ಅಬ್ಬರದ ಮಳೆ, ಪ್ರವಾಹ ಭೀತಿ

ಬೆಳಗಾವಿ: ಕೃಷ್ಣಾ, ಮಲ್ರಪಭಾ ನದಿಗಳ ಪ್ರವಾಹ ಮತ್ತು ಕೆಲವೆಡೆ ಮತ್ತೆ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಶುಕ್ರವಾರ ಒಂದೇ ದಿನದಲ್ಲಿ ಜಿಲ್ಲೆಯಾದ್ಯಂತ 101.2 ಎಂಎಂ ಮಳೆಯಾಗಿದೆ. ಪರಿಣಾಮ ಗಣೇಶ ವಿಸರ್ಜನೆ ಸಂಭ್ರಮದಲ್ಲಿರುವ ಜನರು, ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ರೈತರು,ವ್ಯಾಪಾರಿಗಳಿಗೆ ಆತಂಕ ಶುರುವಾಗಿದೆ.

ಬೆಳಗಾವಿ ನಗರ, ಬೆಳಗಾವಿ, ಖಾನಾಪೂರ, ಬೈಲಹೊಂಗಲ, ಹುಕ್ಕೇರಿ ಸೇರಿದಂತೆ ಇನ್ನಿತರರ ತಾಲೂಕುಗಳಲ್ಲಿ ಕಳೆದ ಒಂದು ವಾರದಲ್ಲಿ 332.3 ಎಂ.ಎಂ ಮಳೆಯಾಗಿದೆ. ಮತ್ತೊಂದೆಡೆ ಮಲಪ್ರಭಾ, ಘಟಪ್ರಭಾ, ಮಾರ್ಕಂಡೆಯ ನದಿ ಹಾಗೂ ಬಳ್ಳಾರಿ ನಾಲಾದಲ್ಲಿ ನೀರಿನ ಹರಿಯುವಿಕೆ ಪ್ರಮಾಣ ಏರಿಕೆಯಾಗಿದ್ದು, ಹಿಡಕಲ್ ಜಲಾಶಯದ ಒಳ ಹರಿವು 23,819 ಕ್ಯೂಸೆಕ್, ಮಲಪ್ರಭಾ ಒಳ ಹರಿವು 16,000 ಕ್ಯೂಸೆಕ್‌ಗೆ ಏರಿಕೆ ಆಗಿದೆ. ಖಾನಾಪುರ ಘಟ್ಟ ಪ್ರದೇಶಗಳಲ್ಲಿ ನಾಲ್ಕು ದಿನಗಳಿಂದ ಧಾರಾಕಾರ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಮಲಪ್ರಭಾ ನದಿ ಹರಿವು ಹೆಚ್ಚುತ್ತಿದೆ. ನವಿಲುತೀರ್ಥ ಜಲಾಶಯ ಪೂರ್ಣ ಭರ್ತಿಯಾಗಿದೆ.

ಹಾಗಾಗಿ ಸದ್ಯಕ್ಕೆ ಇರುವ 16,000 ಸಾವಿರಕ್ಕೂ ಹೆಚ್ಚು ನೀರಿನ ಹರಿವಿಗೆ ಪ್ರತಿಯಾಗಿ ಅಷ್ಟೇ ಪ್ರಮಾಣದ ನೀರು ಹೊರಬಿಡಲಾಗುತ್ತಿದೆ. ಪರಿಣಾಮ ಸವದತ್ತಿ ತಾಲೂಕಿನ ಮುನವಳ್ಳಿ, ರಾಮದುರ್ಗ ತಾಲೂಕಿನ ಹಂಪಿಹೊಳಿ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮತ್ತೆ ಪ್ರವಾಹ ಭೀತಿ ಉಂಟಾಗಿದೆ. ಮತ್ತೊಂದೆಡೆ ನೆರೆಯ ಮಹಾರಾಷ್ಟ್ರದ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಭಾರೀ ಮಳೆ ಆಗುತ್ತಿರುವ ಹಿನ್ನೆಲೆಯಲ್ಲಿ ಕೋಯ್ನ ,ದೂಧಗಂಗಾ ಮತ್ತು ರಾಜಾಪೂರ ಬ್ಯಾರೇಜ್ ಮುಖಾಂತರ ಶುಕ್ರವಾರ ಕೃಷ್ಣಾ ನದಿಗೆ 1.29ಲಕ್ಷ ಕ್ಯೂಸೆಕ್ ನೀರು ಬಿಡಲಾಗಿದೆ. ಮಹಾರಾಷ್ಟ್ರದಲ್ಲಿ ಕಳೆದೊಂದು ವಾರದಿಂದ ಕೊಯ್ನ, ವಾರನಾ, ಮಹಾಬಲೇಶ್ವರ, ಕೊಲ್ಲಾಪುರ, ರಾಧಾನಗರಿ, ಸಾಂಗ್ಲಿ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ 92 ರಿಂದ 110 ಎಂಎಂ ಪ್ರಮಾಣದಲ್ಲಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಅಲ್ಲಿ ಡ್ಯಾಂಗಳು ಭರ್ತಿಯಾಗಿ ಹೆಚ್ಚುವರಿ ನೀರನ್ನು ಹರಿದು ಬಿಡಲಾಗುತ್ತಿದೆ. ಮಳೆ ನಿಲ್ಲದಿದ್ದರೆ ನೀರಿನ ಪ್ರಮಾಣ 2.5 ಲಕ್ಷ ಕ್ಯೂಸಕ್‌ಗೆ ಏರಿಕೆಯಾವ ಸಾಧ್ಯತೆಯಿದೆ.

ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು ಚಿಕ್ಕೋಡಿ, ನಿಪ್ಪಾಣಿ, ಕಾಗವಾಡ, ಅಥಣಿ, ರಾಯಬಾಗ ತಾಲೂಕುಗಳ ನದಿ ತೀರದ ಜನರಿಗೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚನೆ ನೀಡಿದೆ.

ಸ್ಮಾರ್ಟ್ ಸಿಟಿಯಲ್ಲಿ ಮಳೆಯ ಅವಾಂತರ

ಕಳೆದ ಎರಡು ದಿನಗಳಲ್ಲಿ ಬೆಳಗಾವಿ ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬುಧವಾರ ರಾತ್ರಿಯಿಂದ ಧಾರಾಕಾರ ಮಳೆ ಸುರಿಯುತ್ತಿರುವುದರಿಂದ ಕೆಲವೆಡೆ ಜನಜೀವನ ಅಸ್ತವ್ಯಸ್ತವಾಗಿದೆ. ಎರಡು ದಿನಗಳ ಅವಯಲ್ಲಿ ಬರೋಬ್ಬರಿ 76.9 ಎಂಎಂ ಮಳೆಯಾಗಿದೆ.ಇತ್ತೀಚೆಗಷ್ಟೆ, ಭಾರೀ ಮಳೆಯಿಂದ ಬಳ್ಳಾರಿ ನಾಲೆ ತುಂಬಿ ಹರಿದ ಪರಿಣಾಮ ನಗರದ ಕಪಿಲೇಶ್ವರ, ಸಮರ್ಥ ನಗರ ಸೇರಿದಂತೆ ಅರ್ಧ ಭಾಗ ಸಂಪೂರ್ಣ ಜಲಾವೃತಗೊಂಡಿತ್ತು. ಇದೀಗ ಮಳೆಯಾಗುತ್ತಿರುವ ಕಾರಣ ಮತ್ತೆ ಸ್ಮಾರ್ಟ್ ಸಿಟಿಯಲ್ಲಿ ಪ್ರವಾಹ ಉಂಟಾಗುವ ಸಾಧ್ಯತೆ ಹೆಚ್ಚಿದೆ ಎಂದು ಪಾಲಿಕೆ ಅಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ಖಾನಾಪುರ ತಾಲೂಕಿನಲ್ಲಿ ಮುಂದುವರಿದ ಮಳೆ

ಖಾನಾಪುರ: ತಾಲೂಕಿನ ಪಶ್ಚಿಮ ಘಟ್ಟದ ಕಾಡಿನಲ್ಲಿ ಶುಕ್ರವಾರವೂ ಮಳೆಯ ಅಬ್ಬರ ಮುಂದುವರಿದಿದ್ದು, ಅರಣ್ಯ ಪ್ರದೇಶದಲ್ಲಿ ಎಡೆಬಿಡದೆ ಮಳೆ ಸುರಿಯುತ್ತಿರುವ ಕಾರಣ ಗಣೇಶೋತ್ಸವದ ಸಂಭ್ರಮ ಕಳೆಗುಂದಿದೆ. ಸತತಧಾರೆಗೆ ತಾಲೂಕಿನ ಕಾನನದಂಚಿನ ಲೋಂಡಾ, ಗುಂಜಿ, ನಾಗರಗಾಳಿ, ಹೆಮ್ಮಡಗಾ, ಕಣಕುಂಬಿ ಭಾಗದಲ್ಲಿ ವಿದ್ಯುತ್ ವ್ಯತ್ಯಯಗೊಂಡು ಜನಜೀವನಕ್ಕೆ ತೊಂದರೆಯಾಗಿದೆ.

ಶುಕ್ರವಾರ ದಿನವಿಡೀ ತಾಲೂಕಿನ ಪಶ್ಚಿಮ ಭಾಗದ ಅರಣ್ಯ ಪ್ರದೇಶದಲ್ಲಿ ಸತತವಾಗಿ ಮಳೆ ಸುರಿಯುತ್ತಿರುವ ಪರಿಣಾಮ ಪಾಂಡರಿ, ಮಹದಾಯಿ ಹಾಗೂ ಮಲಪ್ರಭಾ ನದಿ ಹಾಗೂ ಹಳ್ಳಗಳಲ್ಲಿ ನೀರಿನ ಪ್ರಮಾಣ ಹೆಚ್ಚಿದೆ. ರೈತಾಪಿ ವರ್ಗದ ಕೃಷಿ ಚಟುವಟಿಕೆಗಳು ಬಹುತೇಕ ಸ್ಥಗಿತಗೊಂಡಿವೆ. ಪಟ್ಟಣದ ತಹಸೀಲ್ದಾರ್ ಕಚೇರಿ ಮಾಹಿತಿಯಂತೆ ತಾಲೂಕಿನ ಕಣಕುಂಬಿಯಲ್ಲಿ 157 ಮಿ.ಮೀ, ಜಾಂಬೋಟಿಯಲ್ಲಿ 79 ಮಿ.ಮೀ, ಅಸೋಗಾದಲ್ಲಿ 62 ಮಿ.ಮೀ, ಖಾನಾಪುರ ಪಟ್ಟಣದಲ್ಲಿ 45 ಮಿ.ಮೀ, ಲೋಂಡಾದಲ್ಲಿ 65 ಮಿ.ಮೀ, ನಾಗರಗಾಳಿಯಲ್ಲಿ 39 ಮಿ.ಮೀ, ಬೀಡಿಯಲ್ಲಿ 16 ಮಿ.ಮೀ, ಗುಂಜಿಯಲ್ಲಿ 36 ಮಿ.ಮೀ ಹಾಗೂ ಕಕ್ಕೇರಿಯಲ್ಲಿ 21 ಮಿ.ಮೀಗಳಷ್ಟು ಮಳೆ ಸುರಿದ ವರದಿಯಾಗಿದೆ.