ಕೊಕಟನೂರ: ಅಥಣಿ ತಾಲೂಕಿನ ಪೂರ್ವ ಭಾಗದ ಅಡಹಳ್ಳಟ್ಟಿ, ಅಡಹಳ್ಳಿ ಹಾಗೂ ಚಮಕೇರಿ ಗ್ರಾಮಗಳಲ್ಲಿ ಭಾನುವಾರ ಸಂಜೆ ಸಿಡಿಲಿನಬ್ಬರದೊಂದಿಗೆ ಸುರಿದ ಬಿರುಗಾಳಿ ಮಳೆಗೆ ಅಪಾರ ಬೆಳೆ ಹಾಗೂ ಹಲವು ಮನೆಗಳಿಗೆ ಹಾನಿಯಾಗಿದೆ.
ಅಡಹಳ್ಳಟ್ಟಿಯ ಪುಟ್ಟವ್ವ ಉರ್ಫ ಸುನಂದಾ ಮಲ್ಲಪ್ಪ ಗುಡದಿನ್ನಿ ಎಂಬುವರ ಮನೆ ಛಾವಣಿ, ಪತ್ರಾಸ್‌ಗಳು ಕುಸಿದಿದ್ದರಿಂದ ಮನೆಯಲ್ಲಿದ್ದ ಪುಟ್ಟವ್ವ ಅವರು ತೀವ್ರ ಗಾಯಗೊಂಡಿದ್ದಾರೆ. ಇವರಿಗೆ ಅಥಣಿ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗೆ ಮಹಾರಾಷ್ಟ್ರದ ಮಿರಜ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಡಹಳ್ಳಟ್ಟಿ ಗ್ರಾಮದ ಮಲ್ಲಪ್ಪ ಕೊಂಡಿ ಹಾಗೂ ಸುಖದೇವ ಗುಡದಿನ್ನಿ ಅವರ ಮನೆಗಳು ಸಂಪೂರ್ಣ ನೆಲಸಮವಾಗಿವೆ. ಅಡಹಳ್ಳಿ ಪ್ರಾಥಮಿಕ ಕೇಂದ್ರದ ಛಾವಣಿ ಹಾರಿ ಹೋಗಿವೆ. ಚಮಕೇರಿ ಗ್ರಾಮದಲ್ಲಿ ವಿದ್ಯುತ್ ಕಂಬ ಹಾಗೂ ಟಿ.ಸಿ. ಬಿದ್ದಿದ್ದರಿಂದ ವಿದ್ಯುತ್ ಸಂಪರ್ಕ ಸ್ಥಗಿತಗೊಂಡಿದೆ.