ಹಳ್ಳಿಗಳಲ್ಲಿ ಅಕ್ರಮ ಮದ್ಯ ಮಾರಾಟ ತಡೆಯಿರಿ

2 Min Read
ಹಳ್ಳಿಗಳಲ್ಲಿ ಅಕ್ರಮ ಮದ್ಯ ಮಾರಾಟ ತಡೆಯಿರಿ

ಸಿದ್ದಾಪುರ: ಗ್ರಾಮೀಣ ಪ್ರದೇಶದಲ್ಲಿ ಅಕ್ರಮ ಮದ್ಯ ಮಾರಾಟ ನಡೆಯದಂತೆ ಕ್ರಮ ಕೈಗೊಳ್ಳಬೇಕು. ಮಾರಾಟ ಮಾಡುವವನಿಗೆ ಯಾವ ಅಂಗಡಿಯಿಂದ ಪೂರೈಕೆಯಾಗುತ್ತಿದೆ ಎಂದು ಪತ್ತೆ ಹಚ್ಚಿ ತಹಸೀಲ್ದಾರ್​ಗೆ ದೂರು ನೀಡಬೇಕು. ಯಾರು ಪೂರೈಕೆ ಮಾಡುತ್ತಾರೋ ಅಂಥವರ ಅಂಗಡಿಯ ಪರವಾನಗಿ ರದ್ದುಗೊಳಿಸಲು ಕ್ರಮಕೈಗೊಳ್ಳಬೇಕು ಎಂದು ಅಬಕಾರಿ ಅಧಿಕಾರಿಗಳಿಗೆ ಶಾಸಕ ಭೀಮಣ್ಣ ನಾಯ್ಕ ಸೂಚನೆ ನೀಡಿದರು.

ಸ್ಥಳೀಯ ತಾಲೂಕು ಪಂಚಾಯಿತಿಯಲ್ಲಿ ಸೋಮವಾರ ಜರುಗಿದ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ರಾಜ್ಯಾದ್ಯಂತ ಅಡಕೆ ಬೆಳೆಯುವ ಪ್ರದೇಶ ವರ್ಷದಿಂದ ವರ್ಷಕ್ಕೆ ಹೆಚ್ಚಿದಂತೆ ಸಿದ್ದಾಪುರ ತಾಲೂಕಿನಲ್ಲಿಯೂ ಹೆಚ್ಚುತ್ತಿದೆ. ಮುದೊಂದು ದಿನ ಅಡಕೆ ದರ ಪಾತಾಳಕ್ಕೆ ಕುಸಿದರೂ ಆಶ್ಚರ್ಯ ಪಡಬೇಕಾಗಿಲ್ಲ. ಆದ್ದರಿಂದ ತೋಟಗಾರಿಕೆ ಇಲಾಖೆಯವರು ರೈತರಿಗೆ ವಿವಿಧ ಉಪಬೆಳೆಗಳಾದ ಕಾಳುಮೆಣಸು, ಬಾಳೆ, ಕಾಫಿ, ಕೋಕೋ, ವೆನಿಲ್ಲಾ, ಲವಂಗ, ಶ್ರೀಗಂಧ ಮತ್ತಿತರ ಬೆಳೆಗಳನ್ನು ಬೆಳೆಯಲು ಮಾಹಿತಿ ಹಾಗೂ ಮಾರ್ಗದರ್ಶನ ನೀಡಬೇಕು ಎಂದು ಸೂಚಿಸಿದರು.

ಜಿಪಂ ವ್ಯಾಪ್ತಿಯ ರಸ್ತೆಗಳಲ್ಲಿ ನೀರು ಹರಿಯದಂತೆ ನೋಡಿಕೊಳ್ಳಬೇಕು. ನಾನು ಮುಖ್ಯರಸ್ತೆಯಲ್ಲಿ ಓಡಾಡುವ ಶಾಸಕನಲ್ಲ. ನಾನು ನಿಮ್ಮ ಸುಪರ್​ವೈಸರ್. ಎಲ್ಲೆಲ್ಲಿ ಏನಾಗಿದೆ ಎಂದು ನೋಡುತ್ತಿರುತ್ತೇನೆ. ಅದರಂತೆ ಲೋಕೋಪಯೋಗಿ ಇಲಾಖೆ ರಸ್ತೆಗಳಲ್ಲಿ ಚರಂಡಿ ಅವ್ಯವಸ್ಥೆಯಿಂದ ಎಲ್ಲಿಯಾದರೂ ಮಳೆಯ ನೀರು ರಸ್ತೆ ಮೇಲೆ ಹರಿದರೆ ಸಾರ್ವಜನಿಕರಿಗೆ ನೀವೇ ಉತ್ತರ ನೀಡಬೇಕು ಎಂದು ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಶಾಲೆ, ಅಂಗನವಾಡಿ ಸೇರಿ ಯಾವುದೇ ಸಾರ್ವಜನಿಕ ಸ್ಥಳದಲ್ಲಿ ಅಪಾಯದಲ್ಲಿರುವ ಮರಗಳನ್ನು ತೆರವುಗೊಳಿಸಿ ಅನುಕೂಲ ಮಾಡಿಕೊಡಬೇಕು ಎಂದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.

ಸರ್ಕಾರದ ಗ್ಯಾರಂಟಿ ಯೋಜನೆಯ ವಂಚಿತರಿದ್ದರೆ ಅಂಥವರನ್ನು ಗುರುತಿಸಿ ಯೋಜನೆಯನ್ನು ತಲುಪಿಸುವ ಜವಾಬ್ದಾರಿ ಇಲಾಖೆ ಅಧಿಕಾರಿಗಳದ್ದಾಗಿದೆ ಎಂದು ಶಾಸಕರು ತಿಳಿಸಿದರು. ವಿವಿಧ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು. ತಾಪಂ ಆಡಳಿತಾಧಿಕಾರಿ ಪಿ.ಬಸವರಾಜ, ತಹಸೀಲ್ದಾರ್ ಎಂ.ಆರ್. ಕುಲಕರ್ಣಿ, ತಾಪಂ ಇಒ ದೇವರಾಜ ಉಪಸ್ಥಿತರಿದ್ದರು.

ಅಡಕೆಯೊಂದಿಗೆ ವೆನಿಲ್ಲಾ ಬೆಳೆ ಸೇರಿ ವಿವಿಧ ಬೆಳೆ ಬೆಳೆಯಲು ರೈತರಿಗೆ ಮಾಹಿತಿ ನೀಡಬೇಕು. ನಾನು ಹಲವು ವರ್ಷಗಳಿಂದ ವೆನಿಲ್ಲಾ ಬೆಳೆಯುತ್ತಿದ್ದೇನೆ. ಉತ್ತಮ ಆದಾಯ ಇದೆ. ತೋಟಗಾರಿಕೆ ಇಲಾಖೆಯಲ್ಲಿ ಬರುವ ಎಲ್ಲ ಬೆಳೆಗಳ ಸಮಗ್ರ ಮಾಹಿತಿಯನ್ನು ರೈತರಿಗೆ ನೀಡುವ ಕೆಲಸವನ್ನು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಪ್ರಾಮಾಣಿಕವಾಗಿ ಮಾಡಬೇಕು.

| ಭೀಮಣ್ಣ ನಾಯ್ಕ ಶಾಸಕ, ಶಿರಸಿ-ಸಿದ್ದಾಪುರ

See also  ಸರ್ಕಾರ ಕಚೇರಿಗಳಿಗೆ ಸ್ವಂತ ಕಟ್ಟಡ ಬಳಸಿ
Share This Article