ಎಗ್ಗಿಲ್ಲದ ಅಕ್ರಮ ಕಲ್ಲು ಗಣಿಗಾರಿಕೆ

ಅವಿನ್ ಶೆಟ್ಟಿ, ಉಡುಪಿ

ಜಿಲ್ಲೆಯ ಕುಂದಾಪುರ, ಕಾರ್ಕಳ ವ್ಯಾಪ್ತಿಯಲ್ಲಿ ಸ್ಫೋಟಕಗಳನ್ನು ಬಳಸಿ ಕಲ್ಲು ಅಕ್ರಮ ಗಣಿಗಾರಿಕೆ ಎಗ್ಗಿಲ್ಲದೆ ನಡೆಯುತ್ತಿದ್ದು, ಜನಜೀವನ ಮತ್ತು ಪರಿಸರದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ.
ಸಮೃದ್ಧ ಕಪ್ಪು ಶಿಲೆಯನ್ನು ಒಡಲಲ್ಲಿಟ್ಟುಕೊಂಡಿರುವ ಕರಾವಳಿ ಜಿಲ್ಲೆಗಳಲ್ಲಿ ಅಕ್ರಮ ಗಣಿಗಾರಿಕೆ ಇಂದು, ನಿನ್ನೆಯದಲ್ಲ. ಹಲವು ವರ್ಷಗಳಿಂದ ಕೆಲವು ಜನಪ್ರತಿನಿಧಿಗಳು, ಅಧಿಕಾರಿ ವರ್ಗದ ಕೃಪಾಕಟಾಕ್ಷದಲ್ಲಿ ಬೆಳೆದ ದಂಧೆ ಇಂದು ಬೃಹತ್ತಾಗಿ ಬೆಳೆದಿದೆ. ಜಿಲ್ಲೆಯ ಕೆಲವು ಕಲ್ಲು ಕ್ವಾರಿಗಳಿಗೆ ಇತ್ತೀಚೆಗೆ ದಾಳಿ ನಡೆಸಿದ ಪೊಲೀಸರು ಅಪಾರ ಪ್ರಮಾಣದ ಸ್ಫೋಟಕ, ಪರಿಕರ ಪತ್ತೆಹಚ್ಚಿದ್ದಾರೆ.

ಅಕ್ರಮಗಳು ಹೇಗೆ ನಡೆಯುತ್ತದೆ?: ಕೆಲವರು ಸರ್ಕಾರದ ನಿಯಮಾನುಸಾರವೇ ಗಣಿಗಾರಿಕೆ ನಡೆಸಿದರೂ, ಇನ್ನುಳಿದವರು ಪರವಾನಗಿಗಿಂತ ಹೆಚ್ಚಿನ ಪ್ರದೇಶವನ್ನು ವಿಸ್ತರಣೆ ಮಾಡಿಕೊಂಡು ಗಣಿಗಾರಿಕೆ ನಡೆಸುತ್ತಿದ್ದಾರೆ. ಗೋಮಾಳ, ಸರ್ಕಾರಿ, ಅರಣ್ಯ ಭೂಮಿಗಳಲ್ಲೂ ಅಕ್ರಮ ನಡೆಯುತ್ತಿದೆ. ಸ್ಫೋಟಕಗಳನ್ನು ಬಳಸದೆ ಮಾನವ ಶ್ರಮದಲ್ಲೇ ಕಲ್ಲುಗಳನ್ನು ಒಡೆಯಬೇಕು, ಇಂತಿಷ್ಟು ಆಳಕ್ಕೆ ಮಾತ್ರ ಕಲ್ಲು ತೆಗೆಯಬೇಕು ಎಂಬ ನಿಯಮವಿದ್ದರೂ, ಇವೆಲ್ಲವನ್ನೂ ಉಲ್ಲಂಘಿಸಲಾಗುತ್ತಿದೆ. ಸರ್ಕಾರಕ್ಕೆ ನಿಗದಿತ ರಾಜಸ್ವವೂ ಪಾವತಿಯಾಗುತ್ತಿಲ್ಲ ಎಂದು ಪರಿಸರ ಹೋರಾಟಗಾರರು ಆರೋಪಿಸುತ್ತಾರೆ.

ಎಲ್ಲವೂ ಅಕ್ರಮವಲ್ಲ: ಜಿಲ್ಲೆಯಲ್ಲಿ ನಡೆಯುತ್ತಿರುವ ಎಲ್ಲ ಕಲ್ಲು ಗಣಿಗಾರಿಕೆಗಳು ಅಕ್ರಮವಲ್ಲ. ಕಪ್ಪು ಕಲ್ಲು ಗಣಿಗಾರಿಕೆ ಜಿಲ್ಲೆಯ ಪ್ರಮುಖ ಉದ್ಯಮವಾಗಿ ಬೆಳೆದಿದೆ. ಇಲ್ಲಿನ ಕಪ್ಪು ಕಲ್ಲಿಗೆ ಸಾಕಷ್ಟು ಬೇಡಿಕೆ ಇದೆ. ಹೊರರಾಜ್ಯ ಮತ್ತು ಜಿಲ್ಲೆಯ ಹಲವಾರು ಮಂದಿ ಈ ಉದ್ಯಮದಲ್ಲಿ ಬದುಕು ರೂಪಿಸಿಕೊಂಡಿದ್ದಾರೆ. ಉತ್ತಮ ಆದಾಯ, ಹೆಚ್ಚು ಬೇಡಿಕೆ ಪಡೆದುಕೊಂಡ ನಂತರ ಇತ್ತೀಚೆಗೆ ಈ ಉದ್ಯಮ ಅಕ್ರಮ ದಂಧೆಕೋರರನ್ನು ತನ್ನತ್ತ ಸೆಳೆದುಕೊಂಡಿದೆ. ಜಿಲ್ಲೆಯಲ್ಲಿರುವ ಅಧಿಕೃತ ಕ್ವಾರಿಗಳಿಗಿಂತ ಅಕ್ರಮವೇ ಹೆಚ್ಚು ಎಂಬುದು ಪರಿಸರ ಹೋರಾಟಗಾರರ ಆರೋಪ.

108 ಅನುಮತಿ ಪಡೆದ ಕ್ವಾರಿಗಳು
ಜಿಲ್ಲೆಯಲ್ಲಿ ಅನುಮತಿ ಪಡೆದ ಕಲ್ಲು ಕ್ವಾರಿಗಳು 108 ಮಾತ್ರ. ಅವುಗಳಲ್ಲಿ ಕಾರ್ಕಳದಲ್ಲಿ 50, ಉಡುಪಿ 48, ಕುಂದಾಪುರ 10 ಕ್ವಾರಿಗಳಿವೆ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಅನುಮತಿ ಪಡೆದ ಕ್ವಾರಿಗಳು ನಿಯಮಾನುಸಾರ ನಡೆಯುತ್ತಿದೆಯೇ ಇಲ್ಲವೇ ಎಂದು ಇಲಾಖೆ ಆಗಾಗ ಪರಿಶೀಲನೆ ನಡೆಸುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಿಸಿ ಮುಟ್ಟಿಸಿದ ಪೊಲೀಸ್ ಕಾರ್ಯಾಚರಣೆ: ಕೋಟ ಹಾಗೂ ಶಂಕರನಾರಾಯಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ಅಕ್ರಮ ಗಣಿಗಾರಿಕೆಗೆ ಇತ್ತೀಚೆಗೆ ದಾಳಿ ನಡೆಸಿದ ಪೊಲೀಸರು 8 ಮಂದಿಯನ್ನು ಬಂಧಿಸಿ, 32 ಜಿಲೆಟಿನ್ ಕಡ್ಡಿಗಳನ್ನು ವಶಪಡಿಸಿಕೊಂಡಿದ್ದರು. ಕಾರ್ಕಳ ವ್ಯಾಪ್ತಿಯಲ್ಲಿ ದಾಳಿ ನಡೆಸಿ ಕೆಲವರನ್ನು ಬಂಧಿಸಿ, ಪ್ರಕರಣ ದಾಖಲಿಸಲಾಗಿದೆ. ಕಳೆದ ತಿಂಗಳು ಮರಳು, ಕಪ್ಪು, ಕೆಂಪುಕಲ್ಲು ಸೇರಿದಂತೆ 4 ಪ್ರಕರಣಗಳಲ್ಲಿ ಒಟ್ಟು 15ಕ್ಕೂ ಅಧಿಕ ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಸಾರ್ವಜನಿಕರ ಮಾಹಿತಿ ಮೇರೆಗೆ ಅಕ್ರಮ ಕಲ್ಲು, ಮರಳು ಗಣಿಗಾರಿಕೆ ಮೇಲೆ ದಾಳಿ ನಡೆಸಿ ಪ್ರಕರಣ ದಾಖಲಿಸಿದ್ದೇವೆ. ಅಕ್ರಮ ಗಣಿಗಾರಿಕೆ ಸಂಬಂಧಿಸಿ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದರೆ ಕೂಡಲೇ ಕ್ರಮ ತೆಗೆದುಕೊಳ್ಳಲಾಗುವುದು.
ನಿಶಾ ಜೇಮ್ಸ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಉಡುಪಿ

ಅಕ್ರಮ ಕಲ್ಲು ಗಣಿಗಾರಿಕೆ ಪರಿಸರ ಮತ್ತು ಜನ ಜೀವನದ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಕಾನೂನು, ನಿಯಮಾವಳಿ ಅನುಸಾರ ಗಣಿಗಾರಿಕೆ ನಡೆಯುತ್ತಿಲ್ಲ. ಅಕ್ರಮ ಗಣಿಗಾರಿಕೆಯ ಸಮಗ್ರ ಸ್ವರೂಪವನ್ನು ಈ ಹಿಂದಿನ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗಿತ್ತು.
ಶಶಿಧರ ಶೆಟ್ಟಿ, ಪರಿಸರ ಪರ ಹೋರಾಟಗಾರ

Leave a Reply

Your email address will not be published. Required fields are marked *