ಕೆಲ ಪಕ್ಷಗಳು ಸೇನೆಯನ್ನು ಮುಂದಿಟ್ಟುಕೊಂಡು ರಾಜಕೀಯ ಲಾಭ ಮಾಡಿಕೊಳ್ಳುತ್ತಿವೆ: ಚುನಾವಣೆ ಆಯೋಗಕ್ಕೆ ನಿವೃತ್ತ ಸೇನಾಧಿಕಾರಿ ಪತ್ರ

ನವದೆಹಲಿ: ಪುಲ್ವಾಮಾ ದಾಳಿ, ಬಾಲಾಕೋಟ್​ ಮೇಲಿನ ಭಾರತದ ದಾಳಿ ಮತ್ತು ಅಭಿನಂದನ್​ ವರ್ದಮಾನ್​ ಅವರ ಇಡೀ ಪ್ರಹಸನವನ್ನು ಯಾವುದೇ ಪಕ್ಷಗಳು ರಾಜಕೀಯಕ್ಕೆ ಬಳಸಿಕೊಳ್ಳುವುದನ್ನು ತಡೆಯುವಂತೆ ಕೋರಿ ನೌಕಾ ಪಡೆಯ ನಿವೃತ್ತ ಮುಖ್ಯಸ್ಥ ಅಡ್ಮಿರಲ್​ ಎಲ್​ ರಾಮ್​ದಾಸ್​ ಅವರು ಭಾರತೀಯ ಚುನಾವಣೆ ಆಯೋಗಕ್ಕೆ ಪತ್ರ ಬರೆದಿದ್ದು, ಈ ಸಂಬಂಧ ಕೂಡಲೇ ಮಧ್ಯಪ್ರವೇಶ ಮಾಡುವಂತೆ ಅವರು ಆಯುಕ್ತರನ್ನು ಕೋರಿದ್ದಾರೆ.

ಭಾರತೀಯ ಚುನಾವಣೆ ಆಯೋಗದ ಆಯುಕ್ತ ಸುನಿಲ್​ ಅರೋರಾ ಅವರಿಗೆ ಎರಡು ಪುಟಗಳ ಪತ್ರ ಬರೆದಿರುವ ರಾಮ್​ದಾಸ್​, ಭಯೋತ್ಪಾದನಾ ದಾಳಿ, ಸೇನೆಯ ಕಾರ್ಯಾಚರಣೆ, ಅಭಿನಂದನ್​ ಅವರ ಪ್ರಕರಣ ರಾಜಕೀಯಕ್ಕೆ ಬಳಕೆಯಾಗುತ್ತಿರುವ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.

ಭಾರತದಲ್ಲಿ ಇನ್ನು ಕೆಲವೇ ದಿನಗಳಲ್ಲಿ ಚುನಾವಣೆ ಘೋಷಣೆಯಾಗುವುದಿದೆ. ಇಂಥ ಸಂದರ್ಭದಲ್ಲಿ ಸೇನೆಯ ವಿಚಾರಗಳನ್ನೆತ್ತಿಕೊಂಡು, ಸೇನಾ ಕಾರ್ಯಾಚರಣೆಗಳನ್ನು ಮುಂದಿಟ್ಟುಕೊಂಡು ದೇಶಪ್ರೇಮ, ವೀರತ್ವದ ಸಂದೇಶಗಳನ್ನು ಜನರಿಗೆ ತಲುಪಿಸಿ ರಾಜಕೀಯ ಪ್ರಭಾವ ಬೀರುವುದನ್ನು ಚುನಾವಣೆ ಆಯೋಗ ತಡೆಯುವುದು ಅತ್ಯಂತ ಅಗತ್ಯ,” ಎಂದು ಅವರು ಒತ್ತಾಯಿಸಿದ್ದಾರೆ.

ಸೇನೆಯು ಸ್ವಾಭಿಮಾನ ಹೊಂದಿದೆ. ಅದರ ತತ್ತ್ವಗಳು ಮತ್ತು ಕಾರ್ಯವಿಧಾನ ಎಂದಿಗೂ ಜಾತ್ಯತೀತ ಮತ್ತು ರಾಜಕೀಯದಿಂದ ಹೊರತಾದದ್ದು ಎಂದು ತಮ್ಮ ಪತ್ರದಲ್ಲಿ ಮನವರಿಕೆ ಮಾಡಿದ್ದಾರೆ.

“ಭಾರತದ ಜವಾಬ್ದಾರಿಯುತ ನಾಗರಿಕನಾಗಿ ಮತ್ತು ಸೇನೆಯ ನಿವೃತ್ತ ಅಧಿಕಾರಿ ಎಂಬ ಹೆಮ್ಮೆಯಿಂದ ಈ ಸನ್ನಿವೇಶದ ಕೆಲವೊಂದು ವಿಷಯಗಳನ್ನು ಹಂಚಿಕೊಳ್ಳಬಯಸುತ್ತೇನೆ. ದೇಶದ ಕೆಲ ರಾಜಕೀಯ ಪಕ್ಷಗಳು ಸೇನೆಯ ಚಿತ್ರಗಳನ್ನು, ಸಮವಸ್ತ್ರಗಳನ್ನು ಮುಂದಿಟ್ಟುಕೊಂಡು ಅವುಗಳನ್ನು ಬಹಿರಂಗವಾಗಿ ಪ್ರದರ್ಶಿಸುತ್ತಾ, ಸಮಾವೇಶಗಳಲ್ಲಿ ಅವುಗಳನ್ನು ಪ್ರಸ್ತಾಪಿಸುತ್ತಾ, ಮಾಧ್ಯಮಗಳಲ್ಲಿ ಬಿಂಬಿಸುತ್ತಾ ತಮ್ಮ ಅಜೆಂಡಾವನ್ನು ಜನರಿಗೆ ತಲುಪಿಸಿ ರಾಜಕೀಯ ಲಾಭ ಮಾಡಿಕೊಳ್ಳಲು ಪ್ರಯತ್ನಿಸುತ್ತಿವೆ. ಇದು ನನ್ನಲ್ಲಿ ಆತಂಕ, ನಿರಾಸೆ ಉಂಟು ಮಾಡಿದೆ. ಈ ಪ್ರವೃತ್ತಿಯನ್ನು ಚುನಾವಣೆ ಆಯೋಗ ತಡೆಯಬೇಕು,” ಎಂದು ಅವರು ಮನವಿ ಮಾಡಿದ್ದಾರೆ.