ಬೆಂಗಳೂರು ಅಪಘಾತ, ಉರುಳಿನಲ್ಲಿ ಸಿಲುಕಿದ ಪ್ರಾಣಿಗಳನ್ನು ಹೊರತುಪಡಿಸಿ ನೈಸರ್ಗಿಕವಾಗಿ ಗಾಯಗೊಂಡ ಕಾಡು ಪ್ರಾಣಿಗಳಿಗೆ ಸಾಕು ಪ್ರಾಣಿಗಳಂತೆ ಚಿಕಿತ್ಸೆ ನೀಡುವ ಪದ್ಧತಿಯು ಮಾನವ-ವನ್ಯಜೀವಿ ಸಂಘರ್ಷಗಳಿಗೆ ಕಾರಣವಾಗಲಿದ್ದು, ಕೂಡಲೇ ಈ ಪದ್ಧತಿಯನ್ನು ನಿಲ್ಲಿಸಬೇಕು ಎಂದು ವನ್ಯಜೀವಿ ವಿಜ್ಞಾನಿ ಡಾ. ಸಂಜಯ್ ಗುಬ್ಬಿ ರಾಜ್ಯ ಸರ್ಕಾರವನ್ನು ವಿನಂತಿ ಮಾಡಿದ್ದಾರೆ.
ಈ ಸಂಬಂಧ ಅರಣ್ಯ, ಪರಿಸರ ಮತ್ತು ಜೀವಿಶಾಸ ಸಚಿವ ಈಶ್ವರ್ ಖಂಡ್ರೆ ಅವರಿಗೆ ಪತ್ರ ಬರೆದು ಈ ಅವೈಜ್ಞಾನಿಕ ಪದ್ಧತಿಯಿಂದ ಆಗುತ್ತಿರುವ ಸಮಸ್ಯೆಗಳನ್ನು ಮನದಟ್ಟು ಮಾಡಿಕೊಡುವ ಪ್ರಯತ್ನ ಮಾಡಿದ್ದಾರೆ.
ವನ್ಯಜೀವಿಗಳು ನೈಸರ್ಗಿಕ ಕಾರಣಗಳಿಂದ (ಇನ್ನೊಂದು ಜೀವಿಯಿಂದ ದಾಳಿಗೆ ತುತ್ತಾಗಿ ಅಥವಾ ಕಲ್ಲು, ಮುಳ್ಳುಗಳಿಂದ ಗಾಯ) ಸಾವನ್ನಪ್ಪಿದರೆ ಅದು ನಿಸರ್ಗದ ಒಂದು ಮುಖ್ಯ ಭಾಗವಾಗಲಿದೆ. ನಿಸರ್ಗದಲ್ಲಿ ಹುಟ್ಟು ಮತ್ತು ಸಾವು ಪ್ರಾಕೃತಿಕ ಕ್ರಿಯೆ. ಇದರಿಂದ ವನ್ಯಜೀವಿಗಳ ಸಂಖ್ಯೆಯಲ್ಲಿ ಪ್ರಾಕೃತಿಕವಾಗಿ ಸಮತೋಲನ ಕಾಯ್ದುಕೊಳ್ಳಲು ಸಹಾಯವಾಗಲಿದೆ.
ಅದರಲ್ಲಿಯೂ ನಿಸರ್ಗದಲ್ಲಿ ನೈಸರ್ಗಿಕವಾಗಿ ಬೇಟೆಗೊಳಗಾಗುವ ಆನೆ (ಅಪರೂಪವಾಗಿ ಹುಲಿಗಳು ಆನೆ ಮರಿಗಳನ್ನು ಬೇಟೆಯಾಡುವ ಸಂದರ್ಭ ಬಿಟ್ಟು) ಹುಲಿಗಳಂತಹ ವನ್ಯಜೀವಿಗಳ ಸಂಖ್ಯೆಯನ್ನು ಪರಿಸರದ ಸಾಮರ್ಥ್ಯಕ್ಕೆ ನಿಯಂತ್ರಣಗೊಳಿಸುವಲ್ಲಿ ಪ್ರಾಣಿಗಳು ನೈಸರ್ಗಿಕ ಕಾರಣಗಳಿಂದ ಗಾಯಗೊಂಡು ಅಸುನೀಗುವುದು ಕೂಡ ಮುಖ್ಯ ಪ್ರಕ್ರಿಯೆ ಎಂದು ಹೇಳಿದ್ದಾರೆ.
ಹೀಗಾಗಿ, ಗಾಯಗೊಂಡ ಪ್ರಾಣಿಗಳಿಗೆ ನಿಸರ್ಗದಲ್ಲಿ ಗುಣಮುಖವಾಗುವ ಪ್ರಕ್ರಿಯೆಗಳಿರುತ್ತವೆ ಅಥವಾ ಆ ಪ್ರಾಣಿ ಮರಣ ಹೊಂದುತ್ತದೆ. ಹೀಗೆ ಸತ್ತ ಪ್ರಾಣಿಗಳ ಮೇಲೆಯೂ ಅವಲಂಬಿತವಾಗಿ ಇನ್ನಿತರ ಹಲವಾರು ಪ್ರಾಣಿಗಳು ಬದುಕುತ್ತವೆ. ಸತ್ತ ವನ್ಯಜೀವಿಗಳ ಕಳೇಬರವನ್ನು ನಿಸರ್ಗದಲ್ಲಿಯೇ ಬಿಡುವ ಅರಣ್ಯ ಇಲಾಖೆಯ ನಿರ್ಧಾರ ರಣಹದ್ದುವಿನಂತಹ ವನ್ಯಜೀವಿಗಳ ಪುನರುಜ್ಜೀವನಕ್ಕೆ ಸಾಕಷ್ಟು ಸಹಕಾರಿಯಾಗಿದೆ ಎಂದು ತಿಳಿಸಿದ್ದಾರೆ.
ಗಾಯಗೊಂಡ ವನ್ಯಜೀವಿಗಳ ಚಿಕಿತ್ಸೆ ಕೊಡಿಸುವ ಕಾರ್ಯದಿಂದ ವನ್ಯಜೀವಿಗಳಲ್ಲಿ ನೈಸರ್ಗಿಕ ಮರ್ತ್ಯತೆಯೂ ಕಡಿಮೆಯಾಗುತ್ತದೆ. ಅನೈಸರ್ಗಿಕವಾಗಿ ವನ್ಯಜೀವಿಗಳ ಸಂಖ್ಯೆ ಹೆಚ್ಚಿಸಿದರೆ ಮಾನವ-ವನ್ಯಜೀವಿ ಸಂಘರ್ಷಕ್ಕೆ ಕಾರಣವಾಗಲಿದೆ. ವನ್ಯಜೀವಿಗಳು ಮತ್ತು ಅವುಗಳ ಅಗತ್ಯತೆಗಳು ಸಾಕು ಪ್ರಾಣಿಗಳಿಗಿಂತ ವಿಭಿನ್ನವಾಗಿರುತ್ತದೆ ಎಂದರು.
ಇತ್ತೀಚಿನ ದಿನಗಳಲ್ಲಿ ಕಾಡು ಪ್ರಾಣಿಗಳಿಗೆ ಅದರಲ್ಲಿಯೂ ಹುಲಿ ಯೋಜನೆ ಪ್ರದೇಶಗಳು, ರಾಷ್ಟ್ರೀಯ ಉದ್ಯಾನ, ವನ್ಯಜೀವಿಧಾಮ, ನೈಸರ್ಗಿಕವಾಗಿ ಗಾಯಗೊಂಡ ವನ್ಯಜೀವಿಗಳಿಗೆ ಚಿಕಿತ್ಸೆ ಕೊಡುವ ಪ್ರಕ್ರಿಯೆ ಹೆಚ್ಚಾಗಿದೆ. ಹಾಗಾಗಿ, ವನ್ಯಜೀವಿಗಳು ನೈಸರ್ಗಿಕ ಕಾರಣಗಳಿಂದ ಗಾಯಗೊಂಡರೆ ಅವುಗಳಿಗೆ ಚಿಕಿತ್ಸೆ ಕೊಡುವ ಕಾರ್ಯವಿಧಾನವನ್ನು ಮುಂದುವರಿಸಬಾರದು. ಇದರಿಂದ ವನ್ಯಜೀವಿ ಸಂರಕ್ಷಣೆಗೆ ಹೆಚ್ಚಿನ ಅನುಕೂಲಕರವಾಗಲಿದೆ. ಅಲ್ಲದೆ, ಜನರ ಪ್ರಾಣ ಹಾನಿ ಮತ್ತು ಮಾರಣಾಂತಿಕ ಗಾಯಗಳಾವುದುನ್ನು ಕೂಡ ತಡೆಯಬಹುದು ಎಂದು ವಿನಂತಿ ಮಾಡಿದ್ದಾರೆ.