ಕಲ್ಲಿನ ಕ್ವಾರಿ, ಕ್ರಷರ್ ಮಶಿನ್ ಬಂದ್

ವಿಜಯವಾಣಿ ಸುದ್ದಿಜಾಲ ಬಂಕಾಪುರ

ಸಮೀಪದ ಶಿಡ್ಲಾಪುರ ಗ್ರಾಮದ ಹತ್ತಿರದಲ್ಲಿದ್ದ ಕ್ರಷರ್ ಮಶಿನ್ ಮತ್ತು ಕಲ್ಲಿನ ಕ್ವಾರಿಯನ್ನು ಬಂಕಾಪುರ ಕಂದಾಯ ಇಲಾಖೆ ಅಧಿಕಾರಿಗಳು ಗುರುವಾರ ಸಂಜೆ ಬಂದ್ ಮಾಡಿಸಿದ್ದಾರೆ.

ಉಪವಿಭಾಗಾಧಿಕಾರಿ ಆದೇಶದ ಮೇರೆಗೆ ಉಪತಹಸೀಲ್ದಾರ್ ಎಂ.ವಿ. ಚಿಪ್ಪಳಗಾಂವಿ, ಕಂದಾಯ ನಿರೀಕ್ಷಕ ಎಂ.ಆರ್. ನಾಯಕ ಹಾಗೂ ಸಿಬ್ಬಂದಿ ಗ್ರಾಮಕ್ಕೆ ಭೇಟಿ ನೀಡಿ, ಕ್ವಾರಿಯಲ್ಲಿನ ಸ್ಪೋಟದಿಂದ ಹಾನಿಗೊಳಗಾದ ಮನೆಗಳನ್ನು ಪರಿಶೀಲಿಸಿದರು.

ನಂತರ ಕಲ್ಲಿನ ಕ್ವಾರಿಗೆ ಹೋಗಿ ಪರಿಶೀಲನೆ ನಡೆಸಿದ ಅಧಿಕಾರಿಗಳು, ಕ್ವಾರಿಯ ಸ್ಫೋಟ ಮತ್ತು ಕ್ರಷರ್ ಮಶೀನ್ ಸ್ಥಗಿತಗೊಳಿಸಿದ್ದಾರೆ. ಮೇಲಧಿಕಾರಿಗಳು ಸೂಚನೆ ನೀಡುವವರೆಗೂ ಕ್ವಾರಿಯಲ್ಲಿ ಯಾವುದೇ ಗಣಿಗಾರಿಕೆ ಚಟುವಟಿಕೆ ನಡೆಸದಂತೆ ಸೂಚಿಸಿ, ವಿದ್ಯುತ್ ಸಂಪರ್ಕ ಸೀಜ್ ಮಾಡಲಾಗಿದೆ ಎಂದು ಕಂದಾಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಬಂಕಾಪುರ ಹೋಬಳಿಯ ಹುನಗುಂದ ಕಂದಾಯ ವ್ಯಾಪ್ತಿಯ ಶಿಡ್ಲಾಪುರ ಗ್ರಾಮದ ಪಕ್ಕದ ಕಲ್ಲಿನ ಕ್ವಾರಿಯಲ್ಲಿ ಸುಮಾರು ವರ್ಷಗಳಿಂದ ಸ್ಫೋಟ ನಡೆಸಲಾಗುತ್ತಿತ್ತು. ಇದರಿಂದ ಶಿಡ್ಲಾಪುರ ಗ್ರಾಮದ ಪ್ಲಾಟ್​ನ ಆಶ್ರಯ ಯೋಜನೆ ಮನೆಗಳ ಗೋಡೆಗಳು ಬಿರುಕು ಬಿಟ್ಟಿವೆ. ಅಲ್ಲದೆ, ಕ್ರಷರ್ ಮಶೀನ್​ನಿಂದ ಹೊರಡುವ ಬಾರಿ ಪ್ರಮಾಣದ ಧೂಳಿನಿಂದ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಆದ್ದರಿಂದ ಈ ಕ್ವಾರಿ ಶಾಶ್ವತವಾಗಿ ಸ್ಥಗಿತಗೊಳಿಸಬೇಕು ಎಂದು ಸ್ಥಳೀಯರು ಜಿಲ್ಲಾಧಿಕಾರಿ ಮತ್ತು ವಿಭಾಗಾಧಿಕಾರಿಗೆ ಲಿಖಿತ ಮನವಿ ಸಲ್ಲಿಸಿದ್ದರು.

Leave a Reply

Your email address will not be published. Required fields are marked *