ನೆರೆಮನೆಯವನಿಂದ ಅತ್ಯಾಚಾರಕ್ಕೆ ಯತ್ನ: ಯುವತಿಯನ್ನು ಕಾಪಾಡಿದ ಬೀದಿನಾಯಿ ಶೆರು

ಭೂಪಾಲ್‌: ಮನುಷ್ಯನ ನಿಜ ಸ್ನೇಹಿತ ನಾಯಿ ಎಂದು ಸಾರಿ ಹೇಳುವಂತ ಘಟನೆಯೊಂದು ಮಧ್ಯಪ್ರದೇಶದಿಂದ ವರದಿಯಾಗಿದ್ದು, ನೆರೆಮನೆಯವನಿಂದ ಅತ್ಯಾಚಾರಕ್ಕೊಳಗಾಗುತ್ತಿದ್ದ 29 ವರ್ಷದ ಯುವತಿಯನ್ನು ಬೀದಿನಾಯಿಯೊಂದು ಕಾಪಾಡಿದೆ.

ಯುವತಿಯು ಒಬ್ಬಳೇ ಇರುವುದನ್ನು ಗಮನಿಸಿದ ನೆರೆಮನೆಯಾತ 3ಗಂಟೆ ವೇಳೆಗೆ ಬೆಲ್‌ ಮಾಡಿ ಏಕಾಏಕಿ ಮನೆಗೆ ನುಗ್ಗಿದ್ದಾನೆ. ಲೈಂಗಿಕ ದೌರ್ಜನ್ಯ ಎಸಗಲು ಮುಂದಾಗಿದ್ದಾನೆ. ಈ ವೇಳೆ ಮನೆಯಲ್ಲೇ ಇದ್ದ ಬೀದಿ ನಾಯಿ ಶೆರು ಯುವತಿಯನ್ನು ರಕ್ಷಿಸಿರುವ ಘಟನೆ ಭೂಪಾಲ್‌ನ ಚೋಲಾ ಎಂಬಲ್ಲಿ ನಡೆದಿದೆ.

ಬೀದಿನಾಯಿ ಶೆರು ಆರೋಪಿ ಮೇಲೆರಗಿ ದಾಳಿ ಮಾಡಿದೆ. ಅಲ್ಲದೆ ಆತನನ್ನು ಅಟ್ಟಿಸಿಕೊಂಡು ಹೋಗಿದೆ. ಈ ಕುರಿತು ಯುವತಿ ಪೊಲೀಸರಿಗೆ ದೂರು ನೀಡಿದ್ದು, ನೆರೆಮನೆಯ ಸುನೀಲ್‌ ಎಂಬಾತ ತನ್ನ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಸುನೀಲ್‌ ನಿರುದ್ಯೋಗಿಯಾಗಿದ್ದ. ಅವನು ಆಗಾಗ್ಗೆ ತೊಂದರೆ ನೀಡುತ್ತಿದ್ದ. ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಲು ಮುಂದಾದಾಗ ಶೆರು ತನ್ನನ್ನು ರಕ್ಷಿಸಲೆಂದು ಆತನ ಮೇಲೆ ದಾಳಿ ಮಾಡಿತು. ಈ ವೇಳೆ ಚಾಕುವಿನಿಂದ ನಾಯಿಗೆ ತಿವಿದಿದ್ದು, ನಾಯಿಯ ಮುಂಭಾಗದಿಂದ ರಕ್ತ ಸುರಿಯಲು ಆರಂಭಿಸಿತು ಎಂದು ದೂರಿನಲ್ಲಿ ತಿಳಿಸಿದ್ದಾಳೆ.

ಸ್ಟೇಷನ್‌ ಹೌಸ್‌ ಅಧಿಕಾರಿ ರಾಧೇಶ್ಯಾಮ ರಾಯ್‌ಗರ್‌ ಮಾತನಾಡಿ, ನೆರೆಮನೆಯಾತ ಯುವತಿಗೆ ಲೈಂಗಿಕ ಕಿರುಕುಳ ನೀಡಲು ಮುಂದಾದ ವೇಳೆ ಬೀದಿ ನಾಯಿ ಶೆರು ಯುವತಿಯನ್ನು ರಕ್ಷಿಸಿದೆ. ಈ ಕುರಿತು ಯುವತಿ ದೂರು ನೀಡಿದ್ದು, ತಲೆ ಮರೆಸಿಕೊಂಡಿರುವ ಆರೋಪಿಗಾಗಿ ಶೋಧಕಾರ್ಯ ಕೈಗೊಳ್ಳಲಾಗಿದೆ. ನಾಯಿಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ. (ಏಜೆನ್ಸೀಸ್)