ಪೊಳಲಿ ಬ್ರಹ್ಮಕಲಶೋತ್ಸವ ಫ್ಲೆಕ್ಸ್ ತೆರವಿಗೆ ಆಕ್ರೋಶ

 ಬಂಟ್ವಾಳ: ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ನಡೆಯುವ ಬ್ರಹ್ಮಕಲಶೋತ್ಸವಕ್ಕೆ ಶುಭ ಕೋರಲು ಭಕ್ತರು ಹಾಕಿದ್ದ ಬ್ಯಾನರ್ ಹಾಗೂ ಫ್ಲೆಕ್ಸ್‌ಗಳನ್ನು ಸೋಮವಾರ ಪುರಸಭೆ ತೆರವುಗೊಳಿಸಿರುವುದು ಆಕ್ರೋಶಕ್ಕೆ ಕಾರಣವಾಯಿತು.

13ರಂದು ಬ್ರಹ್ಮಕಲಶೋತ್ಸವ ನಡೆಯಲಿರುವುದರಿಂದ ಎರಡು ದಿನಗಳವರೆಗೆ ತಾಳ್ಮೆ ವಹಿಸದೆ ನಿಯಮ ಕಟ್ಟುನಿಟ್ಟಿನ ಜಾರಿಗೆ ಮುಂದಾಗಿರುವ ಪುರಸಭೆ ಕಾರ್ಯವೈಖರಿಗೆ ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದು, ಪುರಸಭೆ ಸಿಬ್ಬಂದಿ ಮತ್ತು ಭಕ್ತರ ಮಧ್ಯೆ ಕೆಲ ಸಮಯ ಮಾತಿನ ಚಕಮಕಿಯೂ ನಡೆಯಿತು.

ರಾಜಕೀಯ ಪ್ರಚಾರದ ಉದ್ದೇಶದಿಂದ ನಾವು ಬ್ಯಾನರ್ ಅಳವಡಿಸಿಲ್ಲ, ಇಲ್ಲಿನ ಇತಿಹಾಸ ಪ್ರಸಿದ್ಧ ಹಾಗೂ ಭಕ್ತರ ಭಕ್ತಿಯ ನೆಲೆಯಾದ ಪೊಳಲಿ ಬ್ರಹ್ಮಕಲಶೋತ್ಸವ ಅಂಗವಾಗಿ ಬ್ಯಾನರ್ ಹಾಕಲಾಗಿದೆ. ಇದನ್ನು ತೆರವು ಮಾಡಬಾರದು ಎಂದು ಭಕ್ತ ಸಮುದಾಯ ಪುರಸಭೆ ಸಿಬ್ಬಂದಿಗೆ ತಿಳಿಸಿದರು.

ಬಂಟ್ವಾಳ ನಗರ ಠಾಣಾ ಎಸ್.ಐ.ಚಂದ್ರಶೇಖರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಜಿಲ್ಲಾಧಿಕಾರಿಗಳನ್ನು ಸಂಪರ್ಕಿಸಿದ ನಂತರ ತೆರವು ಕಾರ್ಯಕ್ಕೆ ಬ್ರೇಕ್ ಹಾಕಲಾಯಿತು. ಮಾತುಕತೆ ಸಂದರ್ಭ ವಿವಿಧ ಸಮುದಾಯಗಳ ಮುಖಂಡರು, ಪುರಸಭೆ ಸಿಬ್ಬಂದಿ ಇದ್ದರು.

ಬ್ಯಾನರ್ ತೆರವು ಕಟ್ಟುನಿಟ್ಟು: ಕರ್ನಾಟಕ ಓಪನ್ ಪ್ಲೇಸಸ್(ಪ್ರಿವೆನ್ಶನ್ ಆಫ್ ಡಿಸ್‌ಫಿಗರ್‌ಮೆಂಟ್) ಕಾಯ್ದೆ -1981ರ ಅನ್ವಯ ಯಾವುದೇ ತೆರೆದ ಜಾಗಗಳಲ್ಲಿ ಅನುಮತಿ ರಹಿತವಾಗಿ ಬ್ಯಾನರ್, ಹೋರ್ಡಿಂಗ್ ಹಾಕುವುದನ್ನು ನಿಷೇಧಿಸಿದೆ. ಇದು ಯಾವಾಗಲೂ ಅನ್ವಯ, ಆದರೆ ಅದನ್ನು ಜನಪ್ರತಿನಿಧಿಗಳು ಜಾರಿಗೊಳಿಸುವುದಿಲ್ಲ, ಆದರೆ ಚುನಾವಣೆ ವೇಳೆ ಚುನಾವಣಾಧಿಕಾರಿಗಳು ಕಟ್ಟುನಿಟ್ಟಾಗಿ ಜಾರಿಗೆ ತರುತ್ತಾರೆ. ಹಾಗಾಗಿ ಪ್ರತಿ ಚುನಾವಣೆ ವೇಳೆಯೂ ಬ್ಯಾನರ್ ಇತ್ಯಾದಿಗಳನ್ನು ತೆರವುಗೊಳಿಸಲಾಗುತ್ತದೆ.