More

    ಸಹಕಾರ ಬ್ಯಾಂಕುಗಳಿಗೆ ಬೇಕು ಬಲ..

    ಸಹಕಾರ ಬ್ಯಾಂಕುಗಳಿಗೆ ಬೇಕು ಬಲ..ಸುಮಾರು 113 ವರ್ಷಗಳ ಇತಿಹಾಸವಿರುವ ಮತ್ತು ದೇಶದ ಜಿಡಿಪಿಗೆ ಸುಮಾರು ಶೇ 8ರಷ್ಟು ಕೊಡುಗೆ ನೀಡುತ್ತಿರುವ ಸಹಕಾರ ಕ್ಷೇತ್ರ ಇಂದಿಗೂ ತನ್ನ ಮಹತ್ವವನ್ನು ಉಳಿಸಿಕೊಂಡಿದೆ. ನರೇಂದ್ರ ಮೋದಿ ನೇತೃತ್ವದ ಸರ್ಕಾರ ಸಹಕಾರ ಕ್ಷೇತ್ರದ ಆಮೂಲಾಗ್ರ ಬದಲಾವಣೆಗೆ ಆಸ್ಥೆ ವಹಿಸಿ ಕೇಂದ್ರದಲ್ಲಿ ಪ್ರತ್ಯೇಕ ಸಹಕಾರ ಸಚಿವಾಲಯ ಸ್ಥಾಪಿಸುವುದರ ಮುಖೇನ ರಾಷ್ಟ್ರೀಯ ಸಹಕಾರ ನೀತಿ ಜಾರಿಗೊಳಿಸಲು ತ್ವರಿತ ಕ್ರಮಗಳನ್ನು ಕೈಗೊಳ್ಳುತ್ತಿದೆ. ಇಡೀ ಸಹಕಾರ ಕ್ಷೇತ್ರದ ವಿವಿಧ ವಲಯಗಳಲ್ಲಿ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳಲು ಕೇಂದ್ರ ಸರ್ಕಾರವೇ ಅನೇಕ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳುತ್ತಿದೆ. ಆತ್ಮನಿರ್ಭರ ಭಾರತ ನಿರ್ವಣದಲ್ಲಿ ಪರಿಣಾಮಕಾರಿಯಾಗಬಲ್ಲ ಪ್ರಾಥಮಿಕ ಸಹಕಾರ ಸಂಘಗಳನ್ನು ಪಂಚಾಯಿತಿಗೊಂದು ಸ್ಥಾಪಿಸುವ, ಉನ್ನತೀಕರಿಸುವ ಉಪಕ್ರಮಗಳನ್ನು ಸಹಕಾರ ಸಚಿವಾಲಯ ಕೈಗೊಳ್ಳುತ್ತಿದೆ.

    ಈ ನಿಟ್ಟಿನಲ್ಲಿ ದೇಶದ ಸುಮಾರು 1539 ಪಟ್ಟಣ ಸಹಕಾರ ಬ್ಯಾಂಕುಗಳ ಆಡಳಿತದಲ್ಲಿ ಪಾರದರ್ಶಕತೆ ಮತ್ತು ಆರ್ಥಿಕ ಶಿಸ್ತನ್ನು ತರುವ ನಿಟ್ಟಿನಲ್ಲಿ ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆಯಲ್ಲಿ (ರೆಗ್ಯಲೇಷನ್ ಆಕ್ಟ್)ಬದಲಾವಣೆ ತಂದು ಪ್ರಸ್ತುತ ಭಾರತೀಯ ರಿಸರ್ವ್ ಬ್ಯಾಂಕ್ ಕಾಲಕಾಲಕ್ಕೆ ಸೂಕ್ತ ಮಾರ್ಗದರ್ಶನ ನೀಡುವ ನಿಟ್ಟಿನಲ್ಲಿ ನಿಯಮಾವಳಿಗಳನ್ನು ರೂಪಿಸುತ್ತಿದೆ. ಪಟ್ಟಣ ಸಹಕಾರ ಬ್ಯಾಂಕುಗಳು ಪ್ರಸ್ತುತ ವಿವಿಧ ಸಮುದಾಯಗಳ, ಜಾತಿ ಆಧಾರಿತ, ಸ್ಥಳೀಯ ಅಸ್ಮಿತೆ-ಪರಂಪರೆ ಮತ್ತು ಭೌಗೋಳಿಕ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿವೆ.

    ಕೋವಿಡ್-19 ಹಿನ್ನೆಲೆಯಲ್ಲಿ ಜಾಗತಿಕವಾಗಿ ಅನೇಕ ವ್ಯತಿರಿಕ್ತ ಪರಿಣಾಮಗಳು ಮತ್ತು ಪರಿವರ್ತನೆಗಳಾಗಿವೆ. ಗ್ರಾಮೀಣ ಬದುಕು ಮತ್ತು ನಿರೀಕ್ಷಿತ ಸಾಕ್ಷರತೆ ಕಾಣದ ನಮ್ಮ ದೇಶದಲ್ಲಿ ಡಿಜಿಟಲ್ ಆರ್ಥಿಕತೆ ವ್ಯಾಪಕವಾಗಿ ಹರಡಿಕೊಂಡಿರುವುದು ಹಾಗೂ ಸಾಮಾನ್ಯ ಅನಕ್ಷರಸ್ಥನೂ ಡಿಜಿಟಲ್ ವ್ಯವಹಾರದಲ್ಲಿ ತೊಡಗಿಸಿಕೊಳ್ಳುವ ಸುಲಲಿತ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಕೇಂದ್ರ ಸರ್ಕಾರ ಪರಿಚಯಿಸಿರುವುದು ಹೆಗ್ಗಳಿಕೆ.

    ಒಂದೆಡೆ ರಾಷ್ಟ್ರೀಕೃತ ಬ್ಯಾಂಕುಗಳು ಮತ್ತು ವಾಣಿಜ್ಯ ಬ್ಯಾಂಕುಗಳಲ್ಲಿ ಅಳವಡಿಸಿಕೊಂಡಿರುವ ಆಧುನಿಕ ತಂತ್ರಜ್ಞಾನ ಹಾಗೂ Small Finance Bankಗಳು ಆಧುನಿಕ ಸೌಲಭ್ಯಗಳೊಂದಿಗೆ ಹೆಚ್ಚು ಸ್ಥಾಪನೆಗೊಳ್ಳುತ್ತಿರುವುದು ಮತ್ತೊಂದೆಡೆ ಡಿಜಿಟಲ್ ಆರ್ಥಿಕತೆ ಕ್ರಾಂತಿ ಹಿನ್ನೆಲೆಯಲ್ಲಿ ಗ್ರಾಹಕರು ಬ್ಯಾಂಕಿಗೆ ನೇರವಾಗಿ ಬಂದು ವ್ಯವಹರಿಸುವ ಮನಸ್ಥಿತಿಯಿಂದ ವಿಮುಖವಾಗುತ್ತಿದ್ದಾರೆ. ಈ ಸಂದಿಗ್ಧ ಪರಿಸ್ಥಿತಿಯಲ್ಲಿ ವ್ಯವಹಾರ ವಹಿವಾಟುಗಳನ್ನು ಈ ಹಿಂದಿನಂತೆ ಉಳಿಸಿಕೊಂಡು ಲಾಭದಾಯಕವಾಗಿ ಮುನ್ನಡೆಯುವುದು ಸವಾಲಿನದಾಗಿದ್ದು, ಪಟ್ಟಣ ಸಹಕಾರ ಬ್ಯಾಂಕುಗಳೂ ಆಧುನಿಕತೆ ಮತ್ತು ಗ್ರಾಹಕನ ಮನಸ್ಥಿತಿಗೆ ಅನುಗುಣವಾಗಿ ಕಾರ್ಯಶೈಲಿ ಬದಲಿಸಿಕೊಳ್ಳುವ ಅನಿವಾರ್ಯತೆ ಹೆಚ್ಚಿದೆ. ಆಡಳಿತದಲ್ಲಿ ಶುದ್ಧೀಕರಣ ಮತ್ತು ಆರ್ಥಿಕ ಶಿಸ್ತನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಆರ್​ಬಿಐನ ಕೆಲವೊಂದು ನಿಯಮಾವಳಿಗಳು ಪ್ರಾಯೋಗಿಕವಾಗಿ ಬ್ಯಾಂಕಿನ ದಿನನಿತ್ಯದ ವಹಿವಾಟಿನಲ್ಲಿ ಅಳವಡಿಸಿಕೊಳ್ಳಲು ಕಷ್ಟಸಾಧ್ಯವಾಗಿದ್ದಾಗ್ಯೂ ಅಳವಡಿಸಿಕೊಳ್ಳಲೇಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.

    ಇದನ್ನೂ ಓದಿ: ವಿಮಾನದಲ್ಲೇ ಹೃದಯಾಘಾತ; ಆಕಾಶದಲ್ಲೇ ಹಾರಿಹೋದ ಪ್ರಾಣಪಕ್ಷಿ

    ದೇಶದ ವಿವಿಧ ಪ್ರದೇಶಗಳಲ್ಲಿರುವ ಪಟ್ಟಣ ಸಹಕಾರ ಬ್ಯಾಂಕುಗಳ ಸದ್ಯದ ಪರಿಸ್ಥಿತಿಗಳನ್ನು ವಾಸ್ತವಿಕವಾಗಿ ಅವಲೋಕಿಸದೇ ರಾಷ್ಟ್ರೀಕೃತ ಮತ್ತು ವಾಣಿಜ್ಯ ಬ್ಯಾಂಕ್ ನಿಯಮಾವಳಿಗಳ ರೀತಿಯಲ್ಲೇ ಕಾರ್ಯನಿರ್ವಹಿಸಬೇಕೆಂದು ಆರ್​ಬಿಐ ಅಪೇಕ್ಷಿಸುತ್ತದೆ. ಅದೇ ಸಂದರ್ಭದಲ್ಲಿ, ರಾಷ್ಟ್ರೀಕೃತ ಮತ್ತು ವಾಣಿಜ್ಯ ಬ್ಯಾಂಕುಗಳ ವಹಿವಾಟಿನಲ್ಲಿ ವಿಸ್ತರಿಸಿರುವ ಎಲ್ಲಾ ಸೌಲಭ್ಯಗಳನ್ನು ಇವಕ್ಕೂ ವಿಸ್ತರಿಸಬೇಕಿದೆ. ಆರ್​ಬಿಐ ನಿರ್ದೇಶನಗಳು ಮತ್ತು ನಿಯಮಾವಳಿಗಳನ್ನು ಪಾಲಿಸಲು ವಾಸ್ತವಿಕವಾಗಿ ಎದುರಿಸುತ್ತಿರುವ ಸಮಸ್ಯೆಗಳನ್ನು ಕೇಂದ್ರ ಸರ್ಕಾರ ಅಥವಾ ಆರ್​ಬಿಐ ಗಮನಕ್ಕೆ ತರುವ ನಿಟ್ಟಿನಲ್ಲಿ ಸಂಬಂಧಿತ ಮಹಾಮಂಡಳಗಳು ಕಾರ್ಯೋನ್ಮುಖವಾಗಬೇಕಿದೆ.

    ರಾಷ್ಟ್ರೀಕೃತ ವಾಣಿಜ್ಯ ಬ್ಯಾಂಕುಗಳಲ್ಲಿ ವಿತರಿಸುವ Micro Unitಗಳಿಗೆ ಸಂಬಂಧಿಸಿದ ಆದ್ಯತಾವಲಯದ ಸಾಲಗಳಿಗೆ Credit Guarantee Scheme ಅಡಿಯಲ್ಲಿ ಭದ್ರತೆಯ ಅವಕಾಶವಿದ್ದು ಇದೇ ಸೌಲಭ್ಯಗಳನ್ನು ಪಟ್ಟಣ ಸಹಕಾರ ಬ್ಯಾಂಕುಗಳಿಗೂ ವಿಸ್ತರಿಸಿದಲ್ಲಿ ಬ್ಯಾಂಕಿನ ಆದಾಯ ಮೂಲ ಹೆಚ್ಚಿಸಿಕೊಳ್ಳಲು ಸಹಕಾರಿಯಾಗುತ್ತದೆ. ಬಹುತೇಕ ಪಟ್ಟಣ ಸಹಕಾರ ಬ್ಯಾಂಕುಗಳ ಗ್ರಾಹಕರು/ಸದಸ್ಯರು ಮಧ್ಯಮ ಅಥವಾ ಬಡ ಮಧ್ಯಮ ವರ್ಗದವರೇ ಹೆಚ್ಚಾಗಿದ್ದು, ಇದರಿಂದ ಇವರಿಗೆ ಅನುಕೂಲವಾಗುತ್ತದೆ.

    ದೇಶದ ಎಲ್ಲಾ ಸ್ತರದ ಪಟ್ಟಣ ಸಹಕಾರ ಬ್ಯಾಂಕುಗಳಿಗೆ ಏಕರೂಪದ ಆಧುನಿಕ ತಂತ್ರಜ್ಞಾನದ ಅಳವಡಿಕೆಗೆ ಪೂರಕ ವ್ಯವಸ್ಥೆ ರೂಪಿಸಬೇಕಿದೆ. ಏಕೆಂದರೆ, ಗ್ರಾಮೀಣ ಭಾಗದ ಹಾಗೂ ಮಧ್ಯಮ-ಕೆಳಮಧ್ಯಮ ವರ್ಗದವರಿಗೆ ಬ್ಯಾಂಕಿಂಗ್ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ತಲುಪಿಸುವಲ್ಲಿ ರಾಷ್ಟ್ರೀಕೃತ/ವಾಣಿಜ್ಯ ಬ್ಯಾಂಕುಗಳಿಗಿಂತ ಹೆಚ್ಚು ಆಸರೆಯಾಗಿರುವುದು ಸಹಕಾರ ಬ್ಯಾಂಕುಗಳು. ಆಧುನಿಕ ತಂತ್ರಜ್ಞಾನದ ಮೂಲಸೌಕರ್ಯಗಳ ಅಳವಡಿಕೆ ತುಂಬಾ ದುಬಾರಿಯಾಗಿದ್ದು, ಸಹಕಾರ ಬ್ಯಾಂಕುಗಳು ರಾಷ್ಟ್ರೀಕೃತ/ವಾಣಿಜ್ಯ ಬ್ಯಾಂಕುಗಳಿಗೆ ಸರಿಸಮಾನವಾಗಿ ಸೌಲಭ್ಯಗಳನ್ನು ವಿಸ್ತರಿಸಲು ಸಾಧ್ಯವಾಗುತ್ತಿಲ್ಲ. ಕೇಂದ್ರ ಸರ್ಕಾರ ಕಡಿಮೆ ಖರ್ಚಿನಲ್ಲಿ ನಿರ್ವಹಣೆ ಮಾಡುವ ಆಧುನಿಕ ತಂತ್ರಜ್ಞಾನದ ಅಳವಡಿಕೆಗೆ ವ್ಯವಸ್ಥೆ ಮಾಡಬೇಕಿದೆ. ಎಲ್ಲಾ ಸಹಕಾರ ಬ್ಯಾಂಕುಗಳ ಒಟ್ಟು ವ್ಯವಹಾರಗಳ ತಂತ್ರಾಂಶ ಒಂದೇ ವೇದಿಕೆಯಲ್ಲಿ ಸಿಗುವುದಾದರೆ ಆರ್​ಬಿಐ ಮೇಲ್ವಿಚಾರಣೆಗೂ ಅನುಕೂಲವಾಗುತ್ತದೆ.

    ಇದನ್ನೂ ಓದಿ: ಇದು ಜಗತ್ತಿನಲ್ಲೇ ಅತ್ಯಂತ ಸಂತೋಷಭರಿತ ದೇಶ; ಆರು ವರ್ಷಗಳಿಂದಲೂ ಪ್ರಥಮ ಸ್ಥಾನ!

    ಪಟ್ಟಣ ಸಹಕಾರ ಬ್ಯಾಂಕುಗಳು ಪರ್ಯಾಯ ಮೂಲಗಳಿಂದಲೂ ಲಾಭ ಗಳಿಸುವ ಮತ್ತು ಯೋಜನೆಗಳನ್ನು ಗ್ರಾಹಕರ ಅಪೇಕ್ಷೆಗೆ ಅನುಗುಣವಾಗಿ ಅಳವಡಿಸಿಕೊಳ್ಳುವ ಅನಿವಾರ್ಯತೆಯಿದೆ. ಆರ್​ಬಿಐ ಕೂಡ ಪೂರಕ ವಾತಾವರಣ ಸೃಷ್ಟಿಸಬೇಕಿದೆ.

    ಪಟ್ಟಣ ಸಹಕಾರ ಬ್ಯಾಂಕುಗಳಲ್ಲೂ NRI/NRE ಅಕೌಂಟ್​ಗಳನ್ನು ಪ್ರಾರಂಭಿಸಲು ಅವಕಾಶ; ವಿದೇಶಿ ವಿನಿಮಯ ವ್ಯವಹಾರ ನಡೆಸಲು ಅನುಮತಿ ನೀಡಬೇಕು. ಯಾವುದೇ ಕಂಪನಿಗಳಲ್ಲಿ ಸಾರ್ವಜನಿಕರಿಗೆ ಷೇರು ಖರೀದಿಸಲು ಅರ್ಜಿ ಆಹ್ವಾನಿಸಿದಾಗ ಈ ಸೌಲಭ್ಯ ನೀಡಲು ರಾಷ್ಟ್ರೀಕೃತ ಬ್ಯಾಂಕ್/ವಾಣಿಜ್ಯ ಬ್ಯಾಂಕುಗಳಿಗೆ ಮಾತ್ರ ಅವಕಾಶವಿದ್ದು (ASBA Accounts)) ಪಟ್ಟಣ ಸಹಕಾರ ಬ್ಯಾಂಕುಗಳಿಗೂ ಈ ಅವಕಾಶ ನೀಡಿದಲ್ಲಿ ಕಡಿಮೆ ವೆಚ್ಚದ ಠೇವಣಿಗಳನ್ನು ಕ್ರೋಡೀಕರಿಸಲು ಸಹಕಾರಿಯಾಗುತ್ತದೆ.

    ಸಾಮಾನ್ಯವಾಗಿ ಸರ್ಕಾರಿ ಅಥವಾ ಅರೆಸರ್ಕಾರಿ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಬ್ಯಾಂಕ್ ಗ್ಯಾರಂಟಿಗಳನ್ನು ರಾಷ್ಟ್ರೀಕೃತ ಬ್ಯಾಂಕ್/ವಾಣಿಜ್ಯ ಬ್ಯಾಂಕುಗಳಿಂದ ಮಾತ್ರ ಅಪೇಕ್ಷಿಸುವ ಪರಿಪಾಠವಿದೆ. ಪಟ್ಟಣ ಸಹಕಾರ ಬ್ಯಾಂಕುಗಳಿಗೂ ಈ ಸೇವೆ ಒದಗಿಸುವ ಅವಕಾಶ ನೀಡಿದಲ್ಲಿ ಬಂಡವಾಳರಹಿತ ಆದಾಯ ವೃದ್ಧಿಗೆ (Non Fund Based Income) ಅನುಕೂಲವಾಗುತ್ತದೆ. ಕಾರ್ಪೆರೇಟ್ ಇನ್ಸುರೆನ್ಸ್ ಏಜೆನ್ಸಿ ಮುಖಾಂತರ ಆಯಾ ಬ್ಯಾಂಕಿನ ವ್ಯಾಪ್ತಿಯ ಸದಸ್ಯರಿಗೆ/ಗ್ರಾಹಕರಿಗೆ ವಿಮಾ ಸೌಲಭ್ಯಗಳನ್ನು ವಿಸ್ತರಿಸುವ ಮುಖೇನ ಬ್ಯಾಂಕಿನ ಆದಾಯ ಮೂಲ ಹೆಚ್ಚಿಸಿಕೊಳ್ಳಬಹುದು. Non-Fund Based Income ಅಂದರೆ, Insurance, Letter of Credit, Issuing of Solvency Certificate ಮುಂತಾದ ಸೌಲಭ್ಯಗಳನ್ನು ವಿಸ್ತರಿಸುವುದರ ಮುಖೇನ ಬ್ಯಾಂಕಿನ ವ್ಯವಹಾರಗಳನ್ನು ಹೆಚ್ಚಿಸುವ ಮತ್ತು ಲಾಭ ಗಳಿಸುವ ಪರ್ಯಾಯ ಮಾರ್ಗಗಳಿಗೂ ಆದ್ಯತೆ ನೀಡಬೇಕಿದೆ.

    ಬಹುತೇಕ ಪಟ್ಟಣ ಸಹಕಾರ ಬ್ಯಾಂಕುಗಳಲ್ಲಿ ಸದ್ಯ ಇರುವ ಅನುತ್ಪಾದಕ ಆಸ್ತಿಗಳಿಗೆ (ಎನ್​ಪಿಎ) ಸಂಬಂಧಿಸಿ ಆರ್​ಬಿಐ ಕೆಲವೊಂದು ನಿಬಂಧನೆಗೊಳಪಟ್ಟು OTS ಅಥವಾ WRITOFF ಮಾಡಲು ವಾಣಿಜ್ಯ ಬ್ಯಾಂಕುಗಳಲ್ಲಿರುವಂತೆ ನಿರ್ಧಾರ ಕೈಗೊಳ್ಳಲು ಅವಕಾಶ ಕಲ್ಪಿಸಿದಲ್ಲಿ ಪ್ರಯೋಜನವಾಗುತ್ತದೆ.

    ಪಟ್ಟಣ ಸಹಕಾರ ಬ್ಯಾಂಕುಗಳ ಒಟ್ಟಾರೆ ಸುಧಾರಣೆಗೆ ಕಾರ್ಪೆರೇಟ್ ಮಾದರಿ ಆಡಳಿತದ ಅವಶ್ಯಕತೆಯಿದೆ ಎಂಬುದು ಬಹುತೇಕರ ಅಭಿಮತ. ಕಾರ್ಪೆರೇಟ್ ಆಡಳಿತದ ಮೂಲತತ್ವವೇ ಸಂಸ್ಥೆಯ ಸಮರ್ಪಕ ಹೊಣೆಗಾರಿಕೆ, ಪಾರದರ್ಶಕತೆ, ನ್ಯಾಯೋಚಿತತೆ, ಜವಾಬ್ದಾರಿ ಮತ್ತು ಅಪಾಯಗಳ ಸಮರ್ಪಕ ನಿರ್ವಹಣೆ. ಉತ್ತಮ ಕಾರ್ಪೆರೇಟ್ ಆಡಳಿತವು ಸಹಜವಾಗಿ ನಾಯಕತ್ವಕ್ಕೆ ಮಾರ್ಗದರ್ಶನ ನೀಡುತ್ತದೆ ಹಾಗೂ ಷೇರುದಾರರು, ನಿರ್ದೇಶಕರು, ನಿರ್ವಹಣೆ ಮತ್ತು ಉದ್ಯೋಗಿಗಳ ಹಿತಾಸಕ್ತಿಗಳನ್ನು ಒಟ್ಟುಗೂಡಿಸುತ್ತದೆ. ಈ ನಿಟ್ಟಿನಲ್ಲಿ ಆರ್​ಬಿಐ ಸಹ ವಾಸ್ತವಿಕ ನೆಲೆಗಟ್ಟಿನಲ್ಲಿ ಪೂರಕವಾಗಿ ಸ್ಪಂದಿಸಬೇಕಿದೆ.

    ಎರಡು ವರ್ಷಗಳಿಂದ ಆರ್ಥಿಕ ಹಿಂಜರಿತ ಅನುಭವಿಸುತ್ತಿರುವ ಅಮೆರಿಕಾದಲ್ಲಿ ಮೂರು ಬ್ಯಾಂಕುಗಳು ದಿವಾಳಿಯಾಗಿರುವುದು ಕಳವಳಕಾರಿ ಸಂಗತಿ. ಒಂದಿಲ್ಲೊಂದು ರೀತಿಯಲ್ಲಿ ಅಮೆರಿಕಾ ಜತೆಗೆ ನೇರ ಆರ್ಥಿಕ ಸಂಬಂಧ ಹೊಂದಿರುವ ಭಾರತ ತುಂಬಾ ಎಚ್ಚರಿಕೆ ವಹಿಸಬೇಕಿದೆ. ಆದರೆ, ಜಾಗತಿಕ ಆರ್ಥಿಕ ಹಿಂಜರಿತದ ಮಧ್ಯೆಯೂ ಜಗತ್ತಿನಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ ಭಾರತದ್ದು ಎಂಬುದು ದೇಶದ ಬೆಳವಣಿಗೆಯ ದರದಲ್ಲೇ ಗೋಚರವಾಗುತ್ತಿದೆ. ಇಂತಹ ಸದೃಢತೆಗೆ ಮಿಶ್ರ ಆರ್ಥಿಕತೆಯ (Mixed Economy) ಭಾಗವಾಗಿ ಕಾರ್ಯನಿರ್ವಹಿಸುತ್ತಿರುವ ಸಹಕಾರ ಕ್ಷೇತ್ರದ ಪಾತ್ರವೂ ಪ್ರಮುಖವಾದದ್ದು ಎಂಬುದು ಅತಿಶಯೋಕ್ತಿಯಲ್ಲ.

    (ಲೇಖಕರು ಹಿರಿಯ ಸಹಕಾರಿ ಧುರೀಣರು)

    ಒಬ್ಬರು ಅಥವಾ ಇಬ್ಬರು ಮಕ್ಕಳಿರುವ ದಂಪತಿಗೆ ಭರ್ಜರಿ ಆಫರ್​: ಮೂರನೇ ಮಗುವಿಗೆ ಜನ್ಮನೀಡಿದರೆ 50 ಸಾವಿರ ರೂಪಾಯಿ!

    ಮನೆ ಮುಂದೆ ಕಾರು ನಿಲ್ಲಿಸುತ್ತಾನೆಂದು ಜೀವವನ್ನೇ ತೆಗೆದ ದಾಯಾದಿಗಳು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts