ಶಿವಮೊಗ್ಗ: ವೀರಶೈವ ಧರ್ಮ ಉದಾತ್ತ ಮಾನವೀಯ ಮೌಲ್ಯಗಳನ್ನು ಪ್ರತಿಪಾದಿಸಿದ್ದು ಶ್ರೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ ಅಹಿಂಸಾದಿ ಧ್ಯಾನ ಪರ್ಯಂತ ದಶಧರ್ಮ ಸೂತ್ರಗಳು ಉಜ್ವಲ ಬದುಕಿನ ನಿರ್ಮಾಣಕ್ಕೆ ಅಡಿಪಾಯ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ನಗರ ಹೊರವಲಯದ ಹರಕೆರೆಯಲ್ಲಿ 1.5 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಜಗದ್ಗುರು ರಂಭಾಪುರೀಶ ನಿವಾಸದ ಉದ್ಘಾಟನಾ ಸಮಾರಂಭದ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು.
ಸಕಲ ಜೀವಾತ್ಮರಿಗೆ ಒಳಿತನ್ನು ಬಯಸುವುದೇ ನಿಜವಾದ ಧರ್ಮ. ವೀರಶೈವ ಧರ್ಮದ ಸಂಸ್ಕೃತಿ, ಪರಂಪರೆ ಮತ್ತು ಆದರ್ಶಗಳು ಬೆಳೆಯಬೇಕಿದೆ. ಸಮಾಜದಲ್ಲಿ ಧರ್ಮದ ಉಳಿವಿಗಾಗಿ ಸಂಘಟನೆಗಳು ನಡೆಯಬೇಕೇ ವಿನಃ ಸಂಘರ್ಷಗಳಿಗಲ್ಲ ಎಂದು ಪ್ರತಿಪಾದಿಸಿದರು.
ಅರಿವು ಮತ್ತು ಮರೆವು ಎರಡೂ ಮನುಷ್ಯನ ಸಹಜ ಗುಣಗಳು. ಅರಿವು ಜಾಗೃತಗೊಂಡಾಗ ಬದುಕು ವಿಕಾಸಗೊಳ್ಳುತ್ತದೆ. ಜೀವನದಲ್ಲಿ ಸುವರ್ಣ ಸಂಪಾದಿಸದಿದ್ದರೂ ಸದ್ಗುಣಗಳನ್ನು ಸಂಪಾದಿಸಿಕೊಳ್ಳಬೇಕು. ನಮ್ಮ ಸಾಮಾಜಿಕ ಸಂಪ್ರದಾಯಗಳು ಬದಲಾಗಬಹುದು. ಆದರೆ ನೈತಿಕ ನಿಬಂಧನೆಗಳು ಶಾಶ್ವತ ಎಂದರು.
ಶ್ರೀಪೀಠದ ಬಹುದಿನಗಳ ಕನಸು ಇಂದು ನನಸಾಗಿದೆ. ಭೂದಾನ ಮಾಡಿದ ಟಿ.ವಿ.ಈಶ್ವರಯ್ಯ ಮತ್ತು ಅವರ ಸಹೋದರರ ಸೇವೆ ಅಮೂಲ್ಯ. ಭವಿಷ್ಯದ ದಿನಗಳಲ್ಲಿ ಶೈಕ್ಷಣಿಕ ತಜ್ಞರೊಂದಿಗೆ ಚರ್ಚಿಸಿ ಆದರ್ಶ ವಿದ್ಯಾಲಯ ಹುಟ್ಟುಹಾಕುವ ಉದ್ದೇಶ ನಮಗಿದೆ ಎಂದರು.
ಮಾಜಿ ಶಾಸಕ ಎಚ್.ಎಂ.ಚಂದ್ರಶೇಖರಪ್ಪ ಮಾತನಾಡಿ, ಧರ್ಮ ಮತ್ತು ದೇಶ ಮನುಷ್ಯನ ಎರಡು ಕಣ್ಣು. ಪ್ರತಿಯೊಬ್ಬರಲ್ಲೂ ರಾಷ್ಟ್ರಾಭಿಮಾನ ಹಾಗೂ ಧರ್ಮಾಭಿಮಾನ ಬೆಳೆಯಬೇಕು ಎಂದು ಹೇಳಿದರು.
ಎಡೆಯೂರು ಕ್ಷೇತ್ರದ ಶ್ರೀ ರೇಣುಕ ಸ್ವಾಮೀಜಿ, ಮುಕ್ತಿಮಂದಿರ ಕ್ಷೇತ್ರದ ವಿಮಲ ರೇಣುಕ ವೀರಮುಕ್ತಿಮುನಿ ಶ್ರೀ, ಮಳಲಿ ಮಠದ ಡಾ. ನಾಗಭೂಷಣ ಶ್ರೀ, ಬಿಳಕಿ ರಾಚೋಟೇಶ್ವರ ಶ್ರೀ, ಕಡೇನಂದಿಹಳ್ಳಿ ರೇವಣಸಿದ್ಧೇಶ್ವರ ಶ್ರೀ, ಹಣ್ಣೆಮಠದ ಮರುಳಸಿದ್ಧ ಪಂಡಿತಾರಾಧ್ಯ ಶ್ರೀ, ಬೀರೂರಿನ ರುದ್ರಮುನಿ ಶ್ರೀ, ತಾವರೆಕೆರೆ ಡಾ. ಅಭಿನವ ಸಿದ್ದಲಿಂಗ ಶ್ರೀ, ಚನ್ನಗಿರಿ ಕೇದಾರ ಶಿವಶಾಂತವೀರ ಶ್ರೀ, ನಂದಿಪುರದ ನಂದೀಶ್ವರ ಶ್ರೀ, ಕೊಣಂದೂರು ಪಸುಪತಿ ಪಂಡಿತಾರಾಧ್ಯ ಶ್ರೀ, ಸಂಗೊಳ್ಳಿ ಗುರುಲಿಂಗ ಶ್ರೀಗಳು, ರಟ್ಟಿಹಳ್ಳಿ ಶ್ರೀ ವಿಶ್ವೇಶ್ವರ ದೇವರು ಉಪಸ್ಥಿತರಿದ್ದರು.
ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಅವರು ಶ್ರೀಗಳ ಆಶೀರ್ವಾದ ಪಡೆದರು. ವಿರೂಪಾಕ್ಷಯ್ಯ ಶಾಸ್ತ್ರಿ ಸಂಗಡಿಗರಿಂದ ಶ್ರೀ ಜಗದ್ಗುರು ರಂಭಾಪುರೀಶ ನಿವಾಸದಲ್ಲಿ ವಾಸ್ತು ಶಾಂತಿ-ರುದ್ರಹೋಮ ಜರುಗಿತು. ಸಮಾರಂಭದ ನಂತರ ಅನ್ನದಾಸೋಹ ನಡೆಯಿತು. ಮಾಜಿ ಎಂಎಲ್‌ಸಿ ಆಯನೂರು ಮಂಜುನಾಥ್, ಪ್ರಮುಖರಾದ ಎಸ್.ಎಸ್.ಜ್ಯೋತಿಪ್ರಕಾಶ್, ರುದ್ರಮುನಿ ಎಸ್. ಸಜ್ಜನ್, ಎನ್.ಜೆ.ರಾಜಶೇಖರ, ಶಾಂತಾ ಆನಂದ, ಸಿ.ಮಹೇಶಮೂರ್ತಿ, ಕೆ.ನಾಗರಾಜ್, ಪಾರ್ವತಮ್ಮ ಪಂಚಾಕ್ಷರಯ್ಯ, ಎಚ್.ವಿ.ಮರುಳೇಶ ಪಾಲ್ಗೊಂಡಿದ್ದರು.
ಧರ್ಮ, ಯೋಗ ಭೂಮಿ
ಭಾರತವು ಧರ್ಮ ಮತ್ತು ಯೋಗ ಭೂಮಿ. ಶ್ರೀ ರಂಭಾಪುರೀಶ ನಿವಾಸ ನಿರ್ಮಾಣ ಆಗಿರುವುದು ಭಕ್ತರ ಸೌಭಾಗ್ಯ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು. ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ಸದ್ಭಾವ, ಸಾಮರಸ್ಯ ಬದುಕಿಗೆ ಅಮೂಲ್ಯ ಕೊಡುಗೆಯಿತ್ತ ಕೀರ್ತಿ ಶ್ರೀ ರಂಭಾಪುರಿ ಪೀಠಕ್ಕಿದೆ. ಜಗದ್ಗುರುಗಳು ಶ್ರಮ ಮತ್ತು ನಿರಂತರ ಪ್ರಯತ್ನದಿಂದ ಬಹು ದೊಡ್ಡ ಸಾಧನೆ ಮಾಡಿದ್ದಾರೆ ಎಂದರು.