಪುರ: ಕಬ್ಬಿನ ಬಾಕಿ ಪಾವತಿ ಹಾಗೂ ಪ್ರಸಕ್ತ ಸಾಲಿನಲ್ಲಿ ಯೋಗ್ಯ ಬೆಲೆ ಘೋಷಣೆಗೆ ಆಗ್ರಹಿಸಿ ಕಬ್ಬು ಬೆಳೆಗಾರರು ಶನಿವಾರ ಕರೆ ನೀಡಿದ್ದ ಬಂದ್​ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು.

ಪಟ್ಟಣದ ರಾಣಿ ಚನ್ನಮ್ಮ ವೃತ್ತ ಹಾಗೂ ಬಸವೇಶ್ವರ ವೃತ್ತಗಳಲ್ಲಿ ರೈತರು ಮುಂಜಾನೆಯಿಂದ ಸಂಜೆವರೆಗೂ ವಾಹನ ಸಂಚಾರ ಸ್ಥಗಿತಗೊಳಿಸಿ ರಸ್ತೆ ಮಧ್ಯೆ ಕುಳಿತು ಪ್ರತಿಭಟನೆ ನಡೆಸಿದರು. ಪಟ್ಟಣದ ಪ್ರಮುಖ ರಸ್ತೆಗಳಲ್ಲಿನ ಅಂಗಡಿ ಮುಂಗಟ್ಟುಗಳು ವ್ಯಾಪಾರ ವಹಿವಾಟು ಸ್ಥಗಿತಗೊಳಿಸಿ ವ್ಯಾಪಾರಸ್ಥರು ಬೆಂಬಲ ನೀಡಿದರು.

ಬಸ್ ಸಂಚಾರ ಸ್ಥಗಿತಗೊಂಡಿದ್ದರಿಂದ ಪರಸ್ಥಳಗಳಿಗೆ ಪ್ರಯಾಣಿಸುವ ಹಾಗೂ ನಗರಕ್ಕೆ ಆಗಮಿಸುವ ಪ್ರಯಾಣಿಕರು ಪರದಾಡಿದರು. ಶಾಲಾ-ಕಾಲೇಜು, ಸರ್ಕಾರಿ ಕಚೇರಿಗಳು ಕಾರ್ಯನಿರ್ವಹಿಸಿದವು. ಪ್ರಮುಖ ಆಸ್ಪತ್ರೆಗಳಲ್ಲಿ ವೈದ್ಯರಿಲ್ಲದೆ ರೋಗಿಗಳು ಪರದಾಡಿದರು. ಸಂಜೆ 4ರ ನಂತರ ಖಾಸಗಿ ವಾಹನಗಳು ಹಾಗೂ ಅಂಗಡಿ-ಮುಂಗಟ್ಟುಗಳು ಪ್ರಾರಂಭಗೊಂಡವು. ಮುಂಜಾಗ್ರತೆ ಕ್ರಮವಾಗಿ ನಗರದ ಪ್ರಮುಖ ಸ್ಥಳಗಳಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು.

ಕಾರ್ಖಾನೆಗಳ ವಿರುದ್ಧ ಆಕ್ರೋಶ: 2017-18ನೇ ಸಾಲಿನಲ್ಲಿ ಸಕ್ಕರೆ ಕಾರ್ಖಾನೆಗಳ ಪ್ರಾರಂಭಕ್ಕೂ ಮುಂಚೆ 2900 ರೂ. ಹಾಗೂ 3100 ರೂ. ಮೊದಲ ಕಂತಿನ ಹಣ ಪಾವತಿಸುವುದಾಗಿ ವಾಗ್ದಾನ ಮಾಡಿದ್ದವು. ಅದರಂತೆ ನಡೆದುಕೊಳ್ಳದೆ ರೈತರಿಗೆ ದ್ರೋಹ ಬಗೆದಿವೆ ಎಂದು ಕಬ್ಬು ಬೆಳೆಗಾರರ ಸಂಘದ ಪ್ರಧಾನ ಕಾರ್ಯದರ್ಶಿ ರಂಗನಗೌಡ ಪಾಟೀಲ ಆರೋಪಿಸಿದರು.ಮಹಾಲಿಂಗಪುರ ಬಂದ್ ಹಿನ್ನೆಲೆ ಬಸವೇಶ್ವರ ವೃತ್ತದಲ್ಲಿ ಹಮ್ಮಿಕೊಂಡ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದರು. ಡಿಸೆಂಬರ್ 2017ರ ವರೆಗೆ ಪೂರೈಸಿದ ಕಬ್ಬಿಗೆ 2900 ರೂ., 2700 ರೂ. ಹಾಗೂ 2500 ರೂ. ಹೀಗೆ ಮನಬಂದಂತೆ ಬಿಲ್ ಪಾವತಿಸಿದ್ದು, 2018ರ ಜನವರಿಯಿಂದ ಪೂರೈಸಿದ ಕಬ್ಬಿಗೆ 2145 ರೂ.5 ರಿಂದ 6 ತಿಂಗಳಿಗೆ ಪಾವತಿಸಿ ರೈತರಿಗೆ ಅನ್ಯಾಯ ಮಾಡಿವೆ ಎಂದು ದೂರಿದರು. ರಾಜ್ಯ ರೈತಸಂಘ ಹಾಗೂ ಹಸಿರು ಸೇನೆ ರಾಜ್ಯ ಸಂಚಾಲಕ ಗಂಗಾಧರ ಮೇಟಿ, ರಾಜ್ಯ ನೇಕಾರ ಸೇವಾ ಸಂಘದ ರಾಜ್ಯಾಧ್ಯಕ್ಷ ಶಿವಲಿಂಗ ಟಿರಕಿ, ಅರ್ಜುನ ಬಂಡಿವಡ್ಡರ, ಬಂದೂಸಾಬ ಪಕಾಲಿ, ರಮೇಶ ಭಾವಿಕಟ್ಟಿ, ಲಕ್ಷ್ಮಣ ಹುಚರೆಡ್ಡಿ, ಭುಜಬಲಿ ಕೆಂಗಾಲಿ, ರಮೇಶ ಭಾವಿಕಟ್ಟಿ, ರಮೇಶ ಮಡಿವಾಳರ, ವಿಠ್ಠಲ ಸಂಶಿ, ಚನ್ನಪ್ಪ ಕೋಳಿಗುಡ್ಡ, ಮಹಾದೇವ ಮಾರಾಪುರ, ಸುರೇಶ ಹೊಸೂರ, ಶಿವು ಟಿರ್ಕಿ, ಬನಪ್ಪಗೌಡ ಪಾಟೀಲ, ಸತ್ಯಪ್ಪ ಹುದ್ದಾರ, ಈರಣ್ಣ ಕನಕರೆಡ್ಡಿ, ಶ್ರೀಕಾಂತ ಗೂಳನ್ನವರ, ಅಶೋಕ ದೇಸಾಯಿ, ಮಲ್ಲಿಕಾರ್ಜುನ ತೇಲಿ, ವಿಠಲ ಸಂಶಿ, ಸುರೇಶ ಮಡಿವಾಳ, ಅಸ್ಲಂ ಕೌಜಲಗಿ, ಮಲ್ಲಪ್ಪ ಗುರವ, ಮಹಾಲಿಂಗ ತಟ್ಟಿಮನಿ, ಧನಪಾಲ ಯಲ್ಲಟ್ಟಿ ಇದ್ದರು.