ಬೈಲೂರು ಕಲ್ಲು ಕ್ವಾರಿಗೆ ದಾಳಿ

<<ಇಬ್ಬರ ಬಂಧನ, ಅಪಾರ ಪ್ರಮಾಣ ಸ್ಫೋಟಕ ವಶ>>

ವಿಜಯವಾಣಿ ಸುದ್ದಿಜಾಲ ಕಾರ್ಕಳ
ಬೈಲೂರು ಹೈಸ್ಕೂಲ್ ಪರಿಸರದಲ್ಲಿ ಕಾರ್ಯಾಚರಿಸುತ್ತಿರುವ ನೀರೆ ರಾಮಕೃಷ್ಣ ಶೆಟ್ಟಿ ಎಂಬುವರ ಮಹಾಗಣಪತಿ ಸ್ಟೋನ್ ಕ್ರಶರ್‌ಗೆ ಬುಧವಾರ ಸಾಯಂಕಾಲ ಕಾರ್ಕಳ ಎಎಸ್‌ಪಿ ಕೃಷ್ಣಕಾಂತ್ ನೇತೃತ್ವದ ಪೊಲೀಸರು ದಾಳಿ ನಡೆಸಿ ಅಪಾರ ಪ್ರಮಾಣದ ಸ್ಫೋಟಕ ವಶಪಡಿಸಿದ್ದಾರೆ.
ನವಾಜ್ ಹಾಗೂ ಕೇರಳದ ಬೈಜು ಎಂಬುವರನ್ನು ಬಂಧಿಸಿದ್ದು, ತಮಿಳುನಾಡು ಮೂಲದ ಸುರೇಶ್, ಪರಿಕೇಶ್ ಪರಾರಿಯಾಗಿದ್ದಾರೆ. ಇವರೆಲ್ಲರೂ ಸೇರಿಕೊಂಡು ಕ್ವಾರಿಯಲ್ಲಿ ಸ್ಫೋಟಕಕ್ಕೆ ಸಿದ್ಧತೆ ನಡೆಸುತ್ತಿದ್ದರು. ಸ್ಥಳದಲ್ಲಿದ್ದ 7 ಲಾರಿಗಳು, ವಯರ್, 106 ಜಿಲೆಟಿನ್ ಕಡ್ಡಿ, 37 ಎಲೆಕ್ಟ್ರಾನಿಕ್ ಡಿಟೊನೆಟರ್‌ಗಳನ್ನು ಪೊಲೀಸರು ವಶಪಡಿಸಿದ್ದಾರೆ.
ಕ್ವಾರಿ ಮಾಲೀಕ ಹಾಗೂ ಗುತ್ತಿಗೆಯಲ್ಲಿ ಕ್ವಾರಿ ನಡೆಸುತ್ತಿದ್ದ ಕೇರಳ ಮೂಲದ ಜುನೇದ್ ಸಹಿತ ಒಟ್ಟು ಆರು ಮಂದಿ ವಿರುದ್ಧ ಕಾರ್ಕಳ ನಗರ ಠಾಣೆಯಲ್ಲಿ ಕೇಸು ದಾಖಲಾಗಿದೆ. ಪೊಲೀಸ್ ವೃತ್ತ ನಿರೀಕ್ಷಕ ಹಾಲಮೂರ್ತಿ, ನಗರ ಠಾಣಾಧಿಕಾರಿ ನಂಜಾ ನಾಯಕ್ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ.

ಪ್ರತಿನಿತ್ಯ ಸ್ಫೋಟ: ಕ್ವಾರಿಯಲ್ಲಿ ಕಾರ್ಮಿಕರು ಕೆಲಸ ಮುಗಿಸಿ ಹೊರತೆರಳಿದ ಬಳಿಕ ಪ್ರತಿದಿನ 6ರ ವೇಳೆಗೆ ಭಾರಿ ಪ್ರಮಾಣದಲ್ಲಿ ಸ್ಫೋಟಕಗಳನ್ನು ಉಪಯೋಗಿಸಿ ಕರಿಕಲ್ಲನ್ನು ಒಡೆಯಲಾಗುತ್ತಿತ್ತು. ಇದರ ಸದ್ದು ಹಲವು ಕಿ.ಮೀ ದೂರದವರೆಗೆ ಕೇಳುತ್ತಿದ್ದು, ಭೂಕಂಪನದ ಅನುಭವವಾಗುತ್ತಿತ್ತು ಎಂದು ಸಾರ್ವಜನಿಕರು ದೂರಿದ್ದರು.